ಮಂಗಳೂರು: ಕಾರ್ಮೆಲ್ ಪ್ರೇರಣ್ 2027 ಬೈಬಲ್ ದಿನಚರಿ ಬಿಡುಗಡೆ

ಮಂಗಳೂರು: ಕಾರ್ಮೆಲೈಟ್ ಧರ್ಮಗುರುಗಳ ಧ್ಯಾನವನ ಪ್ರಕಾಶನ ಹೊರತಂದಿರುವ ಕೊಂಕಣಿ ಭಾಷೆಯ ಬೈಬಲ್ ದಿನಚರಿ ಕಾರ್ಮೆಲ್ ಪ್ರೇರಣ್ 2027 ರ 11ನೇ ಆವೃತ್ತಿಯನ್ನು ಅ. 22ರಂದು ಬಿಕರ್ನಕಟ್ಟೆಯ ಶಿಶು ಯೇಸು ಪುಣ್ಯಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಮೆಲೈಟ್ ಧರ್ಮಸಭೆಯ ಧರ್ಮಗುರು ರೆ. ಫಾ. ರಯನ್ ಪಿಂಟೊ, ಒಸಿಡಿ ಅವರು ದಿನಚರಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂತ ಜೋಸೆಫ್ ಮಠದ ಮುಖ್ಯಸ್ಥ ರೆ. ಫಾ. ಮೆಲ್ವಿನ್ ಡಿಕುನ್ಹಾ ಹಾಗೂ ರೆ. ಫಾ. ಸ್ಟ್ಯಾನಿ ಲಿಸ್ಟನ್ ಪಿಂಟೊ, ಒಸಿಡಿ ಉಪಸ್ಥಿತರಿದ್ದರು.

ದಿನಚರಿಯ ಪರಿಚಯ ಮಾಡಿಕೊಟ್ಟ ಶಿಶು ಯೇಸು ಪುಣ್ಯಕ್ಷೇತ್ರದ ನಿರ್ದೇಶಕ ರೆ. ಫಾ. ಸ್ಟಿಫನ್ ಪಿರೇರಾ, ಒಸಿಡಿ ಅವರು, ದೈನಂದಿನ ಬೈಬಲ್ ವಾಚನ, ಆಧ್ಯಾತ್ಮಿಕ ಚಿಂತನೆಗಳು, ಸಂತರ ಜೀವನ ಚರಿತ್ರೆಗಳು, ಪ್ರಾರ್ಥನೆಗಳು ಸೇರಿದಂತೆ ಹಲವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಒಳಗೊಂಡಿರುವ ಈ ದಿನಚರಿಯು ಭಕ್ತರ ಆಧ್ಯಾತ್ಮಿಕ ಜೀವನವನ್ನು ಪೋಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಈ ಪ್ರಕಟಣೆಯು ಕೇವಲ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿರದೆ, ದೃಷ್ಟಿದೋಷ ಹೊಂದಿರುವ ಪೋಷಕರ ಸುಮಾರು 100 ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ವಿಷನ್ ಫಾರ್ ಫ್ಯೂಚರ್ ಕಾರ್ಯಕ್ರಮಕ್ಕೂ ಬೆಂಬಲ ನೀಡುತ್ತಿದೆ ಎಂದು ಅವರು ತಿಳಿಸಿದರು. ಓದುಗರು ಹಾಗೂ ಹಿತೈಷಿಗಳಿಂದ ದೊರೆಯುತ್ತಿರುವ ಪ್ರೋತ್ಸಾಹ ಮತ್ತು ಉದಾರ ನೆರವು ಈ ಮಕ್ಕಳ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು ಸಹಕಾರಿಯಾಗಿದೆ ಎಂದರು.

ಕಾರ್ಮೆಲೈಟ್ ಧರ್ಮಗುರುಗಳ ನಿರ್ವಹಣೆಯಲ್ಲಿರುವ ಧ್ಯಾನವನ ಪ್ರಕಾಶನವು ಇಂಗ್ಲಿಷ್‌ನಲ್ಲಿ ಕಾರ್ಮೆಲ್ ಲೈಟ್ ಹಾಗೂ ಕನ್ನಡದಲ್ಲಿ ಕಾರ್ಮೆಲ್ ಧ್ಯಾನ ಎಂಬ ಹೆಸರಿನಲ್ಲಿ ಇದೇ ಮಾದರಿಯ ಬೈಬಲ್ ದಿನಚರಿಗಳನ್ನು ಪ್ರಕಟಿಸುತ್ತಿದೆ.

Leave a Reply

Your email address will not be published. Required fields are marked *