ಬಂಟ್ವಾಳ: ಲೊರೆಟ್ಟೊ ಸೆಂಟ್ರಲ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವು ಶಾಲಾ ಬ್ಯಾಂಡ್ನೊಂದಿಗೆ ಗಣ್ಯರ ಆಗಮನ, ಪ್ರಾರ್ಥನಾ ನೃತ್ಯ ಹಾಗೂ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಂಡಿತು.



ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್ನ ಧರ್ಮಗುರು ಹಾಗೂ ಸಂಸ್ಥೆಯ ಮಾಜಿ ಸಂಚಾಲಕರಾದ ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತಾ, ಸಂಚಾಲಕರಾದ ವಂದನೀಯ ಸ್ವಾಮಿ ಜೇಮ್ಸ್ ಡಿಸೋಜ, ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಜೇಸನ್ ವಿಜಯ್ ಮೊನಿಸ್, ಲೊರೆಟ್ಟೊ ಅನುದಾನಿತ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಭಗಿನಿ ಇಡಲಿನ್ ರೋಡ್ರಿಗಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಐಸಾಕ್ ವಾಸ್ ಹಾಗೂ ಶಾಲಾ ಪೋಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಿಚರ್ಡ್ ಮಿರಾಂದ ಉಪಸ್ಥಿತರಿದ್ದರು.
ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತಾ ತಮ್ಮ ಭಾಷಣದಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಅವರಲ್ಲಿರುವ ವೈಯಕ್ತಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿಹೇಳಿದರು. ಅಂಕಗಳ ಹಿಂದೆ ಓಡುವಂತೆ ಮಕ್ಕಳ ಮೇಲೆ ಒತ್ತಡ ಹೇರದೆ, ಅವರ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಅವಕಾಶಗಳನ್ನು ಕಲ್ಪಿಸುವಂತೆ ಪೋಷಕರಿಗೆ ಸಲಹೆ ನೀಡಿದರು.
ವಂದನೀಯ ಸ್ವಾಮಿ ಜೇಮ್ಸ್ ಡಿಸೋಜ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಂಸ್ಥೆಯು ಒದಗಿಸುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಶಾಲೆಯ ದಾನಿಗಳನ್ನು ಸನ್ಮಾನಿಸಿ, ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ನೃತ್ಯ, ಸಂಗೀತ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮವು ಶಾಲಾ ಗೀತೆಯೊಂದಿಗೆ ಮುಕ್ತಾಯಗೊಂಡಿತು.
