ನಮ್ಮ ದೇಶದಲ್ಲಿ ಹೆಣ್ಣನ್ನು ದೇವತೆಗೆ ಸಮಾನವಾಗಿ ಕಾಣುವ ಸಂಸ್ಕೃತಿ ಇದೆ. ಮಗು ಹುಟ್ಟಿದಾಗ “ಮನೆಗೆ ಮಹಾಲಕ್ಷ್ಮಿ ಬಂದಳು” ಎಂದು ಸಂಭ್ರಮಿಸುವವರೂ ಇದ್ದಾರೆ. ಇಂದು ಹೆಣ್ಣುಮಕ್ಕಳು ಕೇವಲ ನಾಲ್ಕು ಗೋಡೆಗಳ ನಡುವೆ ಬಂಧಿಯಾಗದೆ, ಕಚೇರಿ ಮತ್ತು ಸಂಸಾರ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಬೆಳವಣಿಗೆ. ಆದರೆ, ಇಷ್ಟೆಲ್ಲಾ ಪ್ರಗತಿಯ ನಡುವೆಯೂ ನಮ್ಮನ್ನು ಕಾಡುವ ಅತಿದೊಡ್ಡ ಪ್ರಶ್ನೆಯೆಂದರೆ ಅದು “ಮಹಿಳೆಯರ ಸುರಕ್ಷತೆ”.
ದಿನೇ ದಿನೇ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ಮತ್ತು ಭೀಕರ ಅಪರಾಧ ಕೃತ್ಯಗಳು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿವೆ. ಮಹಿಳಾ ಸುರಕ್ಷತೆಗಾಗಿ ಸರ್ಕಾರ ಮತ್ತು ಕಾನೂನು ಕಠಿಣ ನಿಯಮಗಳನ್ನು ರೂಪಿಸಿದ್ದರೂ, ಅಪಹರಣ ಮತ್ತು ಕೊಲೆಗಳಂತಹ ಘಟನೆಗಳು ನಿಂತಿಲ್ಲ. ಈ ಹೇಯ ಕೃತ್ಯಗಳನ್ನು ತಡೆಯಲು ಸರ್ಕಾರ, ಕಾನೂನು ಮಾತ್ರವಲ್ಲದೆ ಸಮಾಜ ಮತ್ತು ಕುಟುಂಬಗಳು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಾದ ಸಮಯ ಈಗ ಬಂದಿದೆ.
ಸೀತೆಯಲ್ಲ, ದುರ್ಗೆಯಾಗಲಿ
ನಮ್ಮ ಸಮಾಜದಲ್ಲಿ ಬಾಲ್ಯದಿಂದಲೇ ಹೆಣ್ಣುಮಕ್ಕಳಿಗೆ ‘ಸಹನಶೀಲತೆ’ಯ ಪಾಠ ಕಲಿಸಲಾಗುತ್ತದೆ. ಸೀತಾಮಾತೆಯ ಉದಾಹರಣೆ ನೀಡಿ, ಎಂತಹ ಕಷ್ಟ ಬಂದರೂ ಸಹಿಸಿಕೊಳ್ಳಬೇಕು ಎಂಬ ಭಾವನೆಯ ಬೀಜವನ್ನು ಬಿತ್ತಲಾಗುತ್ತದೆ. ಇದರಿಂದ ಅವಳು ಶೋಷಣೆಯ ವಿರುದ್ಧ ಧ್ವನಿ ಎತ್ತದೆ ಬಲಹೀನಳಾಗುತ್ತಿದ್ದಾಳೆ. ಆದರೆ ಈಗಿನ ಕಾಲಕ್ಕೆ ಅವಳು ಸೀತೆಯಾಗುವುದಕ್ಕಿಂತ ‘ದುರ್ಗೆ’ಯಾಗುವುದು ಮುಖ್ಯ. ಅನ್ಯಾಯದ ವಿರುದ್ಧ ತಿರುಗಿ ಬೀಳುವ, ಕೆಟ್ಟ ದೃಷ್ಟಿ ಬೀರುವವರಿಗೆ ನೂರು ಬಾರಿ ಯೋಚಿಸುವಂತೆ ಮಾಡುವ ಧೈರ್ಯ ಅವಳಲ್ಲಿ ಬರಬೇಕು. ಹುಡುಗರಂತೆ ಸ್ವತಂತ್ರವಾಗಿ ಬದುಕುವ ಹಕ್ಕು ಪ್ರತಿಯೊಬ್ಬ ಹೆಣ್ಣಿಗೂ ಇದೆ.
ಮಹಿಳೆ ಎಂದಿಗೂ ಅಬಲೆಯಲ್ಲ
ಬಾಲ್ಯದಿಂದಲೇ ಹೆಣ್ಣುಮಕ್ಕಳು ಅಬಲೆಯರು, ಗಂಡುಮಕ್ಕಳು ಬಲಶಾಲಿಗಳು ಎಂಬ ತಪ್ಪು ಕಲ್ಪನೆಯನ್ನು ಪಾಲಕರು ಬೆಳೆಸಬಾರದು. ಯಾರಾದರೂ ಅತ್ತರೆ “ಹೆಣ್ಣುಮಕ್ಕಳ ಹಾಗೆ ಅಳಬೇಡ” ಎನ್ನುವ ಮಾತುಗಳೇ ಅವಳನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಹೆಣ್ಣಿನ ಸಹನಶಕ್ತಿಯೇ ಅವಳ ಅತಿದೊಡ್ಡ ಬಲ. ವೈದ್ಯಕೀಯ ಶಾಸ್ತ್ರದ ಪ್ರಕಾರ, ಮನುಷ್ಯನ ದೇಹದ ಒಂದು ಮೂಳೆ ಮುರಿದರೆ ಆಗುವ ನೋವೇ ಅಸಹನೀಯ. ಆದರೆ, ಹೆಣ್ಣು ಮಗುವಿಗೆ ಜನ್ಮ ನೀಡುವಾಗ (ಹೆರಿಗೆಯ ಸಂದರ್ಭದಲ್ಲಿ) ಅನುಭವಿಸುವ ನೋವು, ದೇಹದ 20 ಮೂಳೆಗಳು ಒಟ್ಟಿಗೆ ಮುರಿದಾಗ ಆಗುವ ನೋವಿಗಿಂತಲೂ ಅಧಿಕವಂತೆ! ಇಂತಹ ಅಪಾರ ಶಕ್ತಿ ಹೊಂದಿರುವ ಮಹಿಳೆಯನ್ನು ‘ಬಲಹೀನಳು’ ಎನ್ನುವವರು ನಿಜಕ್ಕೂ ಮೂರ್ಖರು. ಅವಳಿಗೆ ಬೇಕಿರುವುದು ತನ್ನ ಶಕ್ತಿಯ ಅರಿವು ಮೂಡಿಸುವ ಬೆಂಬಲ ಮಾತ್ರ.
ಸ್ವತಂತ್ರ ಮತ್ತು ಸ್ವಯಂ ರಕ್ಷಣೆ
ಪಾಲಕರೇ, ನಿಮ್ಮ ಮಗಳಿಗೆ ಹಾರಾಡಲು ರೆಕ್ಕೆಗಳನ್ನು ನೀಡಿ, ಸಮಾಜಕ್ಕೆ ಹೆದರಿ ಅವುಗಳನ್ನು ಕತ್ತರಿಸಬೇಡಿ. ಅವಳ ಕನಸುಗಳಿಗೆ ನೀರೆರೆಯಿರಿ. ಸುರಕ್ಷತೆಯ ಹೆಸರಿನಲ್ಲಿ ಅವಳನ್ನು ಮನೆಯೊಳಗೆ ಬಂಧಿಸಿಡುವುದು ಪರಿಹಾರವಲ್ಲ. ಬದಲಾಗಿ, ಅವಳಿಗೆ ಬಾಲ್ಯದಲ್ಲೇ ‘ಕರಾಟೆ’ಯಂತಹ ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸಿ. ಅಂಕಿಅಂಶಗಳ ಪ್ರಕಾರ, ಶೇ. 60 ರಷ್ಟು ದೌರ್ಜನ್ಯಗಳು ಪರಿಚಿತರಿಂದಲೇ ಅಥವಾ ಮನೆಯ ವಾತಾವರಣದಲ್ಲೇ ನಡೆಯುತ್ತವೆ ಎಂಬುದು ಕಟು ಸತ್ಯ. ಹಾಗಾಗಿ, ಅವಳು ಬೇರೆಯವರ ಮೇಲೆ ಅವಲಂಬಿತಳಾಗದೆ ತನ್ನನ್ನು ತಾನು ರಕ್ಷಿಸಿಕೊಳ್ಳುವಂತೆ ಸಬಲಗೊಳಿಸಿ.
ಗಂಡುಮಕ್ಕಳಿಗೆ ನೀಡಬೇಕಾದ ಸಂಸ್ಕಾರ: ಸುಭದ್ರ ಸಮಾಜಕ್ಕೆ ಮುನ್ನುಡಿ
ಮಹಿಳಾ ರಕ್ಷಣೆ ಎಂಬುದು ಕೇವಲ ಕಾನೂನು ಅಥವಾ ಪೊಲೀಸ್ ಇಲಾಖೆಯ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯ. ಈ ನಿಟ್ಟಿನಲ್ಲಿ ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಗಂಡುಮಕ್ಕಳಿಗೆ ಬಾಲ್ಯದಲ್ಲೇ ಹೆಣ್ಣನ್ನು ಗೌರವಿಸುವ ಉದಾತ್ತ ಸಂಸ್ಕಾರವನ್ನು ನೀಡಬೇಕು. ಮನೆಯಲ್ಲಿ ತಾಯಿ ಮತ್ತು ಅಕ್ಕ-ತಂಗಿಯರನ್ನು ಹೇಗೆ ಪ್ರೀತಿ-ಗೌರವದಿಂದ ಕಾಣುತ್ತೇವೆಯೋ, ಹೊರಗಿನ ಪ್ರತಿಯೊಬ್ಬ ಮಹಿಳೆಯನ್ನೂ ಅದೇ ದೃಷ್ಟಿಕೋನದಿಂದ ನೋಡುವ ಗುಣವನ್ನು ಬೆಳೆಸಬೇಕು.
ಪರಸ್ತ್ರೀಯನ್ನು ತಾಯಿಯಂತೆ ಗೌರವಿಸುವ ಮತ್ತು ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ರಕ್ಷಣೆಯಾಗಿ ನಿಲ್ಲುವ ಧೈರ್ಯ ಹಾಗೂ ವಿವೇಚನೆಯನ್ನು ಅವರಿಗೆ ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ. ಮಕ್ಕಳು ಎಂಬ ಎಳೆಯ ಸಸಿಗೆ ‘ಸಂಸ್ಕಾರ’ ಎಂಬ ನೀರುಣಿಸಿ ಬೆಳೆಸಿದರೆ, ಮುಂದೆ ಅವರು ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವ ಹೆಮ್ಮರವಾಗಿ ಬೆಳೆಯುತ್ತಾರೆ. ಗಂಡುಮಕ್ಕಳು ಪಡೆಯುವ ಉತ್ತಮ ಸಂಸ್ಕಾರವೇ ಹೆಣ್ಣುಮಕ್ಕಳ ನಿಜವಾದ ಸುರಕ್ಷಾ ಕವಚ.
ನಿಷ್ಕರ್ಷ: ಸ್ತ್ರೀ ಶಕ್ತಿ ಮತ್ತು ಸಮಾಜದ ಹೊಣೆಗಾರಿಕೆ
ಸಾರಾಂಶದಲ್ಲಿ ಹೇಳುವುದಾದರೆ, ಸ್ತ್ರೀ ಎಂದರೆ ಕೇವಲ ಸಹನೆಯ ಸಂಕೇತವಾಗಿರುವ ಸೀತೆಯಷ್ಟೇ ಅಲ್ಲ, ಅನ್ಯಾಯದ ವಿರುದ್ಧ ಸಿಡಿದೆದ್ದ ದುರ್ಗೆಯೂ ಹೌದು. ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯ ಸುರಕ್ಷತೆಯು ಕೇವಲ ಕಾನೂನು ಅಥವಾ ಸರ್ಕಾರದ ಜವಾಬ್ದಾರಿಯಾಗಿ ಉಳಿಯಬಾರದು. ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಹೊಣೆಯಾಗಬೇಕು. ಮಹಿಳೆಯರಿಗೆ ಗೌರವ ಮತ್ತು ರಕ್ಷಣೆ ನೀಡುವ ಪರಿಸರ ನಿರ್ಮಾಣವಾದಾಗ ಮಾತ್ರ ದೇಶದ ನಿಜವಾದ ಪ್ರಗತಿ ಸಾಧ್ಯ. ನಾವು ಮನೆಯಿಂದಲೇ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಯಬೇಕು ಮತ್ತು ಕಲಿಸಬೇಕು. ಸೀತೆಯಂತಹ ತಾಳ್ಮೆಯನ್ನು ಪರೀಕ್ಷಿಸದೆ, ಅವಳಲ್ಲಿರುವ ದುರ್ಗೆಯ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಪೂರಕವಾದ ಸುರಕ್ಷಿತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ತ್ರೀ ಸುರಕ್ಷಿತವಾದರೆ ಮಾತ್ರ ಸಮಾಜ ಸುಭಿಕ್ಷವಾಗಿರುತ್ತದೆ.
ಮಹಿಳಾ ಸುರಕ್ಷತೆ ಎಂಬುದು ಕೇವಲ ಘೋಷಣೆಯಾಗಬಾರದು, ಅದು ಮನೆಯಿಂದಲೇ ಆರಂಭವಾಗುವ ಬದಲಾವಣೆಯಾಗಬೇಕು. ಯುವಜನತೆ ನೆನಪಿಡಿ, ಹೆಣ್ಣಿನ ಬಗ್ಗೆ ಕೆಟ್ಟದಾಗಿ ಯೋಚಿಸುವ ಮೊದಲು ಅಥವಾ ಮಾತನಾಡುವ ಮೊದಲು ನಿಮಗೆ ಜನ್ಮ ನೀಡಿದ ತಾಯಿ ಮತ್ತು ನಿಮ್ಮ ಒಡನಾಡಿಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯೂ ನಿರ್ಭಯವಾಗಿ ಓಡಾಡುವಂತಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ.

ಲೇಖನ :- ನವೀನ ಗೋಪಾಲಸಾ ಹಬೀಬ
(ಶಿಕ್ಷಕರು ಹಾಗೂ ಪ್ರೇರಕ ಭಾಷಣಕಾರರು)
