ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಚೊಚ್ಚಲ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಮೂಡುಬಿದಿರೆ: ಆಳ್ವಾಸ್ ಭಾರತೀಯ ಸಂವಿಧಾನದ ಮೌಲ್ಯಗಳನ್ನು ಅನುಸರಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ನಾಗರಿಕತ್ವವನ್ನು ಬೆಳೆಸುವ ಆದರ್ಶ ಶಿಕ್ಷಣ ಸಂಸ್ಥೆ ಎಂದು ಮಂಗಳೂರು ವಿವಿಯ ಕುಲಪತಿ ಡಾ ಪಿ ಎಲ್ ಧರ್ಮ ನುಡಿದರು.
ಅವರು ಶನಿವಾರ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಚೊಚ್ಚಲ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯು ಕೇವಲ ಶಿಕ್ಷಣ ನೀಡುವುದಲ್ಲ; ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ರಾಷ್ಟ್ರೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತಿದೆ. ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಒಂದೇ ಕುಟುಂಬದಂತೆ ಬೆರೆತು ಬದುಕುವುದು ಭಾರತದ ಏಕತೆಯ ಸಂಕೇತವಾಗಿದೆ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಹೆಸರು ಹಲವರಿಗೆ ತಿಳಿದಿರದೇ ಇರಬಹುದು, ಆದರೆ ಡಾ. ಮೋಹನ್ ಆಳ್ವರ ಹೆಸರು ಎಲ್ಲರಿಗೂ ಪರಿಚಿತವಾಗಿದೆ. ಅದು ಅವರ ವ್ಯಕ್ತಿತ್ವದ ಮಹತ್ವವನ್ನು ತೋರಿಸುತ್ತದೆ. ಡಾ. ಆಳ್ವರು ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ ಮಹನೀಯರು. ಅವರು ಸ್ಥಾಪಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಜ್ಞಾನ ಮಂದಿರವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಶಿಕ್ಷಣ ಸೇವೆಯನ್ನು ಆರಂಭಿಸಿದರು. ಅವರ ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಆಳ್ವಾಸ್ ರಾಜ್ಯ ಮತ್ತು ದೇಶದ ಮಟ್ಟದಲ್ಲಿ ಖ್ಯಾತಿ ಪಡೆದಿದೆ.
ಹಿರಿಯ ವಿದ್ಯಾರ್ಥಿಗಳ ಸಮಾವೇಶವು ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಉತ್ತಮ ವೇದಿಕೆ. ಈ ಕಾರ್ಯಕ್ರಮಗಳಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವಗಳು, ಸವಾಲುಗಳು ಹಾಗೂ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕು. ಜೀವನದಲ್ಲಿ ಎದುರಿಸಿದ ಸಂಕಷ್ಟಗಳನ್ನು ಹೇಗೆ ಜಯಿಸಿದರು ಎಂಬುದನ್ನು ತಿಳಿಸುವ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಬೇಕು ಎಂದರು.

ಕಟೀಲು ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಕಲ್ಪವೃಕ್ಷದ ಕೊಂಬೆಗಳಂತೆ. ಹಿರಿಯ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯೊಂದಿಗೆ ಸದಾ ಭಾವನಾತ್ಮಕ ಬಾಂಧವ್ಯ ಹೊಂದಿರಬೇಕು. ಅವರು ತಮ್ಮ ಯಶಸ್ಸಿನ ಹಾದಿಯಲ್ಲಿ ಪಡೆದ ಶಿಕ್ಷಣ ಮತ್ತು ಮಾರ್ಗದರ್ಶನವನ್ನು ಮರೆಯದೆ, ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು. ತಮ್ಮ ಅನುಭವವನ್ನು ಕಿರಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಅವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು. ಡಾ. ಮೋಹನ್ ಆಳ್ವರು ಲಾಭದ ಹಿಂದೆ ಹೋಗದೇ, ಮೌಲ್ಯಗಳ ಹಿಂದೆ ನಡೆದವರು. ಈ ಸಂಸ್ಥೆ ಕೇವಲ ಯಾಂತ್ರಿಕವಾಗಿ ನಿರ್ಮಾಣವಾಗಿಲ್ಲ; ಮನುಷ್ಯತ್ವದ ಅಡಿಪಾಯದಲ್ಲಿ ನಿರ್ಮಿಸಲಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಶಿಕ್ಷಣ ಸಂಸ್ಥೆಯ ಯಶಸ್ಸು ಅದರ ಕಟ್ಟಡಗಳು ಅಥವಾ ಆರ್ಥಿಕ ಸಂಪತ್ತಿನಿಂದ ಮಾತ್ರ ಅಳೆಯಲಾಗುವುದಿಲ್ಲ. ಆ ಸಂಸ್ಥೆಯಲ್ಲಿ ಕಲಿತು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳೇ ಅದರ ನಿಜವಾದ ಗೌರವ ಮತ್ತು ಸಂಪತ್ತು. ಇಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್‍ಗಳು, ಶಿಕ್ಷಕರು, ವಿಜ್ಞಾನಿಗಳು ಮತ್ತು ಸಮಾಜಸೇವಕರಾಗಿ ಬೆಳೆದು ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಅವರು ತಮ್ಮ ಸಾಧನೆಗಳ ಮೂಲಕ ಶಿಕ್ಷಣ ಸಂಸ್ಥೆಯ ಹೆಸರನ್ನು ಎತ್ತಿ ಹಿಡಿಯುತ್ತಾರೆ. ಆದ್ದರಿಂದ ಹಳೆಯ ವಿದ್ಯಾರ್ಥಿಗಳ ಸಾಧನೆ ಯಾವುದೇ ಹಣದ ಸಂಪತ್ತಿಗಿಂತ ಮೌಲ್ಯಯುತವಾಗಿದೆ ಎಂದರು.

2008ರಲ್ಲಿ ಆರಂಭವಾದ ಇಂಜಿನಿಯರಿಂಗ್ ಕಾಲೇಜು ಇಂದು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಯುವಕರು ತಾಂತ್ರಿಕ ಜ್ಞಾನವನ್ನು ಪಡೆದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. ಆರಂಭದಲ್ಲೇ ಮೆಡಿಕಲ್ ಕಾಲೇಜು ಆರಂಭಿಸದೆ ಮೂಲಭೂತ ಶಿಕ್ಷಣಕ್ಕೆ ಆದ್ಯತೆ ನೀಡಿದ ನಿರ್ಧಾರವೇ ಆಳ್ವಾಸ್ ಸಂಸ್ಥೆಯ ಇಂದಿನ ಯಶಸ್ಸಿಗೆ ಕಾರಣವಾಗಿದೆ ಎಂದರು.
ಹಿರಿಯ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಥಾಪನೆ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆನಾಂಡೀಸ್, ಕಾಲೇಜಿನ ಮಾಜಿ ಪ್ರಾಂಶುಪಾಲ ಗೋವಿಂದ ಗೌಡ ಹಾಗೂ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಪಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ವಾಸುದೇವ್ ಶಹಪುರ್ ಸ್ವಾಗತಿಸಿದರು.

Leave a Reply

Your email address will not be published. Required fields are marked *