ಉಡುಪಿ ಮೇ 21 ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ವಿವಿಧ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ, ಸಂಗ್ರಹಣೆ, ಸಾಗಾಣಿಕೆ, ಸಂಸ್ಕರಣೆ ಹಾಗೂ ಅವುಗಳ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಘನತ್ಯಾಜ್ಯ ನಿರ್ವಹಣೆ – ನಿಯಮಗಳು 2026 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ವಿಶೇಷ ಸೆಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಘನ ತ್ಯಾಜ್ಯಗಳ ನಿರ್ಲಕ್ಷಿಸುವುದರಿಂದ ಆರ್ಥಿಕತೆ ಅಷ್ಟೇ ಅಲ್ಲದೇ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಮನುಷ್ಯ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯಗಳನ್ನು ಮೂಲದಲ್ಲಿಯೇ ನಾಲ್ಕು ವಿಧಧ ತ್ಯಾಜ್ಯಗಳಾದ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ತ್ಯಾಜ್ಯಗಳ ( ಬಲ್ಬ್ಗಳು, ಬ್ಯಾಟರಿಗಳು, ಅವಧಿ ಮೀರಿದ ಔಷಧಗಳು, ಪೇಂಟ್ ಡಬ್ಬಿಗಳು ಇತ್ಯಾದಿ) ವಿಂಗಡಣೆಯನ್ನು ಸಾರ್ವಜನಿಕರಿಂದ ಮಾಡಿಸಿ, ಸಂಗ್ರಹಿಸಿ, ಅವುಗಳನ್ನು ಸಾಗಾಣಿಕೆ ಮಾಡಿ ಸಂಸ್ಕರಣೆ ಹಾಗೂ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕೆಂದರು.
ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಂದ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸಲು ಹಾಗೂ ಎಲ್ಲಾ ತ್ಯಾಜ್ಯ ಉತ್ಪಾದಕರಲ್ಲಿ ಅರಿವು ಮೂಡಿಸಲು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಮುಖ್ಯ ಮಾರ್ಗದರ್ಶಕರನ್ನಾಗಿ ನೇಮಕ ಮಾಡಿಕೊಂಡು ಸ್ವಯಂ ಸೇವಕರು, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘಬತ್ಯಾಜ್ಯ ನಿರ್ವಹಣಾ ನಿಯಮದ ಅನ್ವಯ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸಿ, ನೋಂದಾಯಿಸಿಕೊಳ್ಳಬೇಕು. ಅಲ್ಲಿ ಉತ್ಪಾದನೆಯಾದ ತ್ಯಾಜ್ಯವನ್ನು ಸ್ಥಳದಲ್ಲಿಯೇ ಸಂಸ್ಕರಿಸಬೇಕು. ತ್ಯಾಜ್ಯ ಸಂಸ್ಕರಣಾ ಸೌಲಭ್ಯ ಲಭ್ಯವಿಲ್ಲದಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಉತ್ಪಾದಕರಿಂದ ವಿಂಗಡಿತ ತ್ಯಾಜ್ಯವನ್ನು ಸ್ವೀಕರಿಸಬೇಕು ಅವರಿಂದ ಬೈಲಾ ಪ್ರಕಾರ ನಿಗಧಿಪಡಿಸಿದ ಶುಲ್ಕ ವಸೂಲಿ ಮಾಡಿ ಪ್ರಮಾಣ ಪತ್ರವನ್ನು ನೀಡಬೇಕು ಎಂದರು.
ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನುಷ್ಠಾನ ಮೇಲ್ವಿಚಾರಣೆಗೆ ವಿಶೇಷ ಸೆಲ್ಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ರಚಿಸಬೇಕು. ಸಮಿತಿಯು ಎಸ್.ಡಬ್ಲ್ಯೂ.ಎಂ ನಿಯಮಗಳ ಅನುಷ್ಠಾನಗೊಳಿಸುವುದನ್ನು ಮೇಲ್ವಿಚಾರಣೆ ಮಾಡಬೇಕು. ಒಂದೊಮ್ಮೆ ತ್ಯಾಜ್ಯ ವಿಲೇವಾರಿಯ ನಿರ್ವಹಣೆಯನ್ನು ಸರಿಯಾಗಿ ಅನುಸರಣೆ ಮಾಡದಿದ್ದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಸ್ಪೆಷಲ್ ಕೇರ್ ವೇಸ್ಟೇಜ್ ಅನ್ನು ಸಮರ್ಪಕವಾಗಿ ಸಂಗ್ರಹಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಈ ಉದ್ದೇಶಕ್ಕೆ ಪ್ರತಿ ಐದು ಚದರ ಕಿಲೋ ಮೀಟರ್ ಪ್ರದೇಶಕ್ಕೆ ಕನಿಷ್ಟ ಒಂದು ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಬೇಕು ಹಾಗೂ ಇಲ್ಲಿ ಸ್ವೀಕರಿಸುವ ಸಮಯವನ್ನು ಅಧಿಕೃತವಾಗಿ ಪ್ರಕಟಿಸಬೇಕು ಎಂದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಸ್ವಚ್ಛತೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು ಹಾಗೂ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಿ, ಅವು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ಕಸಗಳನ್ನು ಎಲ್ಲೆಂದರಲ್ಲಿ ಎಸೆದರೆ ಅವರುಗಳಿಂದ ದಂಡ ವಸೂಲಿ ಮಾಡಬೇಕು. ಈ ಸಂಬಂಧ ಅಗತ್ಯವಿರುವ ಕಡೆ ಸಿಸಿಟಿವಿ ಗಳನ್ನು ಸಹ ಅಳವಡಿಸಬೇಕು ಎಂದರು.
ಸ್ಥಳೀಯ ಸಂಸ್ಥೆಗಳು ಪ್ರತ್ಯೇಕವಾಗಿ ಸಂಗ್ರಹಿಸಿದ ಒಣ ತ್ಯಾಜ್ಯವನ್ನು ಎಂ.ಆರ್.ಎಫ್ ಘಟಕಗಳಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳು, ಮರುಬಳಕೆ ಮಾಡಲಾಗದ ವಸ್ತುಗಳು, ದಹನಕಾರಿ ತ್ಯಾಜ್ಯ, ನಿಷ್ಕ್ರೀಯ ತ್ಯಾಜ್ಯಗಳು ಎಂದು ಮರು ವಿಂಗಡಣೆ ಮಾಡಿ, ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದ ಅವರು, ನಾಗರಿಕರು ಬಳಸಿದ ವಸ್ತುಗಳು, ಬಟ್ಟೆಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ಪುಸ್ತಕಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ದಾನ ಮಾಡಲು ಆರ್.ಆರ್.ಆರ್ ಘಟಕಗಳನ್ನು ಸ್ಥಾಪಿಸಬೇಕು ಎಂದರು.
ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಹಾಗೂ ಕಡಲ ತೀರಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ವಿಶೇಷ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದ ಅವರು, ಪ್ಲಾಸ್ಟಿಕ್ ಬಾಟಲಿಗಳ ಸಂಗ್ರಹಕ್ಕೆ ವಿಶೇಷ ಪರಿಕರಗಳ ವ್ಯವಸ್ಥೆ ಮಾಡಬೇಕು ಎಂದರು.
ಘನತ್ಯಾಜ್ಯಗಳ ನಿರ್ವಹಣೆ ಸಮರ್ಪಕ ಅನುಷ್ಠಾನ ಕುರಿತು ಪ್ರತೀ ವಾರ್ಡ್ಗೆ ಒಬ್ಬರನ್ನು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದ ಅವರು, ದ್ವಿತೀಯ ಹಂತದಲ್ಲಿ ತ್ಯಾಜ್ಯ ಸಾಗಾಣಿಕೆಗೆ ಸಂಪೂರ್ಣ ಮುಚ್ಚಿದ ವಾಹನಗಳನ್ನು ಬಳಸುವಂತೆ ವ್ಯವಸ್ಥೆ ಮಾಡಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಾಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
