ಟ್ರಾಫಿಕ್, ಪಾರ್ಕಿಂಗ್, ಒತ್ತುವರಿ ಸಮಸ್ಯೆಗಳನ್ನು ಒಂದು ವಾರದೊಳಗೆ ನಿವಾರಿಸಿ – ಶಾಸಕ ಉಮಾನಾಥ ಕೋಟ್ಯಾನ್

ವರದಿ ರಾಯಿ ರಾಜಕುಮಾರ
ಮೂಡುಬಿದಿರೆಯಲ್ಲಿ ನೋ ಎಂಟ್ರಿಯ ಸಮರ್ಪಕ ಮಾಹಿತಿ ಇಲ್ಲದೆ ಪರ್ಯಾಯ ರಸ್ತೆಗಳು ಇದ್ದರೂ ಪಟ್ಟಣದೊಳಗೆ ಪ್ರವೇಶಿಸಿ ಟ್ರಾಫಿಕ್ ತೊಂದರೆ ಆಗುತ್ತಿದೆ. ವಾಹನಗಳನ್ನು ಸಿಕ್ಕಸಿಕ್ಕಲ್ಲಿ ನಿಲ್ಲಿಸಿ ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಹೆಚ್ಚಿದೆ.
ಫುಟ್ಪಾತ್ಗಳನ್ನು ಒತ್ತುವರಿ ಮಾಡಿ ರಸ್ತೆ ಬದಿ ಅಂಗಡಿಗಳು ಮತ್ತಷ್ಟು ಟ್ರಾಫಿಕ್ ಸಮಸ್ಯೆಗೆ ಕಾರಣರಾಗಿದ್ದಾರೆ.

80ಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ಸುಗಳ ಓಡಾಟ ಇದ್ದು ಸಮರ್ಪಕವಾದ ನಿಲ್ದಾಣದ ಕೊರತೆ ಇದೆ. ರಸ್ತೆ ಸುರಕ್ಷತಾ ವ್ಯವಸ್ಥೆಯ ಕೊರತೆ, ಸೂಕ್ತ ಎಚ್ಚರಿಕೆ ಫಲಕಗಳ ಕೊರತೆ, ಚರಂಡಿಗಳ ಸ್ವಚ್ಛತೆಯ ಕೊರತೆ, ಸಾರ್ವಜನಿಕ ಶೌಚಾಲಯಗಳ ಕೊರತೆ, ಕೆಲವು ಹೋಟೆಲ್, ಬೇಕರಿ, ಫಾಸ್ಟ್ ಫುಡ್, ಕ್ಯಾಂಟೀನ್ ಗಳಲ್ಲಿ ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆಯ ಕೊರತೆ, ತಿರುವುಗಳಲ್ಲಿ ವಾಹನ ನಿಲ್ಲಿಸುವುದರಿಂದ ಅನಗತ್ಯ ಟ್ರಾಫಿಕ್ ಸಮಸ್ಯೆ ಉಂಟಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ.
ಚಾಲಕರ ಅತಿ ವೇಗ ಚಾಲನೆ, ಜೋರಾದ ಹಾರ್ನ್ ಹಾಕುವಿಕೆ, ಬಸ್ಸು ನಿಲ್ದಾಣ ಪ್ರವೇಶಿಸದೆ ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಇಳಿಸುವುದು, ನೋ ಎಂಟ್ರಿಗಳಲ್ಲಿ ಸಂಚರಿಸಿ ಅನಗತ್ಯ ತೊಂದರೆ ಉಂಟು ಮಾಡುವುದು, ಉತ್ತಮ ದೂರು ವ್ಯವಸ್ಥೆ ಮತ್ತು ಉತ್ತಮ ಸಿಸಿ ಟಿವಿ ಗಳ ಮೇಲ್ವಿಚಾರಣೆಯ ಕೊರತೆ ತೊಂದರೆಗಳನ್ನು ಹೆಚ್ಚಿಸಿದೆ.

ಪೊಲೀಸ್ ಔಟ್ ಪೋಸ್ಟ್ ಮತ್ತು ಟ್ರಾಫಿಕ್ ಪೊಲೀಸ್ ಗಳ ಅಗತ್ಯ ಬಹಳಷ್ಟು ಇದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗದಿರಲು ಟ್ರಾಫಿಕ್ ಸಮಸ್ಯೆಯು ಕಾರಣ. ಜಿಪಿಎಸ್ ಮತ್ತು ಡಿಜಿಟಲ್ ಮ್ಯಾಪುಗಳಲ್ಲಿ ನೋ ಎಂಟ್ರಿ ರಸ್ತೆಗಳ ಮಾಹಿತಿ ಅಪ್ಡೇಟ್ ಆಗಿರುವುದಿಲ್ಲ. ರಿಂಗ್ ರಸ್ತೆ ನಿರ್ಮಾಣದಿಂದ ಪಟ್ಟಣದ ಒಳಗಿನ ಟ್ರಾಫಿಕ್ ಸಮಸ್ಯೆ ದೂರ ಮಾಡಲು ಸಾಧ್ಯವಿದೆ. ಟ್ರಿಪಲ್ ರೈಡಿಂಗ್, ಹೆಲ್ಮೆಟ್ ರಹಿತ, ಸೀಟ್ ಬೆಲ್ಟ್ ರಹಿತ ಚಾಲನೆಗೆ ಟ್ರಾಫಿಕ್ ಶಿಸ್ತನ್ನು ಮೂಡಿಸಬೇಕಾಗಿದೆ.
ಕೆಲವು ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ ಗಳು ಮುಚ್ಚಲ್ಪಟ್ಟು ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲವು ಕಡೆ ಸುರಕ್ಷತೆಯ ಕೊರತೆಯು ಕಾಡುತ್ತಿದೆ. ಕಷ್ಟ ಬದಿ ಮರಗಳನ್ನು ಬ್ಯಾನರ್ ಹಾಗೂ ಜಾಹೀರಾತುಗಳಿಗೆ ದುರುಪಯೋಗಪಡಿಸಿ ಹಾನಿಗೊಳಿಸಲಾಗುತ್ತಿದೆ ಇದು ಸುರಕ್ಷತಾ ಸಮಸ್ಯೆಯನ್ನು ಉಂಟುಮಾಡುತ್ತಿದೆ.
ಮೂಡುಬಿದಿರೆ ಹಾಗೂ ಪರಿಸರದಲ್ಲಿ ಅಕ್ರಮ ಮಧ್ಯ ಮಾರಾಟ ಬಹಿರಂಗವಾಗಿ ನಡೆಯುತ್ತಿದ್ದು ಸಮಯ ಮೀರಿದ ಬಳಿಕವು ಮಾರಾಟ ನಡೆಯುತ್ತಿದೆ. ಸ್ಪಷ್ಟ ದೂರುಗಳಿದ್ದರೂ ಅಬಕಾರಿ ಇಲಾಖೆ ಕ್ರಮ ಕೈಗೊಂಡಿರುವುದಿಲ್ಲ. ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಅಕ್ರಮ ಫ್ಲೆಕ್ಸ್ ಮತ್ತು ಜಾಹೀರಾತುಗಳು ರಾರಾಜಿಸುತ್ತಿವೆ. ಸೊಳ್ಳೆ ಕಾಟ, ಬೀದಿ ನಾಯಿ ಸಮಸ್ಯೆ ಹೆಚ್ಚಿದೆ. ಸೂಕ್ತ ಮಾಹಿತಿಯಿಲ್ಲದೆ ಮೂಡಾ ಸಮಸ್ಯೆಯಾಗಿ ಪರಿಣಮಿಸಿದೆ.

ಎಲ್ಲಿಂದದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತಂದು ಹಾಕಿ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡಲಾಗುತ್ತಿದೆ. ಆರ್ ಟಿ ಓ ಸೇವೆ ಮೂಡುಬಿದಿರೆಯಲ್ಲಿಯೂ ಸಿಗಬೇಕಾಗಿದೆ. ತುರ್ತು ರಕ್ಷಣಾ ವ್ಯವಸ್ಥೆಯ ತಂಡ ಬೇಕಾಗಿದೆ. ರಸ್ತೆಯ ಸರಿಯಾದ ಎಚ್ಚರಿಕೆಯ ಫಲಕ, ಸರ್ವಿಸ್ ರಸ್ತೆಯ ಪೂರ್ಣತೆ, ಸರಕಾರಿ ಜಮೀನುಗಳ ಅಕ್ರಮ ಒತ್ತುವರಿಯನ್ನು ನಿಲ್ಲಿಸಬೇಕಾಗಿದೆ ಎಂಬಿತ್ಯಾದಿ ಮೂಡುಬಿದಿರೆಯ ಹಲವಾರು ಸಮಸ್ಯೆಗಳನ್ನು ಜನತೆಯ ಪರವಾಗಿ ಅಕ್ಷಯ್ ಕೆ ಜೈನ್ ಅವರು ಮೇ 26ರಂದು ಕನ್ನಡ ಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಎಂ ಇಂದು ಅವರ ಸಮಕ್ಷಮ ದಾಖಲೆ ಸಮೇತ ಎದುರಿಗಿಟ್ಟರು.
ಸಭೆಯಲ್ಲಿ ಹೆಚ್ಚಿನ ಸ್ಥಳೀಯ ಅಧಿಕಾರಿಗಳು ಹಾಜರಿದ್ದು ಒಂದು ವಾರದ ಒಳಗೆ ಸರಿಪಡಿಸುವ ಭರವಸೆಯನ್ನು ಶಾಸಕರಿಗೆ ನೀಡಿದರು.

Leave a Reply

Your email address will not be published. Required fields are marked *