ಆಶಾ ಕಾರ್ಯಕರ್ತೆಯರೇ ನಮಗೆ ಜೀವನ ಸ್ಪೂರ್ತಿ ಡಾ.ಎಂ.ಮೋಹನ ಆಳ್ವ
ಮೂಡುಬಿದಿರೆ: 'ಕೊರೋನಾ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣುವವರಿದ್ದಾರೆ. ಅಂಥವರ ನಡುವೆ ವೈದ್ಯಕೀಯ ಶಿಕ್ಷಣವಿಲ್ಲದೆಯೂ ಬರೇ ತರಬೇತಿ ಪಡೆದು ಜೀವದ ಹಂಗು ತೊರೆದು ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಅಸಂಖ್ಯಾತ ಆಶಾ ಕಾರ್ಯಕರ್ತೆಯರು ಸಂಕಷ್ಟದ ಈ ಸಮಯದಲ್ಲಿ ನಮಗೆ ಜೀವನ ಸ್ಫೂರ್ತಿ ಯಾಗಬೇಕು' ಇದು ಸ್ವತಃ ವೈದ್ಯರೂ ಆಗಿರುವ ಮತ್ತು ರಾಜ್ಯ, ರಾಷ್ಟ್ರ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಶಿಕ್ಷಣ, ಸಾಹಿತ್ಯ, ಕ್ರೀಡೆ ಸಾಂಸ್ಕೃತಿಕ ರಂಗದ ರಾಯಭಾರಿಯೆನಿಸಿರುವ ಸಾಧಕ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ನಿಲುವು.
ಕೆ.ಜಿ.ಯಿಂದ ಪಿಜಿ, ವೃತ್ತಿಪರ, ಅರೆ ವೈದ್ಯಕೀಯ, ತಾಂತ್ರಿಕ ಹೀಗೆ ಇಪ್ಪತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ನಾಡಿಗೇ ಮಾದರಿಯಾದ ಆಳ್ವಾಸ್ ವಿರಾಸತ್, ನುಡಿಸಿರಿ, ಕ್ರೀಡಾ ರಂಗದಲ್ಲಿ ನಿರಂತರ ದಿಗ್ವಿಜಯ ಸಾಧಿಸುತ್ತಿರುವ ಸಾಧಕರು, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ನಿತ್ಯೋತ್ಸವದ ಪರಿಚಾರಿಕೆಯಲ್ಲಿ ಕ್ಷಣಮಾತ್ರವೂ ಬಿಡುವಿಲ್ಲದಂತೆ ಓಡಾಡಿಕೊಂಡಿದ್ದ ಡಾ. ಆಳ್ವ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎನ್ನುವ ಬಗ್ಗೆ ಸೆಲೆಬ್ರಿಟಿಗಳು ಹೇಗಿದ್ದಾರೆ ಎನ್ನುವ ಕನ್ನಡ ಪ್ರಭದ ಭೇಟಿಯ ವೇಳೆಗೆ ಡಾ. ಆಳ್ವ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.
ವೈದ್ಯಕೀಯಕ್ಕೆ ಒತ್ತು!
ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ರಂಗಗಳಲ್ಲಿ ಮೇರು ಸಾಧಕರಾಗಿದ್ದರೂ ಡಾ. ಆಳ್ವ ವೃತ್ತಿಯಲ್ಲಿ ಮೂಲತಃ ತಾನೋರ್ವ ವೈದ್ಯ ಎನ್ನುವುದನ್ನು ಮರೆತಿಲ್ಲ. ಈಗ ಮೂಡುಬಿದಿರೆಯಲ್ಲಿ ತಾನು ಮೊದಲು ಆರಂಭಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್ ಆಸ್ಪತ್ರೆಯತ್ತ ಅವರು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ತುರ್ತು ಸೇವೆ ಸಹಿತ ಬಹುವಿಧ ಚಿಕಿತ್ಸೆಯ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿರುವ ಆಸ್ಪತ್ರೆಯಲ್ಲೀಗ ಸ್ಕ್ರೀನಿಂಗ್,ಫಿವರ್ ಕ್ಲಿನಿಕ್ ತೆರೆಯಲಾಗಿದೆ. ಒಪಿಡಿ, ಹೆರಿಗೆ, ತುರ್ತು ಚಿಕಿತ್ಸೆ, ಲ್ಯಾಬ್, ಸ್ಕ್ಯಾನಿಂಗ್, ಬ್ಲಡ್ ಬ್ಯಾಂಕ್ ಎಲ್ಲಕ್ಕಿಂತ ಮುಖ್ಯವಾಗಿ ಕೊರೋನಾ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್ ಸೌಲಭ್ಯವೂ ಇಲ್ಲಿದೆ.
ಈಗಂತೂ ಖಾಸಗಿ ವೈದ್ಯರುಗಳು, ಚಿಕಿತ್ಸಾಲಯಗಳು ಜನತೆಯಿಂದ ದೂರವಿರುವಾಗ ಆಳ್ವಾಸ್ ಎಲ್ಲ ರೀತಿಯಿಂದಲೂ ಸಾರ್ವಜನಿಕ ಸೇವೆಗೆ ತೆರೆದುಕೊಂಡಿದೆ. ಸ್ವತಃ ಡಾ. ಆಳ್ವರೇ ಹೆಚ್ಚಿನ ಮುತುವರ್ಜಿ ವಹಿಸಿ ಆರೋಗ್ಯ ಸಂಬಂಧೀ ವಿಷಯಗಳಿಗೆ ಆದ್ಯತೆ ನೀಡುತ್ತಿದ್ದಾರೆ. ವೈದ್ಯರಾಗಿರುವ ಪುತ್ರ ಡಾ. ವಿನಯ್, ಸೊಸೆ ಡಾ.ಹನ ಆಳ್ವ ಅವರನ್ನೂ ಆಸ್ಪತ್ರೆಯ ಕರ್ತವ್ಯದಲ್ಲಿ ಸಕ್ರಿಯರನ್ನಾಗಿಸಿಕೊಂಡು ಸ್ಪಂದಿಸುತ್ತಿದ್ದಾರೆ.
ಸಾರಿಗೆ,ಸೌಲಭ್ಯಗಳಿಲ್ಲದ ಈ ಕಷ್ಟದ ಪರಿಸ್ಥಿತಿಯಲ್ಲೂ ಆಸ್ಪತ್ರೆಯ ವೈದ್ಯರು, ಸಹಾಯಕ ಸಿಬ್ಬಂದಿಗಳನ್ನು ಅವರವರ ಮನೆಯಿಂದ ಕರೆತರುವ, ಮರಳಿ ತಲುಪಿಸುವ, ಎಲ್ಲರಿಗೂ ಆಹಾರ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹೀಗೆ ಎಲ್ಲದರಲ್ಲೂ ಡಾ. ಆಳ್ವ ಬ್ಯುಸಿಯಾಗಿದ್ದಾರೆ.
ಊಟೋಪಚಾರ.. ನೆರವು
400 ಮಕ್ಕಳು, ಸೆಕ್ಯೂರಿಟಿ, ಸಹಿತ ಅಗತ್ಯ ಸಿಬಂದಿಗಳು, ಮೂಡುಬಿದಿರೆಯಲ್ಲಿ ನಿಯೋಜಿತ ಪೋಲೀಸ್ ಸಿಬ್ಬಂದಿಗಳು, ಇತರೆ ಅಧಿಕಾರಿವರ್ಗ, ವಾರ್ಡನ್ ಗಳು ಹೀಗೆ ಕನಿಷ್ಠ ಒಂದು ಸಾವಿರ ಮಂದಿಗೆ ಮೂರು ಹೊತ್ತೂ ಅಡುಗೆ, ವಿತರಣೆ, ಎಲ್ಲವುದಕ್ಕೂ ಡಾ. ಆಳ್ವರದ್ದೇ ಉಸ್ತುವಾರಿ. ತಮ್ಮ ಸಿಬಂದಿ, ನೌಕರರೆಲ್ಲರಿಗೂ ವೇತನ ಇತ್ಯಾದಿ ವ್ಯವಸ್ಥೆಯಾಗಬೇಕು. ಸಂಕಷ್ಟದಲ್ಲಿರುವ ಸಿಬಂದಿವರ್ಗದ ನೆರವಿಗೆ ಧಾವಿಸಬೇಕು. ಅವರ ಆರೋಗ್ಯ, ಯೋಗ ಕ್ಷೇಮಕ್ಕೂ ಸ್ಪಂದಿಸಬೇಕು. ಎಲ್ಲವನ್ನೂ ತಮ್ಮ ಇತಿಮಿತಿಯಲ್ಲಿ ಸದ್ದುಗದ್ದಲವಿಲ್ಲದೇ ಮಾಡುತ್ತಲೇ ಇದ್ದೇವೆ. ಅದಕ್ಕೆಂದೂ ಪ್ರಚಾರ ಬಯಸಿಲ್ಲ. ದಾನ ಮಾಡಿದ್ದು ಬಹಿರಂಗಪಡಿಸುವ ಆಸೆಯಿಲ್ಲ ಎನ್ನುತ್ತಾರೆ ಡಾ. ಆಳ್ವ.
ಪಲಾಯನವಾದವಿಲ್ಲ.
ಓರ್ವ ವೈದ್ಯನಾಗಿ ಈ ದೇಶ, ದೇಶದ ಪ್ರಧಾನಿಯವರ ಪ್ರಸಕ್ತ ನಿಲುವಿನ ಬಗ್ಗೆ ಅಪಾರ ಗೌರವವಿದೆ. ನಾನೆಂದಿಗೂ ಆಶಾವಾದಿ. ನಕಾರಾತ್ಮ ಚಿಂತನೆಯನ್ನೇ ಮಾಡದವನು. ಪಲಾಯನವಾದಿಯಂತೂ ಖಂಡಿತಾ ಅಲ್ಲ. ಅವಕಾಶವಾದಿಯಾಗಿ ದೊರೆತಿರುವ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ಆಸೆಯಿದೆ. ಜೀವನದಲ್ಲಿ ಎಂದೂ ರಜೆ ಮಾಡಿ ರಿಲ್ಯಾಕ್ಸ್ ಆಗಿರುವುದು ನಾನು ಇಷ್ಟಪಡುವುದೂ ಇಲ್ಲ. ಸಧ್ಯದ ಪರಿಸ್ಥಿತಿ ಇದೊಂದು ದಿಢೀರ್ ಆಗಿ ಬಂದಿದೆ. ಆಕಾಶವೇ ನೆಲಕ್ಕೆ ಬಿದ್ದಂತೆ ಎಲ್ಲವೂ ಅಲ್ಲೋಲ ಕಲ್ಲೋಲವಾದ ಅನುಭವಾಗುತ್ತಿದೆ. ಒಂದೆಡೆ ಓದು ಮುಗಿಸಿ ಪರೀಕ್ಷೆ ಬರೆಯಬೇಕಾಗಿದ್ದವರು ಫಲ ಬರುವ ಕಾಲಕ್ಕೆ ಕಳಚಿ ಬಿದ್ದಂತೆ ಅತಂತ್ರರಾಗಿದ್ದಾರೆ. ಆದರೆ ನನ್ನ ಕಣ್ಣೆದುರು ದೇಶವನ್ನು ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ಸಾಹದಿಂದ ಕಾಯುವ ಯೋಧರು, ಪೋಲೀಸರು, ವೈದ್ಯರು, ಸಿಬಂದಿವರ್ಗ, ಅಧಿಕಾರಿವರ್ಗ, ತಳಮಟ್ಟದ ಕಾರ್ಯಕರ್ತರು, ವಿಶೇಷವಾಗಿ ಆಶಾ ಕಾರ್ಯಕರ್ತೆಯರ ಸೇವೆ ಬೆಲೆಕಟ್ಟಲಾಗದ್ದು ಅವರ ಸೇವೆಯನ್ನು ಯಾರೊಂದಿಗೂ ಹೋಲಿಸಲೂ ಆಗದು.
ಇಲ್ಲಿ ನರ್ಸಿಂಗ್ ಮೆಡಿಕಲ್ ಹೀಗೆ ನಮ್ಮ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳ ಜವಾಬ್ದಾರಿ ಬಹಳ ಮಹತ್ವದ್ದು. ಅವರು ಉಳಿದವರಂತೆ, ವಿದ್ಯಾರ್ಥಿಗಳಂತೆ ಮನೆಗಳಿಗೆ ಸೀಮಿತವಾಗಬೇಕಿಲ್ಲ. ಆಯುರ್ವೇದ ವಿದ್ಯಾಥಿಗಳೂ ಕೊರೋನಾ ವಿರುದ್ಧ ಲಭ್ಯವಿರುವ ಸೇವಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸೇವಾ ದೀಕ್ಷೆ ಪಡೆದು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವವರೆಲ್ಲ ಈ ವಿಪತ್ತಿನ ಕ್ಷಣಗಳಲ್ಲಿ ವ್ಯವಸ್ಥೆಗೆ ಹೆಗಲು ಕೊಡುವಂತಾಗಬೇಕು ಎನ್ನವುದು ಓರ್ವ ವೈದ್ಯನಾಗಿ ನನ್ನ ಅನಿಸಿಕೆ ಅನ್ನುತ್ತಾರೆ ಡಾ. ಆಳ್ವ.
ಸ್ವೇಚ್ಛೆ ತೊರೆದು ಪ್ರಕೃತಿಗೆ ಶರಣಾಗೋಣ..
ನಮ್ಮ ಸ್ವೇಚ್ಛಾಚಾರ, ದುರಾಚಾರ, ಅತಿಯಾಸೆ ಪ್ರಕೃತಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬದುಕುವ ಜನರಿಗೆ ಕೊರೋನಾ ದೇವರು ಕಲಿಸಿದ ಪಾಠ. ನಾವು ಇನ್ನಾದರೂ ಪಾಠ ಕಲಿಯದಿದ್ದರೆ ದುರಂತವಾಗುವುದು ಖಂಡಿತ, ಇತಿಹಾಸವನ್ನು ಗಮನಿಸಿದರೆ ಭೂಕಂಪ, ಪ್ರವಾಹ, ಅತಿವೃಷ್ಠಿ, ಅನಾವೃಷ್ಠಿ, ಪ್ಲೇಗ್, ಏಯ್ಡ್ಸ್ ಹೀಗೆ ಸಾಕಷ್ಟು ಸವಾಲುಗಳು ಬಂದು ಹೋಗಿವೆ. ಎಲ್ಲವುದಕ್ಕೂ ಕಾಲವೇ ಉತ್ತರಿಸಿ ನಮ್ಮೆಲ್ಲರನ್ನೂ ಮುನ್ನಡೆಸಿದೆ. ಹಾಗಾಗಿ ಕೊರೋನಾ ಹಾವಳಿಗೂ ಪ್ರಕೃತಿಯೇ ಪೂರ್ಣವಿರಾಮ ಹಾಕಿ ಮುನ್ನಡೆಸುವ ವಿಶ್ವಾಸವಿದೆ. ನಮ್ಮ ದೇಶ, ರಾಜ್ಯದ ಪರಿಸ್ಥಿತಿ ಎಂದಿಗೂ ನಮ್ಮ ಕೈತಪ್ಪಿ ಹೋಗಿಲ್ಲ. ನಾವು ಅದನ್ನು ಎದುರಿಸುತ್ತಿರುವ ರೀತಿಗೆ ಮೆಚ್ಚುಗೆಯಿದೆ. ರಾಷ್ಟ್ರ,ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯದ ಬಗ್ಗೆ ಆತಂಕವಿದೆ. ಆದರೆ ಎಲ್ಲರೂ ಜತೆಗೂಡಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ. ರಾಜ್ಯ ಸರಕಾರಗಳು ನಾಡಿನ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಬಯಸಿದಲ್ಲಿ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲು ಆಳ್ವಾಸ್ ಸಿದ್ಧವಿದೆ. ಎನ್ನುವ ಡಾ. ಆಳ್ವ ಪರಿಸ್ಥಿತಿ ತಿಳಿಯಾಗಿ ಅವಕಾಶ ದೊರೆತರೆ ನಾಡಿನ ಜನಪ್ರಿಯ ಉತ್ಸವಗಳಾದ ನುಡಿಸಿರಿ, ವಿರಾಸತ್ ಇವೆರಡನ್ನೂ ಜತೆಗೂಡಿಸಿ ಸರಳವಾಗಿ ಹೊಸಕಲ್ಪನೆಯೊಂದಿಗೆ ಮುಂದಿನ ದಿನಗಳಲ್ಲಿ ನಡೆಸಬೇಕು ಎನ್ನುವ ಕನಸಿದೆ ಎಂದರು.
ಬದುಕಲು ಕಲಿಸಿದ ಕೊರೋನಾ
ನನಗೀಗ 68 ವರ್ಷ. ಬದುಕಿನಲ್ಲಿ ಎಂದೂ ನಾಳೆಗೆ ಕೂಡಿಟ್ಟವನು ನಾನಲ್ಲ. ನಾಳೆ ಏನು ಎನ್ನುವುದೂ ಗೊತ್ತಿಲ್ಲ. ಅತೀ ಹೆಚ್ಚು ರಿಸ್ಕ್ ಮತ್ತು ಸಾಲದ ಬದುಕು ನನ್ನದು ಎನ್ನುವಾಗ ಅವರ ಮುಖದಲ್ಲಿ ವಿಷಾದದ ನಗು ಹಾದು ಹೋಗುತ್ತದೆ. ಸಮಾಜವನ್ನು ಸ್ವಂತಕ್ಕಿಂತಲೂ ಹೆಚ್ಚಾಗಿ ಜೀವನದ ಅವಿಭಾಜ್ಯ ಅಂಗ ಎಂದು ಬದುಕಿದವನು ನಾನು. ಈ ಸಮಾಜ, ಸಂಸ್ಥೆಯ ನೌಕರರು, ಮಕ್ಕಳು, ಪಾಲಕರು, ಆರ್ಥಿಕ ಸಂಸ್ಥೆಗಳು, ನಮ್ಮವರು ಹೀಗೆ ಎಲ್ಲರ ಪರಿಚಯ ಈಗ ಸಿಕ್ಕಿದೆ. ಸಂಸ್ಥೆ ಕಟ್ಟುವಲ್ಲಿ ಹೆಗಲು ಕೊಡುವವರು ಯಾರು ಎಂದು ಅರಿವಾಗುತ್ತಿದೆ. ಕನಸುಗಳನ್ನು ಕಟ್ಟಿಕೊಂಡು ಬಂದಿದ್ದ ಮಕ್ಕಳು, ಕ್ಯಾಶುವಲ್ ಆಗಿರುವ ಸಮಾಜ, ಸಮಾಜಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಬದುಕುವವರನ್ನು ಕಂಡು ಪಾಠ ಕಲಿಯುತ್ತಿದ್ದೇನೆ ಎನ್ನುವ ಆಳ್ವರು ಬದುಕಿನಲ್ಲಿ ಸುಂದರ ಕ್ಷಣಗಳನ್ನು ಕಳೆದಿದ್ದೇನೆ, ಈಗ ಕಲಿತ ಪಾಠಗಳಿಂದ ಬದುಕನ್ನು ಉತ್ತಮವಾಗಿಸಬೇಕಿದೆ ಎಂದರು.
ಮಕ್ಕಳ ದಾಖಲಾತಿಯಿಂದ ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣವಾಗಬೇಕಿದ್ದ ಈ ಸಮಯದಲ್ಲಿ ಯೋಜನೆಗಳೆಲ್ಲವೂ ಕೈತಪ್ಪಿವೆ. ದುಡ್ಡಿನ ವ್ಯಾಮೋಹವಿಲ್ಲದ ನನ್ನಂಥವರು ಕಷ್ಟಕಾಲಕ್ಕೆ ಕೂಡಿಡಬೇಕಾಗಿತ್ತು ಎನ್ನುವುದರ ಮಹತ್ವ ಈಗ ಅರಿವಾಗುತ್ತಿದೆ ಎಂದರು.
ಟೈಂ ಟೇಬಲ್ ಬಿಟ್ಟಿರಲಾಗದು..
ಬದುಕು ನಿರ್ದಿಷ್ಟ ತತ್ವಗಳಿಗೆ ಅನುಗುಣವಾಗಿರಬೇಕು ಎನ್ನುವುದು ನನ್ನ ಪಾಲಿಸಿ, ಬದುಕಿನಲ್ಲಿ ಬಾಲ್ಯದಿಂದಲೂ ನಾನು ಟೈಂ ಟೇಬಲ್ ಹಾಕಿಕೊಂಡು ಬೆಳೆದು ಬಂದವನು. ಬದುಕಿನಲ್ಲಿ ಈ ಟೈಂಟೇಬಲ್ ಬಿಟ್ಟಿರಲು ಆಗುವುದೇ ಇಲ್ಲ. ಈಗಂತೂ ಒಂದೂವರೆ ಗಂಟೆ ಹೆಚ್ಚಿನ ಕೆಲಸ ಮಾಡುತ್ತಿದ್ದೇನೆ.
ಮೊದಲಿನಂತೆ 6 ಗಂಟೆಗೆ ಬದಲಾಗಿ 5 ಗಂಟೆಗೆ ಏಳುತ್ತೇನೆ. ನಂತರದ ಒಂದು ಗಂಟೆ ಎಲ್ಲ ದಿನಪತ್ರಿಕೆಗಳನ್ನು ಓದುತ್ತೇನೆ. 6ಗಂಟೆಗೆ ನಿತ್ಯ ವ್ಯಾಯಾಮ, ವಾಕಿಂಗ್, ಧ್ಯಾನ, ಪ್ರಾಣಾಯಾಮ ಹೀಗೆ 7,45ರವರೆಗೆ ಮುಂದುವರೆಯುತ್ತದೆ. ಬಳಿಕ ಸ್ನಾನ, ದೇವರ ಪೂಜೆ, ಪ್ರಾರ್ಥನೆ ಮುಗಿಯುವ ಹೊತ್ತಿಗೆ 8.30 ಆಗುತ್ತದೆ. ಬೆಳಗ್ಗಿನ ಉಪಹಾರ ಸ್ವೀಕರಿಸುತ್ತಾರೆ.
9ರವೇಳೆಗೆ ವಿದ್ಯಾಗಿರಿ ಕ್ಯಾಂಪಸಿನತ್ತ ಹೊರಟವರಿಗೆ ಅಲ್ಲಿ ಲಾಕ್ ಡೌನ್ ಕಾರಣಕ್ಕೆ ಊರಿಗೆ ಹೋಗಲಾಗದ ದೂರದ ಊರಿನ ಸುಮಾರು 400 ರಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿದ್ದಾರೆ. ಡಾ. ಆಳ್ವ ಅವರೆಲ್ಲರನ್ನೂ ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಾರೆ. ವಿದ್ಯಾಗಿರಿ ಮಾತ್ರವಲ್ಲ ಮಿಜಾರು ಪುತ್ತಿಗೆಯಲ್ಲಿರುವ ಹಾಸ್ಟೆಲ್ ಗಳಿಗೂ ಭೇಟಿ ನೀಡುತ್ತಾರೆ. ಅವರ ಆರೋಗ್ಯ, ಸಮಸ್ಯೆ, ಅವರಿಗಾಗಿ ಒಂದಷ್ಟು ಚಟುವಟಿಕೆ, ಅವರ ಮನಸ್ಥಿತಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸ್ಪಂದಿಸುತ್ತಾರೆ. ಹೆತ್ತವರ ಪ್ರೀತಿ, ಕಾಳಜಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ.
ಆಸ್ಪತ್ರೆಯ ಆವರಣಕ್ಕೆ ಬಂದು ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ತೊಡಗಿಕೊಳ್ಳುತ್ತಾರೆ. ಜತೆಗೆ ಶೋಭಾವನ, ಮಿಜಾರಿನ ಆಯುರ್ವೇದ ಫಾರ್ಮಸಿ ಸಹಿತ ತಮ್ಮ ಎಕರೆಗಟ್ಟಲೆ ಹಬ್ಬಿರುವ ಕ್ಯಾಂಪಸ್ ಗಳಲ್ಲಿರುವ ಗಾರ್ಡನ್ ನಿರ್ವಹಣೆಗೂ ವಿಶೇಷ ಗಮನ ಹರಿಸುತ್ತಾರೆ. ನಾವೆಲ್ಲರೂ ಸೇಫ್ಟಿ ಎಂದು ಮನೆಯೊಳಗೆ ಕುಳಿತರೆ ಆಗುತ್ತದೆಯೇ? ಅವೆಲ್ಲವನ್ನೂ ಮಕ್ಕಳಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ.
ಅಪರಾಹ್ನ 2ರಿಂದ 3ರೊಳಗೆ ಬಿಡುವು ಮಾಡಿಕೊಂಡು ಅಪರಾಹ್ನದ ಭೋಜನ. ಅಪರಾಹ್ನ 3ರಿಂದ 7.30ರ ವರೆಗೆ ಮತ್ತೆ ತಮ್ಮ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸುತ್ತಾಡುತ್ತಾ ಕೆಫೆಟೇರಿಯದಲ್ಲಿ ತಮ್ಮ ಎಂದಿನ ಸ್ಥಳದಲ್ಲೇ ಏಕಾಂಗಿಯಾಗಿ ಕುಳಿತು ದಿನದ ಅಗತ್ಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಸಂಜೆ ಏಳೂವರೆಗೆ ಮನೆ ಸೇರಿ ಮತ್ತೆ ಒಂದಿಷ್ಟು ವ್ಯಾಯಾಮ, ಸ್ನಾನ, ಮತ್ತೆ 9,30ರಿಂದ 10.30ರ ವರೆಗೆ ಹಾಸ್ಟೆಲ್ ಗಳ ಆವರಣದಲ್ಲಿ ಓಡಾಡಿ ಅಲ್ಲಿದ್ದವರೊಂದಿಗೆ ಬೆರೆಯುತ್ತಾರೆ. 10.30ಕ್ಕೆ ಮನೆ ಸೇರಿ ಲಘು ಉಪಹಾರ, ಟೀವಿಯಲ್ಲಿ ಒಂದಿಷ್ಟು ವಾರ್ತೆ, ಸುದ್ದಿ ಸಮಾಚಾರ ವೀಕ್ಷಿಸಿ 11.30ರ ವೇಳೆಗೆ ನಿದ್ದೆಗೆ ಜಾರುತ್ತಾರೆ.
ಲಾಕ್ ಡೌನ್ ಬಳಿಕವಂತೂ ನನ್ನ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಮನೆ ಇವುಗಳನ್ನು ಬಿಟ್ಟು ಹೊರಗೆಲ್ಲೂ ಹೋಗೇ ಇಲ್ಲ ಹೋಗುವುದೂ ಇಲ್ಲ ಎಂದು ನಿರ್ಧರಿಸಿರುವುದಾಗಿ ಡಾ. ಆಳ್ವ ಹೇಳಿದರು.
ಕೊರೊನಾ ಬಗ್ಗೆ ಸೋಶಿಯಲ್ ಮೀಡಿಯಾ, ಮೊಬೈಲ್ ಗಳಲ್ಲಿ ಅಂತೂ ಎಲ್ಲೆಮೀರಿ ಜೋಕ್ಸ್ ಗಳು ಹರಿದಾಡುತ್ತಿವೆ. ಆದರೆ ಕೊರೋನಾದಂತಹ ಗಂಭೀರ ವಿಷಯವನ್ನು ಲೈಟ್ ಆಗಿ ತೆಗೆದುಕೊಂಡು ನಗುತ್ತಾ ಕೂರುವುದರಲ್ಲಿ ಅರ್ಥವೇ ಇಲ್ಲ. ಇನ್ನೊಂದೆಡೆ ಶತಾಯುಷಿ 102 ವರ್ಷದ ನನ್ನ ತಂದೆ ಮಿಜಾರುಗುತ್ತು ಆನಂದ ಆಳ್ವರೂ ಮನೆಗೆ ಸೀಮಿತವಾಗದೇ ನಾವೇನು ಮಾಡುತ್ತಿದ್ದೇವೆ ಎನ್ನುವ ಕರ್ತವ್ಯ ಪ್ರಜ್ಞೆಯಿಂದ ಕ್ಯಾಂಪಸಿಗೆ ಬರುತ್ತಾರೆ. ಅವರ ಮಗನಾಗಿ ಅಪ್ಪನ ಜೀವನೋತ್ಸಾಹ, ಕರ್ತವ್ಯ ಪ್ರಜ್ಞೆಯನ್ನು ಕಂಡ ಮೇಲೂ ನನ್ನ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಅರಿವಾಗುತ್ತಿದೆ ಎನ್ನುವ ಡಾ. ಆಳ್ವ ಬದುಕನ್ನು ಆನಂದಿಸುವ, ಸವಾಲುಗಳನ್ನೆದುರಿಸಿ ಮುನ್ನಡೆಯುವ ಕೊರೋನಾ ಬದುಕಿಗೊಂದು ಹೊಸ ತಿರುವು ನೀಡಿ ಪಾಠ ಕಲಿಸಿದೆ ಎನ್ನುವುದನ್ನು ಒತ್ತಿ ಹೇಳಲು ಮರೆಯಲಿಲ್ಲ.
-ಎ0.ಗಣೇಶ್ ಕಾಮತ್ ಮೂಡುಬಿದಿರೆ.