ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಆದೇಶ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಜನರು ಅಗತ್ಯ ವಸ್ತುಗಳ ಖರೀದಿಗೆ ಹೊರಬರಲಾಗದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.

ಭಾನುವಾರ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ನಿಯೋಗದ ಸದಸ್ಯರು, ಜಿಲ್ಲೆಯ ಜನರ ತೊಂದರೆಯನ್ನು ನಿವಾರಿಸಲು ಕೆಲವು ಸಲಹೆಗಳನ್ನು ನೀಡಿದೆ.

ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲೆಯ ಎಲ್ಲ ದಿನಸಿ ಅಂಗಡಿಗಳನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಿತ್ಯವೂ ತೆರೆಯಲು ಅನುಮತಿ ನೀಡಬೇಕು. ಗ್ರಾಮಾಂತರ ಪ್ರದೇಶದ ಬಹುತೇಕ ಮಂದಿ ಬಡವರು, ಕೂಲಿ ಕಾರ್ಮಿಕರು ಆಗಿದ್ದು,  ಇವರು ದಿನಸಿ ವಸ್ತುಗಳನ್ನು ಸ್ಥಳೀಯ ಅಂಗಡಿಗಳಿಂದ ಸಾಲ ಪಡೆಯುವ ಪದ್ಧತಿಯಿದೆ. ಕೇವಲ ಹೈಪರ್ ಮಾರ್ಕೆಟ್ ಸೂಪರ್ ಮಾರ್ಕೆಟ್ ಹಾಗೂ ದೊಡ್ಡ ಅಂಗಡಿಗಳಿಗೆ ಮಾತ್ರ ದಾಸ್ತಾನು, ಪೂರೈಕೆ ಅನುಮತಿ ನೀಡಿದರೆ ಜನರಿಗೆ ಅಗತ್ಯ ಸಾಮಗ್ರಿಗಳು ಸಿಗದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ನಿಯೋಗ ಒತ್ತಾಯಿಸಿತು.

ಆನ್ಲೈನ್ ಆಪ್ ಮೂಲಕ ಜನರಿಗೆ ಸಾಮಗ್ರಿ ಪೂರೈಕೆ ಮಾಡಿದರೆ ಕೇವಲ 20 ಶೇಕಡಾ ನಗರವಾಸಿಗಳು ಮತ್ತು ಶ್ರೀಮಂತರಿಗೆ ಮಾತ್ರ ದೊರೆಯುತ್ತದೆ. ಸಾಮಾಜಿಕ ಅಸಮತೋಲನಕ್ಕೆ ಇದು ಕಾರಣವಾಗಲಿದೆ ಎಂದು ಎಚ್ಚರಿಸಿದರು.

ಮಂಗಳೂರಿನ ಬಂದರು ವ್ಯಾಪ್ತಿಯಲ್ಲಿ ಎಲ್ಲ ದಾಸ್ತಾನು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಗ್ರಾಮಾಂತರದ ಸಣ್ಣ ವ್ಯಾಪಾರಸ್ಥರಿಗೆ ಸಾಮಗ್ರಿಗಳ ಪೂರೈಕೆ ಕೊರತೆ ಆಗಲಿದ್ದು, ಜನರಿಗೆ ತೊಂದರೆಯಾಗಲಿದೆ.

ನಗರದ ಎಲ್ಲಾ 60 ವಾರ್ಡುಗಳಲ್ಲಿ ವಾಹನಗಳ ಮೂಲಕ ತರಕಾರಿ ಪೂರೈಕೆ ಮಾಡಲು ಸಂಬಂಧಿಸಿದ ಸ್ಥಳೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬೇಕು. ಇದರಿಂದ ಮಾರುಕಟ್ಟೆಗಳಲ್ಲಿ ಜನಸಂದಣಿಯನ್ನು ತಪ್ಪಿಸಬಹುದು. ಈಗಾಗಲೇ ತರಕಾರಿ ಸಾಮಗ್ರಿಗಳ ಕೊರತೆ ಉಂಟಾಗಿರುವುದರಿಂದ ಎಲ್ಲಾ ಮಾಂಸದ ಅಂಗಡಿಗಳನ್ನು ತೆರೆಯಬೇಕು. ನಗರದ ಹೈಪರ್ ಮಾರ್ಕೆಟ್ ಸೂಪರ್ ಮಾರ್ಕೆಟ್ ಗಳಿಗೆ 24×7 ಸಾಮಗ್ರಿ ಪೂರೈಕೆಗೆ ಅವಕಾಶ ನೀಡಿದರೆ ನಗರ ಪ್ರದೇಶದ ಜನರು ಮನೆಗಳಿಂದ ಹೊರ ಬರುವುದನ್ನು ತಪ್ಪಿಸಬಹುದು ಎಂದು ನಿಯೋಗದ ಸದಸ್ಯರು ಸಲಹೆ ನೀಡಿದರು.

ನಿಯೋಗದಲ್ಲಿ ಪಾಲಿಕೆಯ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಶಾಸಕರಾದ ಯು. ಟಿ. ಖಾದರ್, ಐವನ್ ಡಿಸೋಜಾ, ಮಲರ್ ಮೋನು. ಪಾಲಿಕೆಯ ಕಾರ್ಪೊರೇಟರ್ ಗಳು, ಮಾಜಿ ಮೇಯರ್ ಗಳು ಉಪಸ್ಥಿತರಿದ್ದರು.