ಮಂಗಳೂರು: ರಾಜ್ಯಾದ್ಯಂತ ಕೊರೊನಾ (ಕೋವಿಡ್-19 ವೈರಾಣು) ಹರಡುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿರುವುದರಿಂದ ರೈತರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿಯಿಂದ ನೀಡಲಾಗುತ್ತಿರುವ ಪ್ರತಿ ಟನ್ ಪಶು ಆಹಾರಕ್ಕೆ ರೂ.1000/- ರಿಯಾಯಿತಿ ದರವನ್ನು ದಿನಾಂಕ 30.04.2020 ರವರೆಗೆ ಮುಂದುವರಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ. ರವಿರಾಜ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಘಗಳ ಹಾಲು ಸಂಗ್ರಹಣಾ ಸಮಯದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಒಕ್ಕೂಟವು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (Standard Operating Proceedure) ನಿಗದಿಪಡಿಸಿ, ಅದರಂತೆ ಕಾರ್ಯನಿರ್ವಹಿಸಲು ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸುತ್ತೋಲೆ ಮೂಲಕ ಮಾರ್ಗದರ್ಶನ ನೀಡಲಾಗಿದೆ.
ಪ್ರಾಥಮಿಕ ಹಾಲು ಉತ್ಪಾದಕರು/ ಸಂಘಗಳ ಸಿಬ್ಬಂದಿಗಳು/ ಸದಸ್ಯರು ಶುದ್ಧ ಹಾಲು ಉತ್ಪಾದನೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಲು ಸಂಗ್ರಹಿಸುವ ಮೊದಲು ಸೋಪು/ಸ್ಯಾನಿಟೈಸರ್‌ನಿಂದ ಸ್ವಚ್ಚವಾಗಿ ಕೈ ತೊಳೆದುಕೊಂಡು, ವೈಯಕ್ತಿಕ ಸ್ವಚ್ಛತೆ ಕಾಯ್ದುಕೊಂಡು ಬರುವುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಲು ಸಂಗ್ರಹಣಾ ಸಮಯವನ್ನು ಮರು ನಿಗದಿಪಡಿಸಿ, ಪ್ರತಿ ಹಾಲು ಉತ್ಪಾದಕರು ಸಾಮಾಜಿಕ ಅಂತರ ಕಾಯ್ದುಕೊಂಡು ಹಾಲನ್ನು ಸಂಘಕ್ಕೆ ಸರಬರಾಜು ಮಾಡುವುದು.
ವಿಶ್ವವ್ಯಾಪಿ ಹರಡಿರುವ ಕೊರೊನಾ ಸೋಂಕಿನ ಸಂಧಿಗ್ಧ ಪರಿಸ್ಥಿತಿಯಲ್ಲಿ “ನಂದಿನಿ” ಬಳಗದವರು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದಕ್ಕೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆಯವರು ಆಡಳಿತ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸಿರುತ್ತಾರೆ.
ಒಕ್ಕೂಟವು ಅಗತ್ಯ ಸೇವೆ ಕಾಯ್ದೆಯಡಿಯಲ್ಲಿ ಬರುವುದರಿಂದ ಒತ್ತಡಗಳ ನಡುವೆ ಹಾಲು ಉತ್ಪಾದಕರು, ಸಂಘಗಳ ಸಿಬಂದಿಗಳು, ಹಾಲು ಸಂಗ್ರಹಣಾ / ವಿತರಣಾ ವಾಹನಗಳ ಸಿಬ್ಬಂದಿಗಳು, ಡೀಲರುಗಳು, ಒಕ್ಕೂಟದ ಅಧಿಕಾರಿ/ಸಿಬ್ಬಂದಿಗಳು, ಕಾರ್ಮಿಕ ಗುತ್ತಿಗೆದಾರರ ಸಿಬ್ಬಂದಿಗಳು ಸಮಾಜದ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಂದಿನಿ ಬಳಗದಲ್ಲಿ ಅಸಂಘಟಿತ ವಲಯದ ಶ್ರಮಿಕರು ದುಡಿಯುತ್ತಿರುವುದರಿಂದ ಈ ಸಂದರ್ಭದಲ್ಲಿ ಉತ್ತಮ ಸೇವೆ ನೀಡಲು ಉತ್ತೇಜನ ನೀಡುವ ಸಲುವಾಗಿ ಸಾಮಾಜಿಕ ಸುರಕ್ಷಾ ಯೋಜನೆಯಡಿ ವಿಶೇಷ ಆರ್ಥಿಕ ಭದ್ರತೆ ನೀಡಲು ಒಕ್ಕೂಟದ ಅಧ್ಯಕ್ಷರು ಮನವಿ ಮಾಡಿರುತ್ತಾರೆ.