ಮಂಗಳೂರು :- ಬಂದರು ಇಲಾಖೆಯು ಜಿಲ್ಲೆಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಂದರು ಮತ್ತು ಮೀನುಗಾರಿಕೆ ವ್ಯಾಪ್ತಿಯ ಪ್ರಮುಖ ಕಾಮಗಾರಿಗಳ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಗರ ಮಾಲಾ ಯೋಜನೆಯಡಿಯಲ್ಲಿ ಹಳೇ ಬಂದರಿನಲ್ಲಿ ರೂ. 65 ಕೋಟಿ ವೆಚ್ಚದಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ, ರೂ 29 ಕೋಟಿ ವೆಚ್ಚದಲ್ಲಿ ಕ್ಯಾಪಿಟಲ್ ಡ್ರೆಜಿಂಗ್ ಕಾಮಗಾರಿ, ರೂ 20 ಕೋಟಿ ವೆಚ್ಚದಲ್ಲಿ ಬೆಂಗರೆ ಬದಿಯಲ್ಲಿ ಹೊಸ ಡ್ರೈಡಾಕ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದರ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರುದಲ್ಲಿ ನಡೆಸಿ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳುವಂತೆ ಸಚಿವರು ಸೂಚಿಸಿದರು.
ಸಮುದ್ರ ಕೊರೆತೆ ಪ್ರತಿಬಂಧಕ ಕಾಮಗಾರಿಗಳ ಅಡಿ ರೂ 29.91 ಕೋಟಿ ವೆಚ್ಚದಲ್ಲಿ 25 ಕಾಮಗಾರಿಗಳು ನಡೆಯಲಿದೆ, ಇದರಲ್ಲಿ ತುರ್ತು ಸಮುದ್ರ ತಡೆಗೋಡೆ ಕಾಮಗಾರಿ ಹಾಗೂ ದೀರ್ಘಕಾಲಿಕ ಸಮುದ್ರ ತಡೆಗೋಡೆ ಕಾಮಗಾರಿಗಳು ಸೇರಿವೆ ಎಂದು ಹೇಳಿದರು.
ಬಂದರು ಇಲಾಖೆ ಅಧಿಕಾರಿಗಳು ಸಭೆಗೆ ವಿವಿಧ ಕಾಮಗಾರಿಗಳ ಮಾಹಿತಿ ನೀಡಿದರು. 2019-20 ನೇ ಸಾಲಿನಲ್ಲಿ ಮಂಗಳೂರು ಬಂದರು ಧಕ್ಕೆ ಮುಂಭಾಗದಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ, ರೂ 99.50 ಲಕ್ಷ ವೆಚ್ಚದಲ್ಲಿ ಬಿಎಮ್‍ಡಿ ಫೆರಿಯಿಂದ ಬೆಂಗರೆವರೆಗೆ ಹೂಳೆತ್ತುವ ಕಾಮಗಾರಿ, ರೂ 5 ಲಕ್ಷ ವೆಚ್ಚದಲ್ಲಿ ಉತ್ತರ ಧಕ್ಕೆಯಲ್ಲಿ ಹೈಮಾಸ್ಟ್ ಕಂಬಗಳಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಿ ವಿದ್ಯುದೀಕರಣಕ್ಕೆ ಕಾಮಗಾರಿ, ರೂ 4.85 ಲಕ್ಷ ವೆಚ್ಚದಲ್ಲಿ ಹಳೇ ಬಂದರು ದಕ್ಷಿಣದಲ್ಲಿ ಹೈಮಾಸ್ಟ್ ಕಂಬಗಳಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಿ ವಿದ್ಯುದೀಕರಣಕ್ಕೆ ಕಾಮಗಾರಿ, ರೂ 5 ಲಕ್ಷ ವೆಚ್ಚದಲ್ಲಿ ಉತ್ತರ ಧಕ್ಕೆಯಲ್ಲಿ ಆರ್‍ಸಿಸಿ ಹ್ಯೂಮ್ ಪೈಪ್ ಚರಂಡಿ ನಿರ್ಮಾಣ ಕಾಮಗಾರಿ, ರೂ. 49.50 ಲಕ್ಷ ವೆಚ್ಚದಲ್ಲಿ ದಕ್ಷಿಣ ವಾರ್ಫ್‍ನಲ್ಲಿ ಗಾಲ್‍ವ್ಯಾಲ್ಯೂಮ್ ಸೀಟ್ ಒದಗಿಸುವುದು ಮತ್ತು ಗೋಡೌನ್ ಸುಧಾರಣೆಗೆ ಕಾಮಗಾರಿ ನಡೆಯಲಿದೆ ಎಂದರು.
ರೂ 42 ಲಕ್ಷ ವೆಚ್ಚದಲ್ಲಿ ಹಳೆಯ ಮಂಗಳೂರಿನ ಎ ಮತ್ತು ಬಿ ವಸತಿಗೃಹ ನವೀಕರಣ ಕಾಮಗಾರಿ, ರೂ. 13 ಲಕ್ಷ ವೆಚ್ಚದಲ್ಲಿ ಉತ್ತರ ಧಕ್ಕೆಯಲ್ಲಿ ಲಕ್ಷದ್ವೀಪ ಸಮೂಹಕ್ಕೆ ನೀಡಿದ ಕೊಯಿರ್ ಮೊನೋಪೊಲಿ ಕಟ್ಟದ ಅಭಿವೃದ್ಧಿ ಕಾಮಗಾರಿ, ರೂ 16 ಲಕ್ಷ ವೆಚ್ಚದಲ್ಲಿ ಪಂಪ್‍ಹೌಸ್ ಕಟ್ಟಡ ಮತ್ತು ಗೋ ಡೌನ್ ಬಳಿ ವಿಶ್ರಾಂತಿ ಕೊಠಡಿಯ ನವೀಕರಣ ಮತ್ತು ಹಳೆಯ ಬಂದರಿನ ದಕ್ಷಿಣ ವಾರ್ಫ್‍ನಲ್ಲಿ ಹಾರ್ಡ್ ಸರ್ಫೇಸ್ ಕಾಮಗಾರಿ, ರೂ. 8 ಲಕ್ಷ ವೆಚ್ಚದಲ್ಲಿ ಮಂಗಳೂರು ಹಳೇ ಬಂದರಿನಲ್ಲಿ ಡೈಡಾಕ್‍ನಲ್ಲಿ 25 ಎಚ್‍ಪಿ ಹೊಸ ಪಂಪ್ ಅಳವಡಿಸಿ ಅಭಿವೃದ್ಧಿ ಕಾಮಗಾರಿ, ರೂ 5 ಲಕ್ಷ ವೆಚ್ಚದಲ್ಲಿ ಗಡಿ ಗುರುತಿಸಲು ಗಡಿಕಲ್ಲುಗಳನ್ನು ಅಳವಡಿಸುವ ಕಾಮಗಾರಿಗೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಮಂಗಳೂರು ಹಳೇ ಬಂದರಿನಲ್ಲಿ ಉತ್ತರ ಧಕ್ಕೆಯಿಂದ ಅಳಿವೆ ಬಾಗಿಲಿನ ವರೆಗೆ ನದಿಯ ವಾಣಿಜ್ಯ ಚ್ಯಾನೆಲ್‍ನಲ್ಲಿ ಸುಮಾರು 3,800 ಮೀ.ಉದ್ದಕ್ಕೆ, 80.ಮೀ ಅಗಲಕ್ಕೆ ಮತ್ತು 7 ಮೀ ಆಳದವರೆಗೆ ಹೂಳೆತ್ತಲು ಅವಕಾಶ ನೀಡಿದ್ದು ಹಾಗೂ ಹಳೇ ಬಂದರು ವ್ಯಾಪ್ತಿಯ ಬೆಂಗರೆ ಬದಿಯಲ್ಲಿ ವಾಣಿಜ್ಯ ನಾವೆಗಳ ದುರಸ್ಥಿಗೆ ಅನುಕೂಲವಾಗುವಣತೆ 80 ಮೀ ಉದ್ದಕ್ಕೆ 30 ಮೀ ಅಗಲಕ್ಕೆ ಹೊಸ ಡ್ರೈ ಡಾಕ್ ನಿರ್ಮಾಣ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಡೆಸುವಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಕಳೆಪೆ ಕಾಮಗಾರಿ ಕಂಡುಬಂದಲ್ಲಿಅಂತಹ ಗುತ್ತಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ರಾಜ್ಯ ಸರ್ಕಾರ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕಟಿಬದ್ಧವಾಗಿದ್ದು ಈ ನಿಟ್ಟಿನಲ್ಲಿ ಬಂದರುಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಇನ್ನೂ ಹೆಚ್ಚಿನ ಅನುದಾನ ಬೇಕಾದಲ್ಲಿ ರಾಜ್ಯ ಸರ್ಕಾರ ವತಿಯಿಂದ ಬಿಡುಗಡೆಗೆ ಮಾಡುವಂತೆ ಪ್ರಯತ್ನಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ. ಜೆ ರೂಪಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.