ಇದರ ಹೆಸರು ನಾಗಲಿಂಗ ಪುಷ್ಪದ ಮರ, ಆದರೆ ‌ಈ ಹೆಸರು ನೋಡಿ ಮೋಸ ಹೋಗಬೇಡಿ, ಇದು ವೆಸ್ಟ್ ಇಂಡೀಸ್ ಮೂಲದ ಮರವಾಗಿದೆ. 

ಇದನ್ನು ನಾಗಲಿಂಗ ಹೂವಿನ ಮರ ಎಂದರೂ ಎದ್ದು ಕಾಣುವುದು ಗೊಂಚಲು ಗೊಂಚಲಾಗಿರುವ ಕಾಯಿಗಳು. ಇದರ ಹೂವು ಕೂಡ ಆಕರ್ಷಕ, ಆದರೆ ಪರಿಮಳ ಇಲ್ಲ. ಈ ಹೂವು ಅರಳುವ ಮೊಗ್ಗು ಮಾಲೆ ಕೂಡ ‌ಗೊಂಚಲಾಗಿ ಇರುತ್ತದೆ. ಹೂವು ಅರಳಿದಾಗ ಅದರ ನಡುವಿನ ಪಕಳೆಯು ಹೂವಿನ ಕೇಸರದ ಮೇಲೆ ಬಾಗಿದ್ದು, ನಾಗ ಜೆಡೆಯಂತೆ ಕಾಣುವುದರಿಂದ ಇದನ್ನು ನಾಗಲಿಂಗ ಪುಷ್ಪ ಎನ್ನುತ್ತಾರೆ. ಬೆಂಗಳೂರು ಕಡೆ ಕೆಲವು ಶಿವಾರಾಧಕರು ಇದನ್ನು ಬಳಸುವುದಿದೆ.

ಮಂಗಳೂರಿನಲ್ಲಿ ವಿಶ್ವವಿದ್ಯಾಲಯ ಕಾಲೇಜಿನ ಎದುರು, ಕದ್ರಿ ಮೊದಲಾದೆಡೆಗಳಲ್ಲಿ ಈ ಮರ ಕಾಣಬಹುದು. ಕುದ್ರೋಳಿ ದೇವಸ್ಥಾನಕ್ಕೆ ಜಾಗ ನೋಡಲು ನಾರಾಯಣ ಗುರುಗಳು ಬಂದಾಗ 1908ರಲ್ಲಿ ಈ ನಾಗಲಿಂಗ ಹೂವಿನ ಮರಗಳಿದ್ದವೆಂದು ಬಲ್ಲವರು ಹೇಳುತ್ತಾರೆ. ಇಂಗ್ಲೀಷ್ ನಲ್ಲಿ ಇದನ್ನು ಕ್ಯಾನನ್ ಬಾಲ್ ಟ್ರೀ ಎಂದರೆ ಫಿರಂಗಿ ಗುಂಡಿನ ಮರ ಎನ್ನುತ್ತಾರೆ

ಗೇರು, ಕಿತ್ತಳೆ, ಅನಾನಸ್, ಬೆಣ್ಣೆ ಹಣ್ಣು, ದೀಗುಜ್ಜ ಎಂದು ನಾನಾ ಮರಗಿಡಗಳನ್ನು ಭಾರತಕ್ಕೆ ತಂದ ಪೋರ್ಚುಗೀಸ್ ನಾವಿಕರೇ ಇದನ್ನೂ ಗೋವಾ ಮೂಲಕ ಭಾರತದ ಬೇರೆ ಸ್ಥಳಗಳಿಗೆ ಪರಿಚಯಿಸಿದರು. ನಮ್ಮ ಸುತ್ತಿನಲ್ಲಿ ಈ ಮರ ಸುಮಾರು 250 ವರ್ಷಗಳಿಂದ ಇದೆ.

ಇದರ ಕಾಯನ್ನು ಬಳಸುವುದು ಕಷ್ಟ. ಭಾರತದಲ್ಲಿ ಯಾರೂ ಬಳಸುವುದೂ ಇಲ್ಲ. ಈ ಕಾಯಿ ಹಣ್ಣಾಗಲು 6 ತಿಂಗಳ ಕಾಲ ತೆಗೆದುಕೊಳ್ಳುತ್ತದೆ. ಅನಂತರ ಮೇಲಿನ ನಾರು ತೊಗಟೆ ‌ ಒಡೆದು ತೆಗೆದರೆ ನಡುವೆ ತಿರುಳು ಇದೆ. ಇದನ್ನು ವೆಸ್ಟ್ ಇಂಡೀಸ್ ಜನ ಬಳಸುತ್ತಾರೆ. ನಮ್ಮಲ್ಲಿ ಬೇಲದ ಕಾಯಿ ಬಳಸುವುದಿಲ್ಲವೆ ಹಾಗೆ.


-By Perooru Jaru