ಕ್ರಿಸ್ಮಸ್ ಹಬ್ಬಕ್ಕೆ ವಾರ ಇರುವಾಗ ಗೋದಲಿ ತಯಾರಿ ಹಿಂದೆಲ್ಲಾ ಮಕ್ಕಳ, ಹಿರಿಯರದೂ ಮೆಚ್ಚಿನ ಕಜ್ಜ; ಇಂದು ಕಾಸಿದ್ರೆ ಕ್ಷಣದಲ್ಲಿ ಗೋದಲಿ ಸಿದ್ಧ.
ಕ್ರಿಸ್ಮಸ್ ಹಬ್ಬಕ್ಕೆ ವಾರ ಇರುವಾಗ ಎರಡು ಬುಟ್ಟಿ ಮಣ್ಣು ತಂದು ಸುರಿಯುವುದರೊಂದಿಗೆ ಗೋದಲಿ ತಯಾರಿಯ ಕೆಲಸ ಆರಂಭವಾಗುತ್ತಿತ್ತು. ಬಹುಪಾಲು ಮಕ್ಕಳೇ ಇದರಲ್ಲಿ ತೊಡಗಿಕೊಳ್ಳುತ್ತಿದ್ದುದು. ಮಣ್ಣನ್ನು ಏರಿಳಿತದಲ್ಲಿ ಹರಡಿ ಒಂದಷ್ಟು ಹುಲ್ಲು ಇಲ್ಲವೇ ಭತ್ತ ಬಿತ್ತು ಬೆಳೆಸುವುದು. ಹಟ್ಟಿಗೆ ಒಣ ಹುಲ್ಲು ಬಳಕೆ, ಅದರಲ್ಲೇ ಪುಟ್ಟ ಗುಡಿಸಲು. ಒಂದೆರಡು ಪುಟ್ಟ ದನಗಳ ಮೂರ್ತಿ.
ಪುಟ್ಟ ಏಸುವನ್ನು ಮಡಿಲಲ್ಲಿ ಇಟ್ಟುಕೊಂಡ ಇಲ್ಲವೇ ಗೋದಲಿಯಲ್ಲಿ ಮಲಗಿಸಿದ ಕಿರು ಮೂರ್ತಿಗಳು. ಹತ್ತಿರದಲ್ಲೇ ನಿಂತ ಮೇರಿಯ ಪತಿ. ಕೆಲವದರಲ್ಲಿ ದೂರದಲ್ಲಿ ಜಾಣರು ಬರುತ್ತಿರುವ ಮೂರ್ತಿ ಮತ್ತು ನೇತಾಡುವ ನಕ್ಷತ್ರಗಳು. ಸಾಧ್ಯವಾದರೆ ನೀರು ಹರಿಯುವ, ಹತ್ತಿಯಿಂದ ಗುಡ್ಡದ ಮೇಲೆ ಮಂಜು ಬಿದ್ದ ಚಿತ್ರಣ. ಇದಕ್ಕೆಲ್ಲ ಶ್ರಮ ಮತ್ತು ಶ್ರದ್ಧೆ ಬೇಕಿತ್ತು.
ಇಂದು ಕಾಸಿದ್ದರೆ ಹೈಟೆಕ್ ಗೋದಲಿಗೆ ಬೇಕಾದ ಎಲ್ಲ ಸಿದ್ಧ ವಸ್ತುಗಳು ದೊರೆಯುತ್ತದೆ. ಅವನ್ನು ತಂದು ಜೋಡಿಸುವುದಷ್ಟೆ ಕೆಲಸ.
ನಕ್ಷತ್ರಗಳನ್ನು ಕೂಡ ಹಿಂದೆ ಮಕ್ಕಳೇ ತಯಾರಿಸುತ್ತಿದ್ದರು. ಇಂದು ಅದೂ ಅಂಗಡಿಯಲ್ಲಿ ಸಿಗುತ್ತದೆ. ಸೂಜಿ ಮೊನೆ ಎಲೆಗಳ ಕ್ರಿಸ್ಮಸ್ ಮರ ಎಂದು ಎಲ್ಲವನ್ನೂ ಕಾಸಿತ್ತು ತರುವುದೇ ಇಂದಿನ ಮರ್ಜಿ.
ಜಗತ್ತಿನ ಅಂಗಡಿಗಳಲ್ಲಿ ದೊರೆಯುವ ಕ್ರಿಸ್ಮಸ್ ಸಿದ್ಧ ವಸ್ತುಗಳಲ್ಲಿ 80% ಚೀನಾದಿಂದ ತಯಾರಾಗಿ ಬರುತ್ತವೆಂಬುದು ನಂಬಲೇಬೇಕಾದ ಸತ್ಯ.
-By Perooru Jaru