ಉಡುಪಿ, ಫೆ 22:  ದೇಶದಲ್ಲಿ ಪುರುಷ ಹಾಗೂ ಮಹಿಳೆಯರ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಇದನ್ನು ತಡೆಯಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.

ಅವರು ಇಂದು ನಗರದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಅಭಿಯಾನದ ಅಂಗವಾಗಿ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ವೈದ್ಯಾಧಿಕಾರಿಯವರಿಗೆ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ಮಹಿಳೆ ಮತ್ತು ಪುರುಷರ ಅನುಪಾತದ ಅಸಮತೋಲನದಿಂದ ಅನೇಕ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಯುವ ಗಂಡು ಮಕ್ಕಳು ಮದುವೆಯಾಗಲು ಹೆಣ್ಣು ಮಕ್ಕಳು ಸಿಗದೇ ಇರುವುದು ನಾವು ಕಾಣುತ್ತಿದ್ದೇವೆ. ಕಳೆದ ತಿಂಗಳು ರಾಜ್ಯ ಮಹಿಳಾ ನಿಲಯದಲ್ಲಿ ಅನಾಥ ಹೆಣ್ಣು ಮಕ್ಕಳ ಮದುವೆ ಯನ್ನು ನಿಯಮಾನುಸಾರ ಮಾಡಿದ ಸುದ್ದಿಯು ಪತ್ರಿಕೆಯಲ್ಲಿ ಓದಿದ ಅನೇಕ ಯುವಕರು ನಮಗೆ ಹೆಣ್ಣು ಬೇಕೆಂಬ ಅನೇಕ ಕರೆಗಳು ಪ್ರತಿದಿನ ಬರುತ್ತಿದೆ. ಇದೇ ಒಂದು ಉದಾಹರಣೆಯಾಗಿದೆ ಎಂದರು.

ಹುಟ್ಟಿದ ಮಗು ಹೆಣ್ಣಾದರೂ ಅಥವಾ ಗಂಡಾದರು ಇಬ್ಬರನ್ನೂ ಬೆಳೆಸಲು ಯಾವುದೇ ವ್ಯತ್ಯಾಸ ಇರುವುದಿಲ್ಲ. ಇಬ್ಬರಿಗೂ ಶಿಕ್ಷಣ ಸೇರಿದಂತೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಖರ್ಚಾಗುತ್ತದೆ ಎನ್ನುವುದು ಭ್ರಮೆಯಾಗಿದೆ. ಇದರಿಂದ ಪ್ರತಿಯೊಬ್ಬರೂ ಹೊರಬರಬೇಕು ಎಂದರು.

ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಚ್ಚುವುದು ಹಾಗೂ ಗರ್ಭಪಾತ ಮಾಡುವುದು ಕಾನೂನು ಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧ ವಾಗಿರುತ್ತದೆ. ಅಂತಹ ಪ್ರಕರಣ ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 

ಸರಕಾರ ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ಹಾಗೂ ತಡೆ ಕಾಯಿದೆಯನ್ನು 1996 ರಲ್ಲಿ ಜಾರಿಗೆ ತಂದಿದ್ದು, ಕಾಯಿದೆಯನ್ನು ಕುರಿತು ಇಂದು ಏರ್ಪಡಿಸಿರುವ ಕಾರ್ಯಗಾರದಲ್ಲಿ ಮಾಹಿತಿಯನ್ನು ಪ್ರತಿಯೊಬ್ಬರೂ ಹೊಂದಿ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇದರ ಜವಾಬ್ದಾರಿ ವೈದ್ಯಾಧಿಕಾರಿಗಳ ಮೇಲಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಸರಕಾರ ಲಿಂಗ ತಾರತಮ್ಯ ನಿವಾರಣೆ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಒಂದೇ ಉದ್ದೇಶದಿಂದ ಭೇಟಿ ಪಡಾವೋ ಭೇಟಿ ಬಚಾಚೋ ಆಂದೋಲನವನ್ನು ಜಾರಿಗೆ ತಂದಿದೆ. ಲಿಂಗಾನುಪಾತದ ವ್ಯತ್ಯಾಸ ದಿನೇ ದಿನೇ ಹೆಚ್ಚುತ್ತಾ ಹೋದಲ್ಲಿ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಪಿ.ಸಿ.ಪಿ.ಎನ್.ಡಿ.ಟಿ ಸಮಿತಿಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಮಾತನಾಡಿ, ಸಮಾಜದಲ್ಲಿನ ಗಂಡು ಮತ್ತು ಹೆಣ್ಣಿನ ಅನುಪಾತ ಸಮನಾಗಿರಬೇಕು. ಗಂಡು ಹೆಣ್ಣು ಎಂಬ ತಾರತಮ್ಯ ಯಾರೊಬ್ಬರೂ ಹೊಂದಬಾರದು ಎಂದ ಅವರು, ಸರಕಾರ ಜಾರಿಗೆ ತಂದಿರುವ ಭ್ರೂಣ ಲಿಂಗ ಪತ್ತೆ ಕುರಿತ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕೆ ಹಾಗೂ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಪೋಕ್ಸೋ  ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಸರಕಾರಿ ಹಾಗೂ ಖಾಸಗೀ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ನಿರೂಪಿಸಿದರೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.