ಕಾರ್ಕಳ:  ಸಹಕಾರ ಭಾರತಿ ತಾಲೂಕು ಮಟ್ಟದ ಅಭ್ಯಾಸ ವರ್ಗವು ಫೆಬ್ರವರಿ 19 ಸೋಮವಾರದಂದು ಕಾರ್ಕಳದ ಲ್ಯಾಂಪ್ ಸೊಸೈಟಿ ಸಭಾಭವನದಲ್ಲಿ ಜರುಗಿತು.

ಜ್ಯೋತಿ ಪ್ರಜ್ವಲನದ ಮೂಲಕ ಅಭ್ಯಾಸ ವರ್ಗವನ್ನು ಉದ್ಘಾಟಿಸಿ, ಕಾರ್ಕಳ ಲ್ಯಾಂಪ್ ಸೊಸೈಟಿಯ ಅಧ್ಯಕ್ಷರಾದ ರಾಘವ ನಾಯ್ಕರವರು ಮಾತನಾಡುತ್ತಾ, ಪ್ರತಿಯೊಬ್ಬರ ಬದುಕಿನಲ್ಲಿಯೂ ಕಲಿಯುವುದು ಜೀವನಪೂರ್ತಿ ಇರುತ್ತದೆ. 

ಸಹಕಾರ ಭಾರತಿ ಪ್ರತಿ ವರ್ಷ ಅಭ್ಯಾಸ ವರ್ಗವನ್ನು ಆಯೋಜಿಸುವುದರ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಯ ಜೊತೆಗೆ, ಸಂಘಟನಾತ್ಮಕ ವಿಚಾರಗಳು, ಸಹಕಾರಿ ಕಾಯಿದೆ ಮತ್ತು ಆಡಳಿತ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಕಾರ ಭಾರತಿಯ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ, "ಸಹಕಾರದಿಂದ ಸಮೃದ್ಧಿ" ಎನ್ನುವ ಘೋಷ ವಾಕ್ಯದೊಂದಿಗೆ, ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಸದುದ್ದೇಶದಿಂದ ಪ್ರಧಾನಿ  ನರೇಂದ್ರ ಮೋದಿಯವರು ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕವಾದ ಕೇಂದ್ರ ಸಚಿವಾಲಯವನ್ನು ನೀಡಿ  ಕೇಂದ್ರ ಗೃಹ ಸಚಿವರಾದ  ಅಮಿತ್ ಶಾ ರವರನ್ನೇ  ಸಹಕಾರ ಸಚಿವರನ್ನಾಗಿ ಆಯ್ಕೆ ಮಾಡಿರುವುದು,  ಸಹಕಾರ ಕ್ಷೇತ್ರದ ಬಗ್ಗೆ ಕೇಂದ್ರ ಸರಕಾರಕ್ಕಿರುವ ಕಾಳಜಿ ಮತ್ತು ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಕರ್ನಾಟಕ ರಾಜ್ಯದಲ್ಲಿ 52 ವಿವಿಧ ಆರ್ಥಿಕ ಚಟುವಟಿಕೆಗಳನ್ನು ನಡೆಸುವ, ಸುಮಾರು 45 ಸಾವಿರದಷ್ಟು  ಸಹಕಾರಿ ಸಂಸ್ಥೆಗಳಿದ್ದು, ಅದರಲ್ಲಿ 16,000 ಹಾಲು ಉತ್ಪಾದಕ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರ ಜೀವಾಳವಾಗಿದೆ ಎಂದರು.

ದೇಶದಲ್ಲಿ ಗುಜರಾತ್ನ "ಅಮುಲ್" ಬಳಿಕ ಕರ್ನಾಟಕದ ಕೆಎಂಎಫ್ "ನಂದಿನಿ"ಯು ಎರಡನೇ ಸ್ಥಾನದಲ್ಲಿದ್ದು ಸಹಕಾರಿ ಕ್ಷೇತ್ರದಲ್ಲಿ ಹೈನೋದ್ಯಮದಲ್ಲಿ ಹಲವಾರು ಸಾಧನೆಯ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ ಎಂದರು.

ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ  ಹೈನುಗಾರರು ಸಂಘಗಳಿಗೆ ಪ್ರತಿ ದಿನ ಪೂರೈಸುವ ಹಾಲಿಗೆ ಹೆಚ್ಚಿನ ದರ, ಪಶು ಆಹಾರಕ್ಕೆ ಸಬ್ಸಿಡಿ, ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನದ ಬಿಡುಗಡೆ,ರಾಜ್ಯದಲ್ಲಿ ಪಶುವೈದ್ಯರ ಕೊರತೆಯನ್ನು ನೀಗಿಸಿ ಹೊಸ ಪಶು ವೈದ್ಯರ ನೇಮಕಾತಿಯ ಬಗ್ಗೆ ಸಹಕಾರ ಭಾರತಿಯು ಹೈನುಗಾರರ ಪರವಾಗಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಿದ್ದು, ಸರಕಾರೇತರ, ರಾಷ್ಟ್ರಮಟ್ಟದ ಏಕೈಕ ಸಹಕಾರಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರ ಭಾರತಿ ಕಾರ್ಕಳ ತಾಲೂಕು ಅಧ್ಯಕ್ಷರಾದ ಹರೀಶ್ ಕಲ್ಯಾ ರವರು ಸ್ವಾಗತಿಸಿ ,ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿಯವರು ವಂದನಾರ್ಪಣೆಗೈದರು.

ಮಾಹಿತಿ ಕಾರ್ಯಾಗಾರ

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ  ಮೋಹನ್ ಕುಂಬಳೇಕರ್ರವರು ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ  ಸವಿವರವಾದ ಮಾಹಿತಿ ನೀಡಿದರು.

ಸಹಕಾರಿ ಕಾಯ್ದೆ ಮತ್ತು ಆಡಳಿತ ನಿರ್ವಹಣೆಯ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಮಂಗಳೂರಿನ  ಅಧೀಕ್ಷಕರಾದ  ಎನ್. ಜೆ. ಗೋಪಾಲ್ ರವರು ಮಾಹಿತಿ ಮಾರ್ಗದರ್ಶನ ನೀಡಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಜೊತೆಗೆ ನೇರ ಸಂವಾದ ನಡೆಸಿದರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಸಹಕಾರ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷರಾದ  ಬೋಳ ಸದಾಶಿವ ಶೆಟ್ಟಿಯವರು ಮಾತನಾಡುತ್ತಾ, ಸಹಕಾರಿ ಕ್ಷೇತ್ರ ಜನಜೀವನದ ಅವಿಭಾಜ್ಯ ಅಂಗವಾಗಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.

ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿಯೂ ಸಹಕಾರ ಭಾರತೀಯು ಸಕ್ರಿಯವಾಗಿದ್ದು, ಸಂಘಟನಾತ್ಮಕವಾಗಿ, ಆಂದೋಲನಾತ್ಮಕವಾಗಿ, ಪ್ರಾತಿನಿಧ್ಯಾತ್ಮಕವಾಗಿ ಮತ್ತು ರಚನಾತ್ಮಕವಾಗಿ ವರ್ಷವಿಡೀ ಕ್ರಿಯಾಶೀಲತೆಯಿಂದ  ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಕಾರ ಭಾರತಿಯ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕರು ಹಾಗೂ ಖ್ಯಾತ ನ್ಯಾಯವಾದಿಗಳಾದ ಮಂಜುನಾಥ ಎಸ್ಕೆ ಯವರು,  ರಾಜ್ಯ ಸರಕಾರವು ಸಹಕಾರ ಕ್ಷೇತ್ರದಲ್ಲಿ  ಹೊಸ ಮಸೂದೆಗಳ ಮೂಲಕ ತರುತ್ತಿರುವ ಬದಲಾವಣೆಗ‌ಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು.

ಸಹಕಾರ ಭಾರತಿ ಉಡುಪಿ ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕರಾದ ಕನ್ನಾರು ಕಮಲಾಕ್ಷ ಹೆಬ್ಬಾರ್ ರವರು ಉಪಸ್ಥಿತರಿದ್ದರು. ಲ್ಯಾಂಪ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ  ದಿವಾಕರ ಶೆಟ್ಟಿಯವರು ಮಾಹಿತಿ ಕಾರ್ಯಾಗಾರದ ಸಂಯೋಜನೆ ಮಾಡಿದರು. 

ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ  ನೀರೆ ರವೀಂದ್ರ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು.