ಜಗತ್ತಿನಲ್ಲಿ ಎಲ್ಲ ಸಂಬಂಧಗಳಿಗಿಂತಲೂ ಶ್ರೇಷ್ಠವಾದ ಸಂಬಂಧ ಎಂದರೆ ಅದು ಸ್ನೇಹ ಮಾತ್ರ.
ರಕ್ತ ಸಂಬಂಧಗಳನ್ನು ಮೀರಿದ ಬಂಧವಿದು. ಯಾವ ಜಾತಿ, ಧರ್ಮ, ಲಿಂಗಭೇದ ವಯಸ್ಸು ಶ್ರೀಮಂತ ಬಡವನೆಂದು ಕೇಳದೆ ಅರಳುವ, ಪುಷ್ಪವಿದು ರಕ್ತ ಹಂಚಿಕೊಂಡು ಒಡಹುಟ್ಟದೇ ಇದ್ದರೂ
ಒಂದೇ ತಟ್ಟೆಯಲ್ಲಿ ಊಟ ಮಾಡುವಂತಹ ಸಲುಗೆ ಬೆಸೆಯುವ ಸಾಂಗತ್ಯವಿದು ಸ್ನೇಹವೆಂದರೆ
ಸುಧಾಮ ಕೃಷ್ಣರಂತಿರಬೇಕು.ಕಷ್ಟ ಸುಖದಲ್ಲೂ ತನ್ನ ಇರುವಿಕೆಯನ್ನು ತೋರುವಂತೆ
ಅರ್ಜುನ ಕೃಷ್ಣನಂತೆ ಸದಾ ಸಾರಥಿಯಾಗಿ ಬದುಕಿನ ದಾರಿಗೆ ಮಾರ್ಗದರ್ಶನ ನೀಡುವ ಗುರುವಂತೆ
ದುರ್ಯೋಧನ ಕರ್ಣರಲ್ಲಿರು ಪರಸ್ಪರ ಗಟ್ಟಿ ನಂಬಿಕೆ ಇರಬೇಕು.
ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು, ನಿಷ್ಠೆಯಿಂದ ಇರುವುದು, ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ. ಕೊನೆಯ ಉಸಿರಿನ ತನಕ ಜೊತೆಯಾಗಿರುವುದು ಸ್ನೇಹದ ಅಸ್ಮಿತೆ. ಆಟ, ಪಾಠ, ಊಟದ ಜೊತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಒಬ್ಬ ವ್ಯಕ್ತಿ ಹಂಚಿಕೊಳ್ಳುವುದು ಸ್ನೇಹಿತರೊಂದಿಗೆ ಮಾತ್ರ. ಜೀವನದ ಸಂತೋಷ, ಸಂಭ್ರಮ, ನೋವು, ನಲಿವು ಎಲ್ಲವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಮತ್ತು ಕಷ್ಟದ ದಿನಗಳಿಗೆ ಹೆಗಲು ನೀಡುವವರೇ ಸ್ನೇಹಿತರು. ಕಣ್ಣ ಕಂಬನಿಯ ಒರೆಸುವವ ಸ್ನೇಹಿತ ಹಿತವನ್ನು ಬಯಸುವವ ಸ್ನೇಹಿತ.ಸ್ನೇಹವೆಂದರೆ ಮನಸ್ಸುಗಳ ಬಂಧನ ಪ್ರೀತಿ ಕರುಣೆ ತ್ಯಾಗದ ಪ್ರತಿರೂಪ ಸ್ನೇಹವೆಂದರೆ ನೋವಿಸುವುದಲ್ಲ ಸಾಂತ್ವಾನಿಸುವುದು ಸ್ನೇಹವಾಗುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ ಅಪರಿಚಿತರಿಬ್ಬರ ಜೊತೆಯಾಗಿ ಪ್ರಯಾಣಿಸುವ ಒಂದು ಸಣ್ಣ ಭೇಟಿ ಸಾಕು ಅದೇ ಸ್ನೇಹವನ್ನು ಎಷ್ಟು ಕಾಲ ಉಳಿಯುತ್ತದೆ ಎಷ್ಟು ಆಳವಾಗುತ್ತೆ ಎಂಬುವುದು ನಿಮ್ಮ ಮೇಲೆ ಅವಲಂಭಿಸಿದೆ.
ಇತ್ತೀಚಿನ ದಿನಗಳಲ್ಲಿ ಸ್ನೇಹವೆಂದರೆ ವಾಟ್ಸ್ ಆ್ಯಪ್ ಫೇಸ್‌ಬುಕ್ ಗೆ ಹಾಗೂ ಮೋಜು ಮಸ್ತಿಗೆ ಮಾತ್ರ ಸೀಮಿತವಾಗುತ್ತಿದೆಯಾ ಎನಿಸುತ್ತದೆ ನಿಜ ಸ್ನೇಹ ಅರ್ಥ ಕಳೆದುಕೊಳ್ಳುತಿದೆ. ಸ್ನೇಹದಲ್ಲಿ ಸ್ವಾರ್ಥ ನುಸುಳಿದರೆ ಹಿತವಲ್ಲ. ಸ್ನೇಹಿತರ ಆಯ್ಕೆಯಲ್ಲಿ ಎಡವಬಾರದು
ಸ್ನೇಹವೆಂದರೆ ಅದು ಬರೀ ಸಂಬಂಧವಲ್ಲ ಅಂದೊಂದು ಭಾವ. ಸ್ನೇಹಿತರನ್ನು ಹೆತ್ತವರಿಗಿಂತಲೂ ಹೆಚ್ಚು ಕಾಳಜಿ ವಹಿಸುವವರು ಇದ್ದಾರೆ. ಸ್ನೇಹಿತನ ದುಶ್ಚಟಗಳನ್ನು ನಯವಾಗಿಯೆ ಬಿಡಿಸಿ ಸರಿದಾರಿಗೆ ತರುವವರಿದ್ದಾರೆ.
ಭರ್ತೃಹರಿಯ ನೀತಿಶತಕದಲ್ಲಿರುವ ಪದ್ಯದಲ್ಲಿ ಸೊಗಸಾಗಿ ಗೆಳೆತನದ ಸವಿಯನ್ನು, ಸಾರ್ಥಕ್ಯವನ್ನು ವರ್ಣಿಸಿದ್ದಾರೆ ಸ್ನೇಹಿತರನ್ನು ಹಾಲು ನೀರನ್ನು ಹೋಲಿಸಿದ್ದಾರೆ.
ಹಾಲಿನೊಂದಿಗೆ ನೀರನ್ನು ಬೆರೆಸಿದಾಗ ಅದು ನೀರಿನಲ್ಲಿ ತನ್ನೆಲ್ಲ ಗುಣಗಳನ್ನು ಒಡಮೂಡಿಸುತ್ತದೆ. ಅದನ್ನು ಕಾಯಿಸಲೆಂದು ಒಲೆಯ ಮೇಲಿಟ್ಟಾಗ (ತನ್ನ ಗೆಳೆಯನಾದ) ಹಾಲು ಬೆಂಕಿಯಲ್ಲಿ ಕಾಯುತ್ತಿರುವುದನ್ನು ನೋಡಿ ನೀರು ತನ್ನನ್ನು ಬೆಂಕಿಗೆ ಆಹುತಿಯನ್ನಾಗಿ ಮಾಡಿಕೊಂಡಿತು (ಹಾಲು ಕಾಯುವಾಗ ನೀರಿನಂಶ ಆವಿಯಾಗಿ ಮೇಲೆ ಹೋಗುವುದು ಸಹಜವಷ್ಟೆ). ತನ್ನ ಗೆಳೆಯನಾದ ನೀರಿಗೆ ಆ ತೆರನಾದ ಆಪತ್ತು ಒದಗಿದ್ದನ್ನು ನೋಡಿ ಹಾಲು ತಾನೂ ಬೆಂಕಿಗೆ ಹಾರಲು ಮುಂದಾಯಿತು (ಕ್ರಮೇಣ ಹಾಲು ಉಕ್ಕುಕ್ಕಿ ಮೇಲೆ ಬಂದು ಬೆಂಕಿಗೆ ಬೀಳುವಂತಾಗುತ್ತದೆ). ಆ ಹೊತ್ತಿಗೆ ಅದಕ್ಕೆ ನೀರನ್ನು ಸೇರಿಸಿದಾಗ ಹಾಲು (ತನ್ನ ಗೆಳೆಯ ಮರಳಿ ತನ್ನನ್ನು ಸೇರಿಕೊಂಡನೆಂದು) ಮತ್ತೆ ಪಾತ್ರೆಯ ತಳೆದೆಡೆಗೆ ಸಾಗಿತು. ಸಜ್ಜನರ ಗೆಳೆತನವೂ ಹೀಗೆಯೇ ಇರುತ್ತದೆ.
ಇದು ಸ್ನೇಹಿತರ ನಡುವೆ ನಡೆಯುವ ಗುಣವಿನಿಮಯ, ಅವರಲ್ಲಿ ಒಬ್ಬನಿಗೆ ಆಪತ್ತು ಬಂದಾಗ ಅದಕ್ಕಾಗಿ ತಾನು ಮರುಗುವುದು ಮತ್ತು ಆ ಸ್ಥಿತಿಯಲ್ಲೂ ಅವನಿಗೆ ಒಡನಾಡಿಯಾಗುವುದೇ ಮೊದಲಾದ ಅಂಶಗಳನ್ನು ರಮಣೀಯವಾಗಿ ಸೂಚಿಸಲಾಗಿದೆ. ನಿತ್ಯದ ಜನಜೀವನದಲ್ಲಿ ನಡೆಯುವ ಒಂದು ಸಾಮಾನ್ಯವಾದ ಘಟನೆಯಲ್ಲಿ ಸ್ನೇಹಪಾರಮ್ಯಸ್ವರೂಪವನ್ನು ಗಮನಿಸುವ ಕವಿಯ ಕಾಣ್ಕೆಯು ಅಪೂರ್ವವೇ ಆಗಿದೆ.
✍ ಅಂಜಲಿ ಶ್ರೀನಿವಾಸ್