ಕೆಲವೊಮ್ಮೆ ಹೀಗಾಗುತ್ತದೆ. ಎತೇಚ್ಚವಾಗಿ ಬಾಹ್ಯ ಸಂಪತ್ತು, ಆಕರ್ಷಣೆ, ತಳುಕು ಬಳುಕಿನ ಜಂಜಾಟದೊಳಗೆ ಕಳೆದು ಹೋಗಿ, ಆಂತರಿಕ ನೋಟ, ಆತ್ಮವಿಮರ್ಶೆ, ಎತ್ತ ಸಾಗುತ್ತಿದೆ ನಮ್ಮ ಜೀವನ ಎಂದು ಯೋಚಿಸುವ ಪರಿಪಾಠವನ್ನೇ ಮರೆತು ಸಾಗುತ್ತಿರುತ್ತೇವೆ. ಪ್ರತಿನಿತ್ಯ ಸಾವು ನೋವುಗಳ ಕೇಳುತ್ತಿರುತ್ತೇವೆ. ನಮ್ಮ ಆತ್ಮೀಯರ ಲಿಸ್ಟ್ ನಲ್ಲೇ ಯಾರನ್ನೋ ಕಳೆದುಕೊಂಡಿರುತ್ತೇವೆ. ಇಂದು ನಮ್ಮ ಜೊತೆ ಇದ್ದವರೇ ಮತ್ತೊಂದು ಕ್ಷಣಕ್ಕೆ ಇಲ್ಲವಾಗಿರುತ್ತಾರೆ. ಆದರೆ ಇದೆಲ್ಲ ನೋಡಿಯೂ ಕೂಡ ನಾವು ಮಾತ್ರ ಸಾವೇ ಇಲ್ಲದವರಂತೆ, ನಮಗೇನಾಗಲು ಸಾಧ್ಯ ಎಂಬ ಅತಿಯಾದ ಆತ್ಮವಿಶ್ವಾಸವೊ, ಅಹಂಕಾರದಲ್ಲಿಯೋ ಮೆರೆಯುತ್ತಿರುತ್ತೇವೆ. ಎಷ್ಟೋ ಲೆಕ್ಕವಿಲ್ಲದ, ಅರ್ಥಹೀನ ಕನಸುಗಳ ತಲೆಯಲ್ಲಿ ಹೊತ್ತು ಅವುಗಳನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡದಿಡ್ಡಿ ಸಾಗುತ್ತಿರುತ್ತೇವೆ. ನಮಗೂ ಸ್ವತಃ ಅದರ ಅರಿವೇ ಇಲ್ಲವಾಗಿರುತ್ತದೆ. ಆದರೆ ನಮ್ಮೆಲ್ಲ ಆಟವನ್ನು ನೋಡುತ್ತಾ ಕೂರುವ ವಿಧಿ ಸರಿಯಾದ ಸಮಯಕ್ಕೆ ಕಾದು ನಮ್ಮ ನಾಗಾಲೋಟಕ್ಕೆ ಬ್ರೇಕ್ ಹಾಕಿ ಕೂರಿಸಿಬಿಡುತ್ತದೆ..!
ಹೌದು., ನಮ್ಮ ಹಾದಿ ತಪ್ಪಿದ ನೋಟ ಎಚ್ಚರಿಸಲೆಂದೆ ಬದುಕು ಆಗಾಗ ಒಂದಷ್ಟು ತಿರುವುಗಳ ಎದುರು ನಿಲ್ಲಿಸಿ ನಮ್ಮನ್ನು ಕಾಡುವುದು. ಕೆಣಕುವುದು. ಆಗಲೂ ಎಚ್ಛೆತ್ತುಕೊಳ್ಳದಿದ್ದರೆ, 'ಜೀವ'ನ ಪಾತಾಳ ಸೇರುವುದು ನಿಶ್ಚಿತ. ಇತ್ತೀಚಿಗೆ ನನ್ನ ಆತ್ಮೀಯ ವರ್ಗದವರೊಬ್ಬರ ಸಲುವಾಗಿ ಒಂದಷ್ಟು ದಿನಗಳ ಆಸ್ಪತ್ರೆ ವಾಸ ಅನುಭವಿಸಬೇಕಾಗಿ ಬಂತು. ಆಸ್ಪತ್ರೆ ವಾಸ, ನಿತ್ಯ ನರಕವೋ ಅಥವಾ ಸಂಬಂಧಗಳ ನೆಲೆ-ಬೆಲೆ ತಿಳಿಸುವ ಅನುಭವ ಮಂಟಪವೊ ತಿಳಿಯದಾಯಿತು. ಚಿಕ್ಕ ಚಿಕ್ಕ ಕಾರಣಗಳ ಹುಡುಕಿ ದೂರಾಗುತ್ತಿರುವ ಎಷ್ಟೋ ಸಂಬಂಧಗಳ ನಡುವೆ, ಚರ್ಮ ಸುಕ್ಕುಗಟ್ಟಿ ಎಲ್ಲ ಬಾಹ್ಯ ಆಕರ್ಷಣೆ ಕಳೆದುಕೊಂಡರು, ಎಂದಿಗೂ ಬತ್ತದ ಆಂತರ್ಯದ ಮಮತೆಯ ಸೆಲೆಯೊಳಗೆ ಬಂಧಿಯಾಗಿ, ಎಷ್ಟೇ ಏಳು ಬೀಳುಗಳು ಬಂದರೂ ಜೊತೆಯಾಗಿ ಜೀವನ ಸವೆಸೋಣ ಎನ್ನುವಂತ ಮಾಗಿದ ಜೀವಗಳು ಕಾಣಲು ಸಿಕ್ಕರು. ಹಣವಿದೆ, ಹೆಸರಿದೆ, ಸೌಂದರ್ಯವಿದೆ ನನಗೇನು ಕೊರತೆ ಎಂದು ಯಾವ ದೇಹಾಭಿಮಾನದಿಂದ ಮೆರೆದಾಡಿದರೋ, ಅವರು ಅದೇ ದೇಹಾರೋಗ್ಯ ಕೊಟ್ಟ ಒಂದು ಸಣ್ಣ ಹೊಡೆತಕ್ಕೆ ನಲುಗಿ, ಅಹಂಕಾರವೆಲ್ಲ ಪಾತಾಳಕ್ಕಿಳಿದು ಮಗುವಂತಾದವರು ಸಿಕ್ಕರು. ಹೆತ್ತವರನ್ನು ಸಾಕಲಾರದೆ ವೃದ್ದಾಶ್ರಮಕ್ಕೆ ಸೇರಿಸುವ, ಸುಮ್ಮನೆ ಯಾವುದೊ ದರ್ದಿಗಾಗಿ ಹೆತ್ತು ಅನಾಥಾಶ್ರಮಕ್ಕೆ ಮಕ್ಕಳನ್ನು ಬಿಟ್ಟು ಹೋಗುವವರ ನಡುವೆ, ತಮ್ಮೆಲ್ಲ ಜವಾಬ್ದಾರಿ ಅಥವಾ ಕರ್ತವ್ಯಗಳನ್ನು ನಿಷ್ಠೆಯಿಂದ ಹೆಗಲಿಗೆ ತೆಗೆದುಕೊಂಡು ವಯಸ್ಸಾದ ಅಪ್ಪನೋ ಅಮ್ಮನನ್ನೋ ಜೋಪಾನ ಮಾಡಿಕೊಳ್ಳಲು ಒದ್ದಾಡುವವರು, ಹೆತ್ತ ಕಂದಮ್ಮ ಕಣ್ಣೆದುರಿಗೇ ರೋಗದಿಂದ ನರಳುವಾಗ, ಬಂದ ಕಣ್ಣೀರು ತಡೆದು ನೋವ ನುಂಗುತ್ತಾ, ಅದನ್ನು ಉಳಿಸಿಕೊಳ್ಳಲು ಹೋರಾಡುವವರು, ಇನ್ನು ಪ್ರೀತಿಯೆಳೆಯಲ್ಲಿ ಬಂಧಿಯಾಗಿ ಏರು ಯೌವನದಲ್ಲಿ ಕೈ ಕೈ ಹಿಡಿದು ಓಡಾಡುವ ಆಸೆಯಲ್ಲಿದ್ದವರು ಬಂದೊದಗಿದ ಅರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹವಣಿಸುತ್ತ ಅಲೆಯುವವರು ಸಿಕ್ಕರು.
ಅದರಲ್ಲಿ ಸಮಾಜದ ಕಟ್ಟುಪಾಡುಗಳಿಗೆ ಸೋತೋ ಅಥವಾ ಹೆದರಿಯೋ ಬಂದಿದ್ದವರೇಷ್ಟೋ. ಅದೇನೇ ಆದರೂ, ಕಾರಣಗಳ ಹುಡುಕಿ ತೊರೆದು ಹೊರಡುವವರ ನಡುವೆ ತೊರೆಯಲು ಸಾಕಷ್ಟು ಕಾರಣಗಳಿದ್ದಾಗಿಯೂ ಉಳಿದು ಜೊತೆ ನಡೆಯುವವರು, ಬದುಕು ನಮಗೆ ಕೊಟ್ಟ ದೊಡ್ಡ ಉಡುಗೊರೆ ಅನ್ನಿಸಿತು. ಆಸ್ಪತ್ರೆ ನಿಜಕ್ಕೂ ನಮ್ಮ ಬದುಕಿನಲ್ಲಿ ನಮ್ಮವರು ಎನ್ನಿಸಿಕೊಳ್ಳುವವರೆಲ್ಲರ ನಿಜವಾದ ಮುಖಗಳ ಪರಿಚಯಿಸುವ ತಾಣ ಎನ್ನಿಸಿತು. ಅರೋಗ್ಯವೇ ಮಹಾಭಾಗ್ಯ ಎಂಬುದರ ಅರಿವಾಯಿತು. ಬರೀ ಸುಖವಿದ್ದಾಗಲಷ್ಟೇ ಸಖ್ಯವಲ್ಲ, ನಮ್ಮವರ ಅಸಹಾಯಕತೆಯಲ್ಲಿ ಜೊತೆ ನಿಂತು 'ನಿನಗಾಗಿ ನಾನಿದ್ದೇನೆ' ಎನ್ನುವ ಬೆಚ್ಚನೆಯ ಸ್ಪರ್ಶಕ್ಕೆ ಎಷ್ಟು ಮಹತ್ವವಿದೆ ಎಂಬುದರ ಅರಿವು ಮೂಡಿಸಿತು.
ಬದುಕು ಎದುರಾಗಿಸುವ ಸತ್ಯಗಳನ್ನು ಕೆಲವೊಮ್ಮೆ ಮೌನವಾಗಿ ಒಪ್ಪಿ ಅಪ್ಪಿದರೆ ಸಾಗುವ ಹಾದಿ ತುಂಬಾ ಅನುಭವದ ಕಂದೀಲು ಸಿಕ್ಕೀತು. ಸ್ನೇಹಿತರೆ ನಾವ್ಯಾರು ಇಲ್ಲಿಗೆ ನೂರುಕಾಲ ಬದುಕೇ ತೀರುತ್ತೇವೆ ಎಂಬ ಒಪ್ಪಂದ ಮಾಡಿಕೊಂಡು ಬಂದಿಲ್ಲ, ಎಲ್ಲರ ಜೀವನವೂ ಕ್ಷಣಿಕವೇ. ಅಂದಮೇಲೆ ನಮ್ಮ ಸ್ವಾರ್ಥ ಮತ್ತು ಸಂಕುಚಿತ ಮನೋಭಾವದ ಪರದೆ ಸರಿಸಿ, ಕೊಂಚ ಸುತ್ತಲಿನ ಪರಿವಾರ, ಪರಿಸರದೆಡೆಗೂ ಮಿಡಿಯೋಣ. ಸುಖದಂತೆಯೇ ದುಃಖವನ್ನೂ ಸಮತೋಲನದಿಂದ ಸ್ವೀಕರಿಸಿ ಜೀರ್ಣಸಿಕೊಳ್ಳುವುದ ಕಲಿಯೋಣ. ನಮಗೀಗ ದಕ್ಕಿರುವ ಚೆಂದದ ಬದುಕು ನಮ್ಮ ಹೆತ್ತವರ ಮತ್ತು ಎಷ್ಟೋ ಕಾಣದ ಕೈಗಳ ಪ್ರಾರ್ಥನೆಯ ಫಲ. ಈ ಬದುಕು ಆಶೀರ್ವಾದಗಳ ಸಂತೆ. ಆದ್ದರಿಂದ ನಮಗೀಗ ಕೊಡುತ್ತಿರುವ ಎಲ್ಲ ಸವಲತ್ತು ಮತ್ತು ಸಂತೋಷಕ್ಕೂ ಯೂನಿವರ್ಸ್ ಗೊಂದು ಪ್ರೀತಿಯ ಧನ್ಯವಾದ ಹೇಳುತ್ತಾ, ಕೃತಜ್ಞತೆಯಿಂದ ಬಾಳಿ ವಿದಾಯ ಹೇಳುವಾಗ ಅಷ್ಟೇ ಚೆಂದವಾಗಿ ನೆಮ್ಮದಿಯಿಂದ ಎದ್ದು ಹೋಗೋಣ.. ಏನಂತೀರಿ..?
Article by
_ಪಲ್ಲವಿ ಚೆನ್ನಬಸಪ್ಪ ✍️