ದಿಲ್ಲಿಯ ಕಸ್ತೂರ್‌ಬಾ ಮಾರ್ಗ್ ಮತ್ತು ಮುಂಬಯಿಯ ಸಾಂತಾಕ್ರೂಜ್‌ನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಂಪೆನಿಗಳ ಮೇಲೆ ಮಂಗಳವಾರ ಆದ ಆದಾಯ ತೆರಿಗೆ ಇಲಾಖೆಯವರ ದಾಳಿಯು ಫೆಬ್ರವರಿ 15ರ ಬುಧವಾರವೂ ಮುಂದುವರಿದಿದೆ.

ಒಟ್ಟು 50ರಷ್ಟು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಇಡೀ ಇರುಳು ಕೂಡ ಶೋಧ ನಡೆಸಿದ್ದು, ಬುಧವಾರವೂ ಮುಂದುವರಿಸಿದೆ.

ಬಿಬಿಸಿ ಭಾರತದ ಸಿಬ್ಬಂದಿಯ ಮೊಬಾಯಿಲ್ ಮತ್ತು ಪತ್ರಕರ್ತರ ಲ್ಯಾಪ್‌ಟಾಪ್‌ಗಳನ್ನು ಐಟಿಯವರು ವಶಕ್ಕೆ ಪಡೆದಿದ್ದಾರೆ. ಬಿಬಿಸಿ ಮೇಲು ಕಚೇರಿಯು ಎಲ್ಲ ಸಿಬ್ಬಂದಿಗೆ ಮಿಂಚಂಚೆ ಮಾಡಿ, ಐಟಿಯವರ ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಬೇಕು. ಸಂಬಳದ ಜೊತೆಗೆ ಕಾಸಗಿ ಆದಾಯವಿದ್ದರೆ ಅದನ್ನೂ ತಿಳಿಸಬೇಕು ಎಂದು ಹೇಳಿದ್ದಾರೆ. ಪ್ರಸಾರ ವಿಭಾಗದವರಿಗೆ ಮನೆಯಿಂದಲೇ ಕೆಲಸ ಮಾಡುವಂತೆಯೂ ತಿಳಿಸಲಾಗಿದೆ.

ಆದಾಯ ತೆರಿಗೆ ಅಧಿಕಾರಿಗಳು 2012ರಷ್ಟು ಹಿಂದಿನ ಲೆಕ್ಕ ಪರಿಶೋಧನೆ ಮಾಡುತ್ತಿದ್ದಾರೆ‌. ತೆರಿಗೆ ತಪ್ಪಿಸುವಿಕೆ, ಲಾಭ ಬೇರೆಡೆಗೆ ತಿರುಗಿಸುವಿಕೆ ಇದೆಯೇ ನೋಡುತ್ತಿದ್ದಾರೆ. ಸರ್ವೆ ಹೆಸರಿನಲ್ಲಿ ಈ ದಾಳಿ ಆರಂಭವಾಗಿ ಇಂದಂತೂ ಇಡೀ ದಿನ ನಡೆಯಲಿದೆ.

2002ರ ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರವನ್ನು ವಿವರಿಸುವ ಬಿಬಿಸಿಯು ಸಾಕ್ಷ್ಯಚಿತ್ರಗಳ ವಿರುದ್ಧ ಈ ದಾಳಿ ನಡೆದಿದೆ ಎಂದೇ ವಿಮರ್ಶಿಸಲಾಗುತ್ತಿದೆ.