ಯೇಸು ಕ್ರಿಸ್ತನು ಬದುಕಿದ್ದ ದಿನಗಳಲ್ಲಿ ನಾನು ಜೆರೂಸಲೇಮಿನಲ್ಲಿ ಬದುಕಿದ್ದಿದ್ದರೆ ಕಣ್ಣೀರಿನಿಂದಲ್ಲ, ಎದೆ ಬಗೆದು ನೆತ್ತರಿನಿಂದ ಅವರ ಪಾದ ತೊಳೆಯುತ್ತಿದ್ದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.
ಇಂದು ವಿವೇಕಾನಂದರ ಹೆಸರಿನಲ್ಲಿ ತುಡಿಯುವ ಜನರು ಎಲ್ಲ ಕಡೆ ಕಂಡು ಬರುತ್ತಾರೆ. ಆದರೆ ಈ ಸಮಸ್ಯೆ ಈಗೀಗ ಎಲ್ಲ ಧರ್ಮಗಳಲ್ಲಿಯೂ ಇದೆ.
ಶಾಂತಿ ಸಮಾಧಾನ ಕ್ರಿಸ್ತ ವಚನ, ಶಾಂತಿ ಭಂಗ ನಮ್ಮ ವಿಚಾರ ಎಂದು ಹೇಳುವ ಕ್ರಿಶ್ಚಿಯನರೂ ಕಂಡು ಬರುತ್ತಾರೆ.
ಇಸ್ಲಾಂ, ಬೌದ್ಧ, ಜೈನ, ಫಾರಸೀಕ ಎಲ್ಲ ಧರ್ಮಗಳೂ ಶಾಂತಿ ಸಮಾಧಾನವನ್ನು ಬೋಧಿಸಿವೆ. ಆದರೆ ಧರ್ಮದ ಅನುಯಾಯಿಗಳು ಧರ್ಮವನ್ನು ಹೆಸರಿಗೆ ಮಾತ್ರ ಪಾಲನೆ ಮಾಡುತ್ತಾರೆ. ಅವರೆಲ್ಲ ಆಚರಣೆಗಳ ಬಗೆಗೆ ತೋರುವ ಆಸಕ್ತಿಯನ್ನು ಧರ್ಮ ತೋರಿದ ಸಾಮ ದಾನ ಮಾರ್ಗವನ್ನು ಅನುಸರಿಸುವುದರಲ್ಲಿ ತೋರಿಸುವುದಿಲ್ಲ.
ಭೇದ ದಂಡ ಧರ್ಮದ ದಾರಿ ಎಂಬ ನಂಬಿಕೆ ಇಂದು ಬಹುತೇಕ ಜನರಲ್ಲಿ ನೆಲೆಯೂರಿದೆ.
ಹಿಂದೆ ಕೂಡ ಅಂಥ ಜನರು ಇದ್ದರು. ಯೇಸು ಕ್ರಿಸ್ತರನ್ನು ಅಂಥ ಜನರು ಶಿಲುಬೆಗೆ ಏರಿಸಿದ್ದಾರೆ. ಬುದ್ಧರಿಗೆ ಸೂಕರ ಮದ್ದವ ಭಿಕ್ಷೆ ನೀಡಿದ್ದಾರೆ.
ಸಾಕ್ರಟೀಸ್ ಸತ್ಯ ಹೇಳಿದ್ದಕ್ಕೆ ವಿಷ ಕುಡಿಯುವ ಶಿಕ್ಷೆ ಪಡೆದ. ಗೆಲಿಲಿಯೋ ಭೂಮಿ ಉರುಟು ಎಂದು ನಿರೂಪಿಸಿದ್ದಕ್ಕೆ ಚರ್ಚ್ ನಿರ್ಬಂಧ ಎದುರಿಸಿದ. ರೋಮ್ 500 ವರುಷಗಳಷ್ಟು ತಡವಾಗಿ ಗೆಲಿಲಿಯೋರಂಥವರಿಗೆ ವಿಧಿಸಿದ್ದ ಶಿಕ್ಷೆಗಳನ್ನು ಹಿಂಪಡೆದು ದಾಖಲೆಗಳನ್ನು ತಿದ್ದಿತು. ಜಾನ್ ಆಫ್ ಆರ್ಕ್ ಅವರಂಥವರಿಗೆ ಅತ್ಯಾಧುನಿಕ ಕಾಲದಲ್ಲಿ ಸಂತ ಪದವಿ ನೀಡಿತು. ಆದರೆ ಎಂದೋ ಹೋದ ಜೀವ ಮರಳಿ ಬರುವುದುಂಟೆ?
ಎಲ್ಲ ಧರ್ಮಗಳ ಜನರೂ ನಮ್ಮ ಪಾಪವನ್ನು ದೇವರು ಪರಿಹರಿಸುತ್ತಾನಾದ್ದರಿಂದ ಪಾಪ ಮಾಡುವುದು ತಮ್ಮ ಹಕ್ಕು ಎಂದು ತಿಳಿದುಕೊಂಡಂತಿದೆ.
ದೇವರಿಗೆ ಅಕ್ರಮ ಸಂಪಾದನೆಯಲ್ಲಿ ಪಾಲು ಕೊಟ್ಟು ಅವರು ಅವತಾರ ಸಾಕಪ್ಪಾ ಎನ್ನುವಂತೆ ಹಿಂದೂ ಧರ್ಮದವರಿಂದ ಹಿಡಿದು ಎಲ್ಲ ಧರ್ಮಗಳವರೂ ಮಾಡುತ್ತಲೇ ಇದ್ದಾರೆ.
ಶಾಂತಿ ಸಮಾಧಾನ ಕ್ರಿಸ್ತನ ಯಾನ
ತ್ಯಾಗ ಬಲಿದಾನ ಕ್ರಿಸ್ತನ ಗಾನ
ಮರೆತು ಇಡಲು ಬೇಡ ತಪ್ಪು ಪಾದ
ಬದುಕು ಎಲ್ಲರೊಡಗೂಡಿ ಸೀದ
ಕ್ರಿಸ್ತ ಬೋಧಿಸಿದ್ದು ಸಹಬಾಳ್ವೆ, ಅದಕ್ಕೆ ಅನುಯಾಯಿಗಳು ಏನು ಅನರ್ಥ ಮಾಡಿಕೊಂಡರೋ ಯಾರಿಗೆ ಗೊತ್ತು. ತ್ಯಾಗ ಕ್ರಿಸ್ತರಿಂದ ಎಲ್ಲ ಧರ್ಮದ ತಿರುಳು ಆಗಿದೆ. ಇಡೀ ವಿಶ್ವವನ್ನು ಎಲ್ಲ ಧರ್ಮದವರೂ ಸೇರಿ ತ್ಯಾಜ್ಯದ ಗುಂಡಿ ಮಾಡಿ ಕಸ ಎಸೆಯುವುದನ್ನೇ ದೊಡ್ಡ ತ್ಯಾಗ ಎಂದುಕೊಂಡಿದ್ದೇವೆ.
ಮನುಷ್ಯ ಮುಂದುವರಿದಿದ್ದಾನೆ. ಕಡೆಯ ಮಟ್ಟಿಗೆ ಯೇಸು ಕ್ರಿಸ್ತರ ಶಾಂತಿ, ಸಮಾಧಾನ, ಸಹಬಾಳ್ವೆ ಅಷ್ಟನ್ನಾದರೂ ಅನುಸರಿಸುವ ತೀರ್ಮಾನವನ್ನು ಈ ಕ್ರಿಸ್ಮಸ್ ನಲ್ಲಿ ಮಾಡೋಣ. ಜೀವನ ಪ್ರೀತಿಯು ಎಲ್ಲ ಜೀವರಾಶಿಗಳಿಗೂ ತಲುಪಲಿ. ಕ್ರಿಸ್ಮಸ್ ಈ ಬಾರಿ ಸರಳ ಆಚರಣೆ ಎಂಬ ಘೋಷಣೆ ಪಡೆದಿದೆ. ಅದಕ್ಕೆ ಕಾರಣ ಕೋವಿಡ್ 19, ಪ್ರಕೃತಿಯ ಬಗೆಗೆ ಚೂರಾದರೂ ಭಯ ಭಕ್ತಿ ಉಳಿಸಿಕೊಂಡರೆ ನಿಸರ್ಗವೂ ಉಳಿಯುತ್ತದೆ, ನಾವೂ ಉಳಿಯುತ್ತೇವೆ, ಯೇಸು ಕ್ರಿಸ್ತರ ಬಲಿದಾನದ ಉದ್ದೇಶವೂ ನೆನಪಲ್ಲಿ ಉಳಿಯುತ್ತದೆ. -ಪೇಜಾ