ಎಂಟು ನೂರು ವರುಷಗಳ ಇತಿಹಾಸವಿರುವ ಕ್ಯಾರೊಲ್ ಹಾಡುಗಳು ಇಂದು ಕೋವಿಡ್ 19ರ ಕಾರಣ ಅಂತರ ಕಾಯ್ದುಕೊಂಡಿದೆ. 

ಕ್ಯಾರಲ್ಸ್ ಹಾಡುಗಳನ್ನು ಹಿಂದೆ ಗುಮಟೆ ಬಾರಿಸುತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕತ್ತಲಾದರೆ ಮನೆ ಮನೆಗೆ ಬಂದು ಹಾಡುತ್ತಿದ್ದರು. ಕೆಲವು ತಂಡಗಳು ಗುಮಟೆ ಸದ್ದಿಗೆ ಕುಣಿಯುವುದು, ಹಾಸ್ಯ ನಿರ್ವಹಿಸುವುದು ಇತ್ಯಾದಿ ಮಾಡುತ್ತಿದ್ದರು. ಈ ಗುಮಟೆಯು ಮರಾಠಿಗರ ಮತ್ತು ಗೋವಾ ಕೊಂಕಣಿಗರ ಜನಪದ ಚರ್ಮ ವಾದ್ಯ. ಅಲ್ಲಿಂದ ಇಲ್ಲಿಗೆ ಬಂದಿದೆ ಎನ್ನುತ್ತಾರೆ. 

ಇಟಲಿಯಲ್ಲಿ ಬಡವರ ಸಂತ ಎಂದು ಖ್ಯಾತಿ ಗಳಿಸಿದ್ದ ಫ್ರಾನ್ಸಿಸ್ ಆಸ್ಸಿಸ್ ಅವರು ಕ್ಯಾರಲ್ಸ್ ಹಾಡುಗಳು ಮತ್ತು ತಿರುಗಾಟವನ್ನು ಹುಟ್ಟು ಹಾಕಿದವರು ಎನ್ನುತ್ತದೆ ಚರಿತ್ರೆ. ಕ್ರಿ. ಶ. 1223ರಲ್ಲಿ ಇಟಲಿಯಲ್ಲಿ ಬಡವರ ಸಂತ ಫ್ರಾನ್ಸಿಸ್ ಇದಕ್ಕೆ ಚಾಲನೆ ನೀಡಿದರು. ಬಡವರಿಗೆ ಸಹಾಯ ಮಾಡುತ್ತಿದ್ದ ಫ್ರಾನ್ಸಿಸ್ ಅವರು ಕ್ಯಾರೊಲ್ ಹಾಡುಗಳ ತಿರುಗಾಟದ ಮೂಲಕವೂ ಹಣ ಸಂಗ್ರಹಿಸಿ ಬಡವರು ನೆಮ್ಮದಿಯಿಂದ ಕ್ರಿಸ್ಮಸ್ ಆಚರಿಸುವಂತೆ ಮಾಡುತ್ತಿದ್ದರು.

ಈ ಹಾಡುಗಳು ಇಟಾಲಿಯನ್ ಭಾಷೆಯಲ್ಲಿ ಇದ್ದವು.

ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಇಂಗ್ಲಿಷ್ ಹಾಡುಗಳು ಹುಟ್ಟಿಕೊಂಡವು. ಕ್ಯಾರೊಲ್ ತಿರುಗಾಟವು ಬ್ರಿಟನ್ ಎಂದು ಮೆಲ್ಲ ಯೂರೋಪ್ ಎಲ್ಲ ಪಸರಿಸಿತು.

ಭಾರತದಲ್ಲಿ ಗೋವಾದಲ್ಲಿ ಪೋರ್ಚುಗೀಸರು ಕ್ಯಾರಲ್ಸ್ ಹಾಡುಗಳಿಗೆ ಚಾಲನೆ ನೀಡಿದರು. ಅದು ತುಳುನಾಡಿನಲ್ಲಿ ಕೂಡ ಕ್ರಿಸ್ಮಸ್ ಸಮಯದ ಕ್ರಿಶ್ಚಿಯನ್‌ ರ ಒಂದು ಸಂಪ್ರದಾಯ ಆಯಿತು. ಗುಮಟೆಯ ಬದಲು ಇತರ ವಾದ್ಯ ಪ್ರಕಾರಗಳೂ ಇದರಲ್ಲಿ ಸೇರಿಕೊಂಡರು.

ಕ್ಯಾರಲ್ಸ್ ತಂಡದವರು ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಟೋಪಿ ಧರಿಸಿರುತ್ತಾರೆ. ಒಬ್ಬರು ಸಾಂಟಾ ಕ್ಲಾಸ್ ವೇಷ ಧರಿಸಿ ಇರುವುದೂ ಉಂಟು. ಹಾಸ್ಯಕ್ಕೆ ಒಬ್ಬರು ಹೊಟ್ಟೆಗೆ ಬಟ್ಟೆ ಕಟ್ಟಿ ಡೊಳ್ಳು ಆಡಿಸುತ್ತಿದ್ದುದುಂಟು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾರಲ್ಸ್ ಹಾಡುಗಳು ಕೊಂಕಣಿಯಲ್ಲಿ ಇವೆ. ಕೆಲವರು ನಡುವೆ ತುಳು ಬಳಸುವುದೂ ಇದೆ. ಈ ಬಾರಿ ಕೊರೋನಾ ಕಾಟದಿಂದಾಗಿ ಲೋಕದೆಲ್ಲೆಡೆ ಕ್ಯಾರಲ್ಸ್ ಅಂತರಜಾಲದಲ್ಲಿ ಅಂತರ ಕಾಯ್ದುಕೊಂಡಿದೆ. ಉಳಿದಂತೆ ಕತ್ತು ಚಾಚಿದರೂ, ಕಿವಿ ಆನಿಸಿದರೂ ಕ್ಯಾರೊಲ್ ಎಲ್ಲೋ ಗುನುಗಿದಂತೆ‌ ಮಾತ್ರ ಇದೆ.

ಕ್ರಿ. ಶ. 2012ರಲ್ಲಿ ಮೈಕೆಲ್ ಲೋಬೋ ಎನ್ನುವವರು 1,000 ಪುಟಗಳ ಎ ತೌಸೆಂಡ್ ಪೇಜಸ್ ಆಫ್ ಸಾಂಗ್ಸ್ ಎಂಬ ಕ್ಯಾರಲ್ಸ್ ಹಾಡುಗಳ ಪುಸ್ತಕವನ್ನು ಹೊರತಂದಿದ್ದಾರೆ.   

Article by

-ಪೇಜಾ