ಭಾರೀ ಮಟ್ಟದ ಸಮಾಜ ಸೇವೆ ಮಾಡಿ ಹೆಸರು ನೋಂದಾಯಿಸಬೇಕೆಂದಿಲ್ಲ. ಎಲೆಮರೆಯ ಕಾಯಿಯಂತೆ ಕಿಂಚಿತ್ ಸಮಾಜ ಸೇವೆ ಮಾಡಿದರೂ ಮೆಚ್ಚುಗೆ ಸೂಚಿಸಿರಿ.
ಸಮಾಜ ಸೇವಕರು ಎಂಬ ಒಂದು ವರ್ಗವೇ ಇದೆ. ಆದರೆ ಇವರಲ್ಲಿ ಹೆಚ್ಚಿನವರು ಸರಕಾರದ ಕೆಲಸ ಮಾಡಿಕೊಡುವ ದಲ್ಲಾಳಿಗಳು. ಇನ್ನು ಕೆಲವರು ಧನ ಬಲದಿಂದ ತಮ್ಮ ಹೆಸರು ಕೊರೆಸಲು ಸಮಾಜದ ಸೇವೆ ಎಂದು ಬೋಂಗು ಬಿಡುತ್ತಾರೆ.
ಇನ್ನು ಕೆಲವರು ತಮಗೆ ಗೊತ್ತಿಲ್ಲದಂತೆಯೇ ಸಮಾಜ ಸೇವೆ ಮಾಡುತ್ತಾರೆ. ಇವರೆಲ್ಲ ಅನಾಮಧೇಯರು. ಮಂಗಳೂರಿನಂಥ ನಗರಗಳಲ್ಲಿ ಕಾಮಗಾರಿ ಇಲ್ಲವೇ ಒಳಚರಂಡಿ ಕೆಲಸಗಳು ಅರೆಬರೆ ಆಗುವುದು, ಕೆಲವೆಡೆ ಮುಗಿಯದ ಕೆಲಸದ ಕಂಬಿ ನೀಟಿಕೊಂಡಿರುವುದು ಮಾಮೂಲಿ ಎಂಬಂತೆ ಆಗಿದೆ. ಕೆಲವು ಕಡೆ ಇಂತಹ ಕಬ್ಬಿಣದ ಕಂಬಿಗಳು ಹಲವಾರು ವರುಷ ನೀಟಿಕೊಂಡಿದ್ದು ಪಾದಚಾರಿಗಳಿಗೆ ಅಪಾಯ ಒಡ್ಡುವ ಬಗೆಯಲ್ಲಿ ಇರುತ್ತವೆ.
ಇವನ್ನೆಲ್ಲ ಕಂಡೂ ಕಾಣದಂತೆ ಹೋಗುವವರೇ ಹೆಚ್ಚು. ಫೋಟೋದಲ್ಲಿ ನಿಮಗೆ ಏನು ಕಾಣಿಸುತ್ತಿದೆ. ಇದು ಮಂಗಳೂರಿನ ಕರ್ಮಗಳಲ್ಲಿ ಒಂದು. ಆದರೆ ಯಾರೋ ಪುಣ್ಯಾತ್ಮರು ಕುಡಿದೆಸೆದ ಎಳನೀರ ಬುರುಡೆಗಳನ್ನು ಈ ಚಾಚು ಕಂಬಿಗಳಿಗೆ ಚುಚ್ಚಿ ಕಟ್ಟಿದ್ದಾರೆ. ಹಿಂದೆ ಯಾರಾದರೂ ಬಿದ್ದಿದ್ದರೆ ಕಂಬಿ ಚುಚ್ಚಿ ಅಪಾಯ ತರುತ್ತಿತ್ತು. ಆದರೆ ಈಗ ಎಳನೀರು ತಲೆಕವಚಗಳ ರಕ್ಷಣೆ ಇರುವುದರಿಂದ ತೊಂದರೆ ಏನೂ ಆಗದು. ಇದನ್ನು ಮಾಡಿದವರು ಕೂಡಾ ಮಾಡಿದ್ದು ಸಮಾಜ ಸೇವೆಯೇ. ಅವರನ್ನು ಗುರುತಿಸಬೇಕಿಲ್ಲ. ಇಂಥದನ್ನು ಕಂಡಾಗ ಮೆಚ್ಚುಗೆ ಸೂಚಿಸಿ. ಅದು ಕೂಡ ಸಮಾಜ ಸೇವೆಯನ್ನು ಗುರುತಿಸಿದಂತೆಯೇ ಸರಿ. ಏನಂತೀರಿ; ಅನಾಮಧೇಯನಿಗೆ ಸೊಲ್ಮೆ ಎನ್ನುವಿರಿ ತಾನೆ?
Article by

-ಪೇಜಾ