ದಸರಾದ ಸಡಗರ ಸಂಭ್ರಮಕ್ಕೆ ತೆರೆ ಬೀಳುವ ಅಂತಿಮ ಕ್ಷಣಗಣಗೆ. ಕಳೆದ ಹತ್ತು ದಿನಗಳಿಂದ ಎಲ್ಲಾ ದೇವಿ ದೇವಸ್ಥಾನಗಳಲ್ಲಿ ಸಂಭ್ರಮದ ಉತ್ಸವವೇ ನಡೆಯಿತು. ತಾಯಿ ದುರ್ಗೆಯನ್ನು, ಶಾರದಾಮಾತೆಯನ್ನು ಭಕ್ತಿಯಿಂದ ಸ್ಮರಿಸುವ ಶುಭ ಗಳಿಗೆ. ಮಂಗಳೂರಿನಲ್ಲಿ ತಾಯಿ ಶಾರದೆಯ ಸಂಭ್ರಮದ ಶೋಭಯಾತ್ರೆ ನಡೆಯಲಿದೆ. ಮಂಗಳೂರು ದಸರಾದ ವೈಭವೇ ಬೇರೆ, ಊರ ತುಂಬಾ ಸಂಭ್ರಮ. ನಗರದ ತುಂಬೆಲ್ಲಾ ಶಾರದಾ ಮಾತೆಯ ದೊಡ್ಡ ದೊಡ್ಡ ಬಿತ್ತಿಚಿತ್ರಗಳು ತುಂಬಿಕೊಂಡಿವೆ. ಆ ಚಂದದ ರೂಪ ಎಷ್ಟು ಸರಿ ನೋಡಿದರೂ ಸಾಕು ಅಂತ ಅನಿಸುವುದೇ ಇಲ್ಲ. ಮತ್ತೆ ಮತ್ತೆ ನಮ್ಮ ಕಣ್ಣ ದೃಷ್ಟಿಯನ್ನು ಮಾಯರೂಪದಲ್ಲಿ  ಸೆಳೆದುಕೊಂಡು ಹೋಗುವ ಅದ್ಭುತವದು. ಆ ಬಿತ್ತಿಚಿತ್ರಗಳನ್ನು  ನೋಡುವಾಗಲೇ ತಾಯಿಯ ಆ ಚಂದದ ರೂಪ ಮನಸ್ಸಿನಲ್ಲಿ ತುಂಬಿಕೊಂಡು ಬಿಡುತ್ತದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನವದುರ್ಗೆಯರ ಜೊತೆಯಲ್ಲಿ ,ಆದಿಶಕ್ತಿ ,ಶಾರದೆ, ಗಣಪತಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಹತ್ತು ದಿನ ವಿಜೃಂಭಣೆಯ ನವರಾತ್ರಿ ಮತ್ತು ವಿಜಯದಶಮಿ ಉತ್ಸವವನ್ನು ಮಾಡುತ್ತಾರೆ. ನಗರ ತುಂಬೆಲ್ಲಾ ರಾರಾಜಿಸುವ ತಾಯಿ ಶಾರದೆ ಇಲ್ಲಿ ಆರಾಧನೆಗೊಳ್ಳುವ ದಿವ್ಯ ಮಾತೆ. 

ಮಂಗಳೂರು ದಸರಾ ಎಂದೇ ಲೋಕ ಮಾನ್ಯತೆ  ಪಡೆದ ಇಲ್ಲಿ ನವರಾತ್ರಿ ಕಳೆದು ವಿಜಯದಶಮಿಯಂದು ಬಹಳ ಸಡಗರದಿಂದ ಶೋಭಾಯಾತ್ರೆ ಮಾಡಿ ಮೂರ್ತಿಗಳನ್ನು ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ. ಕೊನೆಯಲ್ಲಿ ಶಾರದೆಯ ಜಲಸ್ತಂಭನ ಆಗುವಾಗ ಸೇರಿದ ಜನರ ಕಣ್ಣಂಚಲ್ಲಿ ಕಣ್ಣೀರಿನ ಬಿಂದುಗಳು ತುಂಬಿ ಹರಿಯಲಾರಂಭಿಸುತ್ತದೆ.

ಕುದ್ರೋಳಿಯಲ್ಲಿ ಆರಾಧಿಸಲ್ಪಡುವ ತಾಯಿ ಶಾರದೆಯನ್ನು ನೋಡುವುದೇ ಒಂದು ಭಾಗ್ಯ. ಆ ಕಣ್ಣಿನ ಮಿಂಚು , ಚಂದದ ರೂಪ, ಸಾವಿರ ನೋವುಗಳನ್ನು ದೂರ ಮಾಡುವಂತೆ ಅರಳಿದ ಸ್ನಿಗ್ಧ  ನಗು , ನೋಡುಗರ ಕಣ್ಣಗಳನ್ನು ಕಟ್ಟಿ ಹಾಕುವಂತಹ ತೇಜಸ್ಸು ,ಕೈಯಲ್ಲಿ ರುದ್ರಾಕ್ಷಿ , ತಾವರೆ , ಪುಸ್ತಕ, ಮಡಿಲಲ್ಲಿ  ವೀಣೆಯನ್ನು ಹಿಡಿದು ಕೈಯಲ್ಲಿ ಮೀಟುವಂತಹ ಭಂಗಿ , ಆಕರ್ಷಕವಾದ ಚಿನ್ನಾಭರಣಗಳು ,ಸುಂದರ ಅಲಂಕಾರ ಎಲ್ಲವನ್ನು ನೋಡುವಾಗ ನಮ್ಮನ್ನು ನಾವೇ ಎಲ್ಲೋ ಕಳೆದುಕೊಂಡಂತೆ ಭಾಸವಾಗುತ್ತದೆ. ಮುಖದ ತುಂಬಾ ನಗು, ಕಣ್ಣಲ್ಲಿ ಆನಂದಭಾಷ್ಪ ಮೂಡುತ್ತದೆ. ಕಣ್ಣು ಮುಚ್ಚದೇ ಅವಳನ್ನೇ ನೋಡಬೇಕೆನ್ನುವ ಭಾವ ಮನದಲ್ಲಿ, ಹಗುರವಾಗಿ ನಮ್ಮ ದೇಹ ಕಂಪಿಸಲು ಸುರುವಾಗುತ್ತದೆ. ಆ ಮೂರ್ತಿಯನ್ನು ನೋಡುವಾಗ ಸಾಕ್ಷತ್ ಶಾರದ ದೇವಿಯೇ ಧರೆಗಿಳಿದು ಬಂದಳೇ ಎನ್ನುವಂತಹ ಚೋದ್ಯ. ನನ್ನ ಈ ಬರವಣಿಗೆಗೆ ಮೂಲ ಪ್ರೇರಣೆ ಈ ಚಂದದ ಮೂರ್ತಿಗೆ ಜೀವ ತುಂಬುವ ಕಲಾಕಾರ ಶ್ರೀಯುತರಾದ ಕುಬೇರ.

ಕುಬೇರ ಇವರು ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಕಲಾವಿದ. ತಮ್ಮ ಆಧ್ಯಾತ್ಮ ಗುರುಗಳಾದ  ಮಹಾನ್ ತಪಸ್ವಿ ಗೋಣಿಬೀಡು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಶುಭಾಶೀರ್ವಾದದೊಂದಿಗೆ ಕಳೆದ 20 ವರುಷಗಳಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಎಲ್ಲಾ ತರಹದ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಶ್ರೀ ಗುರು ಕಲಾ ಮಂದಿರ ಹೇಳುವ ಅವರ ತಂಡದ ಸುಮಾರು 10 , 12 ಕಲಾವಿದರು ದಸರಾ ಹೊತ್ತಿನಲ್ಲಿ ಮೂರ್ತಿ ಮಾಡಲು ಮಂಗಳೂರಿಗೆ ಬರುತ್ತಾರೆ. 2009 ನೇ ಇಸವಿಯಿಂದ ತಪ್ಪದೇ ಈ ಕಾರ್ಯಕ್ರಮಕೋಸ್ಕರ ನಮ್ಮ ಮಂಗಳೂರಿಗೆ ಬರುತ್ತಿದ್ದಾರೆ. ಹಾಗೆಯೇ ಈಗ ಉಚ್ಚಿಲದ ನವದುರ್ಗೆ ಹಾಗೂ ಶಾರದಾ ಮಾತೆಯ ವಿಗ್ರಹಗಳನ್ನು ಮಾಡುವ ಜವಾಬ್ದಾರಿ ಕೂಡ ಇವರ ಮೇಲಿದೆ. ಇವರು 2009 ರಿಂದ 2013 ರ ತನಕ ಗುರುಗಳಾದ ರಾಜಶೇಖರ್ ಇವರ ಕೈ ಕೆಳಗೆ ಆಮೇಲೆ 2013 ರಿಂದ 2018 ತನಕ ಸುಧೀರ್ ಇವರ ಕೈ ಕೆಳಗೆ ಮೂರ್ತಿ ಮಾಡುವ ಕೆಲಸ ಮಾಡುತ್ತಿದ್ದರು. 2018 ರ ನಂತರ ಮೂರ್ತಿ ಮಾಡುವ ಪೂರ್ಣ ಜವಾಬ್ದಾರಿ ಇವರಿಗೇ ಸಿಕ್ಕಿತು. ಅವರು ಬಹಳ ನಿಷ್ಠೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಶಾರದೆ , ನವದುರ್ಗೆಯರು ,ಆದಿಶಕ್ತಿ ,ಗಣಪತಿ ಇದನ್ನೆಲ್ಲ ಮಾಡುವಾಗಿನ ಅವರ ಅನುಭವ ಕೇಳುವಾಗ ಮೈ ಜುಮ್ ಅನಿಸುತ್ತದೆ.

ಕುದ್ರೋಳಿ ಮತ್ತು ಉಚ್ಚಿಲದಲ್ಲಿ ಮೂರ್ತಿ ಮಾಡಲು ಕುಬೇರ ಮತ್ತು ಅವರ ಸಂಗಡಿಗರು ಸರಿ ಸುಮಾರು 40 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಮೂರ್ತಿಯ ಕೆಲಸ ಮಾಡುವಾಗ ಕಟ್ಟುನಿಟ್ಟಾದ ಕ್ರಮಗಳನ್ನು ಅವರು ಪಾಲಿಸುತ್ತಾರೆ. ಮಾಂಸಾಹಾರ ತಿನ್ನುವವರು ಕೂಡ ಅದನ್ನು ಬಿಟ್ಟು ಸಾತ್ವಿಕ ಆಹಾರವನ್ನು  ಸೇವಿಸುತ್ತಾರೆ. ನಿತ್ಯವೂ ಕೂಡ ಜಪ ತಪ ಮಾಡುತ್ತಾರೆ. ತೀರಾ ಅನಿವಾರ್ಯ ಇದ್ದರೆ ಮಾತ್ರ ಅವರು ಹೊರಗಡೆ ಹೋಗುತ್ತಾರೆ ಉಳಿದಂತೆ ಮೂರ್ತಿ ಮಾಡುವ ಜಾಗ ಬಿಟ್ಟು ಬೇರೆ ಎಲ್ಲಿಯೂ ಕೂಡ ಹೋಗುವುದಿಲ್ಲ. ದೇವಸ್ಥಾನದಲ್ಲೇ ಅನ್ನಪ್ರಸಾದ ಸ್ವೀಕಾರ ಮಾಡುತ್ತಾರೆ , ಕೆಲವೊಮ್ಮೆ ಅವರೇ ತಯಾರಿಸಿಕೊಳ್ಳುತ್ತಾರೆ. ನಿತ್ಯ ಭಕ್ತಿಗೀತೆ ಭಜನೆಗಳನ್ನು ಹಾಡುತ್ತಾ, ಕೇಳುತ್ತಾ ಶ್ರದ್ಧಾ ಭಕ್ತಿಯಿಂದ ತಮ್ಮ ತಮ್ಮ  ಕೆಲಸಗಳನ್ನು ಮಾಡುತ್ತಾರೆ. ಮನಸ್ಸಿನಲ್ಲಿ ತಾವು ಮಾಡುವ ಕೆಲಸದ ಬಗ್ಗೆ ಮಾತ್ರ ಯೋಚನೆ ಮಾಡುತ್ತ ಪರಿಶುದ್ಧವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ.

"ಈ ಅದ್ಭುತವಾದ ಮೂರ್ತಿಗಳನ್ನು ಮಾಡುವಾಗಿನ ನಿಮ್ಮ ಅನುಭವಗಳೇನು? ಅದು ಹೇಗೆ ಪ್ರತಿವರ್ಷ ಹೊಸ ಮೂರ್ತಿಗಳೇ ಆದರೂ ನೋಡುವಾಗ ಚೂರೇ ಚೂರು ಬದಲಾವಣೆಗಳೇ ಇಲ್ಲದಂತೆ ಯತಾವತ್ತಾಗಿ ಮಾಡುತ್ತೀರಿ?" ಎಂದು ಕೇಳುವಾಗ ಈ ಮಾಂತ್ರಿಕ ಕಲಾವಿದ ಈ ರೀತಿ ಹೇಳುತ್ತಾರೆ. "ಪೀಠ ಪೂಜೆ ಮಾಡಿ ಪ್ರಾಣ ಪ್ರತಿಷ್ಠೆ ಮಾಡುವಾಗ ಅಲ್ಲಿ ಶಕ್ತಿಯ ಆವಾಹನೆ ಆಗುತ್ತದೆ. ದೇವಿ ಶಕ್ತಿಗಳು ಕನಸಲ್ಲಿ ಬರಲಾರಂಭಿಸುತ್ತಾರೆ. ಕೆಲಸ ಮಾಡುವಾಗ ಮನಸ್ಸಿನಲ್ಲಿ ಚಿತ್ರಪಟದ ಹಾಗೇ ಅವರ ರೂಪ ಮೂಡುತ್ತಾ ಆಕಾರ ಪಡೆಯುತ್ತಾ ಹೋಗುತ್ತದೆ. ನಾನು ನಿಮಿತ್ತ ಮಾತ್ರ ಯಾವುದೋ ಒಂದು ಅಜ್ಞಾತ ಶಕ್ತಿ ಈ ರೀತಿಯಾಗಿ ಮಾಡು ಎಂದು ಸೂಚನೆ ಕೊಡುತ್ತಿರುತ್ತದೆ ನಾನು ಹಾಗೆಯೇ ಮಾಡುತ್ತಾ ಹೋಗುತ್ತೇನೆ. ಶ್ರೀ ಮಾತೆಯ ಚಂದದ ರೂಪದ ಹಿಂದೆ ಮನುಷ್ಯ ಪ್ರಯತ್ನಕ್ಕಿಂತ ಹೆಚ್ಚಾಗಿ ದೈವಿಕ ಪ್ರೇರಣೆಯೇ ದೊಡ್ಡ ಬಲ." ಇದು ಈ ಅದ್ಭುತ ಕಲಾವಿದ ಕುಬೇರ್ ಅವರ ಮಾತು. ಇದನ್ನು ಅವರ ಬಾಯಿಂದ ಕೇಳುವಾಗ ಮೈ ರೋಮಾಂಚನವಾಗುತ್ತದೆ. ನಿತ್ಯ ದೂಪ ದೀಪ ಹಚ್ಚಿ ಕೈ ಮುಗಿದು ಪ್ರಾರ್ಥನೆ ಮಾಡಿದ ಮೇಲೆನೇ ಮೂರ್ತಿಗಳ ಕೆಲಸ ಸುರು ಮಾಡುತ್ತಾರೆ. ಆ ಮೂರ್ತಿಗಳಲ್ಲಿ ಶಕ್ತಿ ಸಂಚಾರ ಆಗುವ ಅನುಭವ ಎಷ್ಟೋ ಸಲ ಕಲಾವಿದರಿಗೆ ಆಗಿದೆಯಂತೆ. "ಕೆಲಸ ಮಾಡುವಾಗ ಒಂದು ವಿಶೇಷವಾದ ಕಂಪನದ ಅನುಭವವನ್ನು ನಾವು ಪಡೆಯುತ್ತೇವೆ. ಆ ವಿಷಯವನ್ನು ಮಾತಿನಲ್ಲಿ ತಿಳಿಸಲು ಕಷ್ಟ" ಅಂತ ಹೇಳುತ್ತಾರೆ ಕುಬೇರರು.

ಮೂರ್ತಿಗಳನ್ನು ತಯಾರು ಮಾಡುವ ಬಗ್ಗೆ ಕೇಳುವಾಗ ಈ ರೀತಿ ಮಾಹಿತಿ ಹಂಚಿಕೊಳ್ಳುತ್ತಾರೆ. ಮೊದಲಾಗಿ ದೇವಿಯ‌ನ್ನು ಇರಿಸುವ ಪೀಠವನ್ನು  ತಯಾರಿಸುತ್ತಾರೆ. ನಂತರ ಸಾಧಾರಣ 70 ಶೇಕಡಾ ಆಕಾರವನ್ನು ಹುಲ್ಲಿನಿಂದ ಮಾಡುತ್ತಾರೆ, ಬಳಿಕ ಭತ್ತದ ಸಿಪ್ಪೆ ಮತ್ತು ಮಣ್ಣಿನ ಅಂಟು ಮಿಶ್ರಣ ಮಾಡಿ ಅದರಲ್ಲಿ ಬೇಕಾದ ರೂಪ ಕೊಡುತ್ತಾರೆ. ಕೊನೆಯದಾಗಿ  ಹಂಚಿನ ಮಣ್ಣಿನಲ್ಲಿ ಕಣ್ಣು , ಬಾಯಿ , ಮುಖ ,ಕೈಕಾಲು ,ಕಿರೀಟ ,ಕೆಲವು ಆಯುಧಗಳನ್ನು ಮಾಡುತ್ತಾರೆ ಮತ್ತು ಅದಕ್ಕೆ ಬೇಕಾದ ಸುಂದರ ಬಣ್ಣ ತುಂಬುತ್ತಾರೆ. ಹೀಗೆ ಕುಬೇರರು ತಯಾರಿಸುವ ಮೂರ್ತಿಗಳು ಮೃಣ್ಮಯ ಮೂರ್ತಿಗಳಾಗಿದ್ದು ವಿಸರ್ಜನೆಯ ಬಳಿಕ ಒಂದು ಗಂಟೆಯೊಳಗೆ ನೀರಲ್ಲಿ ಕರಗಿ ಬಿಡುತ್ತದೆ ಅಲ್ಲದೆ ಇದಕ್ಕೆ ಬಳಸುವ ಬಣ್ಣಗಳು ಕೂಡ ಬೇಗ ಕರಗುತ್ತದೆ. ಆದ ಕಾರಣ ಈ ಮೂರ್ತಿಗಳಿಂದ ಪರಿಸರಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಹೇಳುತ್ತಾರೆ ಕುಬೇರರು.

ದಸರಾದಲ್ಲಿ ಜೀವಕಲೆ ಪಡೆಯುವ ನವದುರ್ಗೆಯರು ಮತ್ತು ಆದಿಶಕ್ತಿಯ ಮೂರ್ತಿಗಳು ಸಾಮಾನ್ಯ ದೇಹಗಾತ್ರದ ಮೂರ್ತಿಗಳಾಗಿರುತ್ತದೆ, ಹಾಗಾಗೀ ಅದಕ್ಕೆ ಉಡಿಸುವ ಸೀರೆಗಳು ಮಹಿಳೆಯರು ನಿತ್ಯ ಉಡುವಂತಹ ಅಳತೆಯ ಸೀರೆಗಳೇ ಆಗಿರುತ್ತದೆ. ಆದರೆ ಶಾರದ ಮಾತೆಗೆ ಉಡಿಪುವ ಸೀರೆ ಮಾತ್ರ 16 ಮೊಲದ ದೊಡ್ಡ ಸೀರೆ ಆಗಿರುತ್ತದೆ. ಮೂರ್ತಿಗಳ ಆಯುಧಗಳಿಗೆ ಮಂತ್ರಗಳಲ್ಲಿ  ತಿಳಿಸಿದಂತೆ  ಮಣ್ಣಿನಲ್ಲೇ ಆಕಾರ ಕೊಡುತ್ತಾರೆ, ಕೆಲವು ಸಾಮಾಗ್ರಿಗಳನ್ನು ಮಾತ್ರ ಮುಂದೆ ಬಳಸಲು ಸಾಧ್ಯವಾಗುವಂತೆ  ಫೈಬರ್ನಲ್ಲಿ ಮಾಡುತ್ತಾರೆ. ಶಾರದಾ ದೇವಿಯ ಶೃಂಗಾರ ಮಾಡಲು ರತ್ನ ಖಚಿತ ಚಿನ್ನಾಭರಣಗಳು ಇದ್ದರೆ , ಉಳಿದಂತೆ ಆದಿಶಕ್ತಿ ಮತ್ತು ನವದುರ್ಗೆಯರ ಅಲಂಕಾರಕ್ಕೆ ಕೃತಕ  ಆಭರಣಗಳನ್ನು ಬಳಸುತ್ತಾರೆ. ಹೀಗೆ ತಯಾರಾಗುವ ಮೂರ್ತಿಗಳಲ್ಲಿ ಮೊದಲೇ ಶಕ್ತಿ ಸಂಚಲನ ಇದ್ದರೂ ಪ್ರತಿಷ್ಠೆ ಆದ ನಂತರ ಪೂರ್ಣ ರೀತಿಯಲ್ಲಿ ಶಕ್ತಿಗಳ ಆವಾಹನೆ ಆಗುತ್ತದೆ.

ಎಲ್ಲರ ಮನಸ್ಸಿನಲ್ಲಿ ನಲಿದಾಡುವ ಶಾರದೆ ಮತ್ತು ನವದುರ್ಗೆಯರ ಮೂರ್ತಿಗಳನ್ನು ಮಾಡುವ ಕತೃ ಮಂಗಳೂರಿನ ಬಗ್ಗೆ ವಿಶೇಷ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ತಾವು ಹುಟ್ಟಿ ಬೆಳೆದದ್ದು ಶಿವಮೊಗ್ಗದಲ್ಲಿ ಆದರೂ ಮಂಗಳೂರನ್ನು ಕೂಡ ಅವರು ಅಷ್ಟೇ ಪ್ರೀತಿಸುತ್ತಾರೆ. ವರ್ಷದ ಆರು ತಿಂಗಳು ಶಿವಮೊಗ್ಗದಲ್ಲಿ ಇದ್ದರೆ , ಉಳಿದ ಆರು ತಿಂಗಳು ಮಂಗಳೂರಿನಲ್ಲಿ ಇರುತ್ತಾರೆ. "ಇಲ್ಲಿಯ ಜನರು ತುಂಬಾನೇ ಒಳ್ಳೆಯವರು , ಅವರು ಒಮ್ಮೆ ನಂಬಿಕೆ ಇಟ್ಟು ಪ್ರೀತಿ ತೋರಿಸಿದರೆ ಮತ್ತೆ ಅದನ್ನು ಸದಾ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ , ದೇವತಾ ಕಾರ್ಯ ಮಾಡುವವರಿಗೆ ವಿಶೇಷ ಗೌರವವನ್ನು ಕೊಡುತ್ತಾರೆ. ತುಂಬಾ ಜನ ನನ್ನನ್ನು ಗುರುತಿಸಿ ಅಭಿಮಾನದಿಂದ ಮಾತಾನಾಡಿಸುತ್ತಾರೆ , ಇವಾಗ ನನಗೆ 32 ವರ್ಷ , ಈ ಯುವಕನಾ ಶಾರದೆ ಮಾಡುವುದು? ಎಂದು ಕೆಲವರು ನನ್ನನ್ನು ಅನುಮಾನದಿಂದಲೇ 

ನೋಡಿದ್ದು ಉಂಟು. ಆದರೆ ಮಂಗಳೂರು ನನಗೆ ನನ್ನದೇ ಸ್ವಂತ ಊರು ಅನಿಸಿಬಿಟ್ಟಿದೆ " ಎಂದು ಖುಷಿಯಾಗಿಯೇ ಹೇಳುತ್ತಾರೆ ಕುಬೇರ. ದಸರಾದ ಹತ್ತು ದಿನದಲ್ಲಿ ಒಂದು ದಿನ ಅವರ ಅಮ್ಮ ಭಾಗ್ಯಮ್ಮ ಮತ್ತು ಅಕ್ಕ ಲತಾ ಅವರು ಸಂಸಾರ ಸಹಿತರಾಗಿ ಮಂಗಳೂರಿಗೆ ಬಂದು ದೇವಿ ದರ್ಶನ ಮಾಡಿ ಹೋಗುತ್ತಾರೆ. ಹಾಗೆಯೇ ಕೆಲಸ ಮುಗಿಸಿ ಊರಿಗೆ ಹೋದ ಕಲಾವಿದರು ಕೂಡ ದಸರಾದ ಶೋಭಾ ಯಾತ್ರೆಗೆ ಮಂಗಳೂರಿಗೆ ಬರುತ್ತಾರೆ" ಎಂದು ಕುಬೇರರು ಹೇಳುತ್ತಾರೆ "ಮೂರ್ತಿ ಮಾಡುವಾಗ ಇರುವ ಭಕ್ತಿ ಕೊನೆಯ ದಿನ ದುಪ್ಪಟ್ಟಾಗುತ್ತದೆ ಇಲ್ಲಿಯ ಆಚರಣೆ , ಶಾರದೆಗೆ ಮಾಡುವ ಅಲಂಕಾರ , ಜಲ್ಲಿ ಹಾಕುವ ಕ್ರಮ ನೋಡಲಿಕ್ಕೆ ತುಂಬಾನೇ ಚಂದ , ಅದನ್ನು ಕಾಣುವುದಕ್ಕಾಗಿ ಊರಿಗೆ ಹೋದ ಎಲ್ಲರೂ ಹಿಂತಿರುಗಿ ಮತ್ತೆ ಬರುತ್ತೇವೆ ,ನವದುರ್ಗೆಯರನ್ನು , ಶಾರದೆಯನ್ನು ಜಲಸ್ತಂಭನ ಮಾಡುವಾಗ  ನಾವು ಅಲ್ಲೇ ಇರುತ್ತೇವೆ ಮನಸ್ಸಿಗೆ ಬೇಸರವೆನಿಸಿ ಕಣ್ಣಲ್ಲಿ ನೀರು ಬರುತ್ತದೆ ಆದರೆ ತಾಯಿ ನಾನು ಮತ್ತೆ ಬರುತ್ತೇನೆ ಎಂದು ಸಮಾಧಾನ ಮಾಡುವ ಅನುಭವ ಆಗುತ್ತದೆ" ಎಂದು ಹೇಳುತ್ತಾರೆ . ಇಲ್ಲಿಯ ತನಕ ಬೇರೆ ಬೇರೆ ಕಲಾವಿದರು ಈ ಮೂರ್ತಿಗಳನ್ನು ಮಾಡಲು ಕುಬೇರರ ಜೊತೆಯಲ್ಲಿ ಮಂಗಳೂರಿಗೆ ಬಂದಿದ್ದಾರೆ. ಈ ವರ್ಷ ಲೋಕೇಶ್ , ಹಾಲೇಶ್ , ಕಿರಣ್ , ಸಚಿನ್ , ವಿಕಾಸ್ , ಹರೀಶ್ , ಪ್ರಕಾಶ್ , ಶಂಭು , ಬಸವ ಅಪ್ಪು , ಮನೋಜ್ ಯಾಧವ್, ನವೀನ್, ಪ್ರಮೋದ್ ಕುಮಾರ್, ಗೌತಮ್, ಅಭಿಷೇಕ್ ಬಂದಿದ್ದಾರೆ. ಇವರಿಗೆ ಊರಿನ ಕಲಾವಿದರಾದ ಪವನ್ ಮೂಡಬಿದ್ರೆ , ಧನುಷ್, ಸೂರಜ್ ಮತ್ತು ಹರ್ಷಿತ್ ಜೊತೆಯಾಗಿದ್ದಾರೆ ಹಾಗೆಯೇ ಕೆಲವು ಜನರು ಇಲ್ಲಿ ಸೇವಾರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ.

ಕುದ್ರೋಳಿ ಕ್ಷೇತ್ರಕ್ಕೆ ಬರುವ ಜನಸ್ತೋಮವನ್ನು ಭಕ್ತಿ ಭಾವದ ಸರೋವರದಲ್ಲಿ  ತೇಲಾಡಿಸಿ ಬಿಡುವ ಈ ಕಲಾವಿದನಿಗೆ ಮತ್ತೆ ಅವರ ಇಡೀ ತಂಡಕ್ಕೆ ಜ್ಞಾನದಾತೆ, ಕಲಾ ಮಾತೆ ತಾಯಿ ಸರಸ್ವತಿ ಇನ್ನಷ್ಟು ಶಕ್ತಿ ತುಂಬಲಿ , ಅವರ ಹೆಸರು ವಿಶ್ವ ವಿಖ್ಯಾತಿಯನ್ನು ಪಡೆಯುವಂತೆ ಹರಸಲಿ ಎಂದು ಮನಸ್ಪೂರ್ತಿಯಾಗಿ ಪ್ರಾರ್ಥಿಸುತ್ತೇನೆ.

ಗೀತಾ ಲಕ್ಷ್ಮೀಶ್