ಮಂಗಳೂರು:  ವಿಶ್ವವಿದ್ಯಾನಿಲಯದ ಶೈಕ್ಷಣಿಕ ರೋಡ್‌ ಮ್ಯಾಪ್‌ ತಯಾರಿಸಲು ಪ್ರಾಧ್ಯಾಪಕರಾಗಿ ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಣ ತಜ್ಞರನ್ನೊಳಗೊಂಡ ಶೈಕ್ಷಣಿಕ- ಆಡಳಿತ ಸಮಾಲೋಚನಾ ಸಭೆ, ವಿವಿಯ ಸಿಂಡಿಕೇಟ್‌ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ನ್ಯಾಕ್‌ ಮೌಲ್ಯಾಂಕ ಹೆಚ್ಚಳಕ್ಕೆ ಪೂರ್ವ ತಯಾರಿ, ಐಕ್ಯೂಎಸಿ ಘಟಕದ ಬಲವರ್ಧನೆ, ವಿವಿಯ ಕಾನೂನು, ಪರಿನಿಯಮ ಹಾಗೂ ನಿಯಮಾವಳಿಗಳ ಬಗ್ಗೆ ಆಡಳಿತ ಸಿಬ್ಬಂದಿಗೆ ತರಬೇತಿ ನೀಡುವುದು, ಸಂಶೋಧನಾ ಅನುದಾನಕ್ಕೆ ಪ್ರಸ್ತಾವನೆಗಳನ್ನು ತಯಾರಿಸಲು ನಿವೃತ್ತ ಹಿರಿಯ ಪ್ರಾಧ್ಯಾಪಕರ ಮಾರ್ಗದರ್ಶನ ಪಡೆಯುವುದು, ಬೇರೆ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾರ್ಯಕ್ರಮಗಳ ಆಯೋಜನೆ, ವಿವಿಧ ಪೀಠಗಳನ್ನು ಹೆಚ್ಚು ಕ್ರಿಯಾಶೀಲವಾಗಿಸುವುದು, ಸಲಹಾ ಸಮಿತಿ ರಚನೆ ಮೊದಲಾದ ವಿಷಯಗಳ ಬಗ್ಗೆ ಸಲಹೆಗಳನ್ನು ಸ್ವೀಕರಿಸಲಾಯಿತು.

ಕಣ್ಣೂರು ಮತ್ತು ಕ್ಯಾಲಿಕಟ್‌ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಂ. ಅಬ್ದುಲ್‌ ರಹಿಮಾನ್‌, ಹಂಪಿ ವಿಶ್ವವಿದ್ಯಾನಿಲಯ ಮತ್ತು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ ವಿವೇಕ್‌ ರೈ, ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ, ಮಂಗಳೂರು ವಿವಿಯ ವಿಶ್ರಾಂತ ಕುಲಸಚಿವ ಡಾ. ಕೆ ಜನಾರ್ದನ, ಈಗಿನ ಕುಲಸಚಿವ ರಾಜು ಮೊಗವೀರ, ಕಲಸಚಿವ (ಪರೀಕ್ಷಾಂಗ) ಪ್ರೊ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ. ಗಣೇಶ್‌ ಸಂಜೀವ್‌ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.