ಮಂಗಳೂರು: ಬೋಳಾರ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಬೋಳಾರ ಇಸ್ಲಾಮಿಕ್ ಸೆಂಟರ್ ನಲ್ಲಿ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ನ ಸಹಯೋಗದಲ್ಲಿ ಸೀರತ್ ಪ್ರಯುಕ್ತ ರಕ್ತದಾನ ಶಿಬಿರವನ್ನು ದಿನಾಂಕ 24-09-2023 ರಂದು ಆಯೋಜಿಸಲಾಯಿತು.

ಕಾರ್ಯ ಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದ ಡಾ| ಸೈಫುದ್ದೀನ್ ಅಬ್ದುಲ್ಲಾ ರವರು ಓರ್ವ ರಕ್ತದಾನಿ ಮೂರು ಜೀವಗಳನ್ನು ಉಳಿಸುವನು, ಸ್ವತಃ ರಕ್ತದಾನಿಯ ರಕ್ತ ನವೀಕರಣಗೊಳ್ಳುತ್ತದೆ, ಸಮಾಜದಲ್ಲಿ ಕೋಮು ಸೌಹಾರ್ದತೆ, ಸಹೋದರತೆ ಮತ್ತು ಸಮಾಜ ಸೇವೆ ಬೆಳೆಸಲು ಸಹಕರಿಸುತ್ತಾನೆ ಎಂದರು.
ಅತಿಥಿಗಳಾಗಿ KMCಯ ವೈದ್ಯಾಧಿಕಾರಿ ಡಾl ಮಿಹಿರ್ ರವರು ತಮ್ಮ ಭಾಷಣದಲ್ಲಿ ಸಮಾಜ ಸೇವೆ ಈಶ್ವರ ಸೇವೆ ಯಾಗಿದೆ, ಮನುಷ್ಯ ಇನ್ನೊಬ್ಬ ಮನುಷ್ಯನ ರಕ್ಷಣೆ ಮಾಡುವುದು ನೈಜ ದೇವಾರಾಧನೆಯಾಗಿದೆ ಎಂದರು.
ಸ್ವಾಗತ ಭಾಷಣ ನಿರ್ವಹಿಸಿದ ಟ್ರಸ್ಟಿ ಕೆ. ಎಂ. ಅಶ್ರಫ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಬೋಳಾರ ಇಸ್ಲಾಮಿಕ್ ಸೆಂಟರ್ ಪ್ರವಾದಿ ಕಾಲದ ಮಸೀದಿಗಳ ಮಾದರಿಯಲ್ಲಿ ಶೈಕ್ಷಣಿಕ, ಸುಧಾರಣಾ ಮತ್ತು ಸಮಾಜ ಸೇವಾ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು , ಸೀರತ್ ಪ್ರಯುಕ್ತ ಪ್ರವಾದಿ ಜನ್ಮದ ತಿಂಗಳಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.ಟ್ರಸ್ಟ್ ನ ಉಪಾಧ್ಯಕ್ಷರಾದ ಪಿ.ಬಿ.ಅಬ್ದುಲ್ ಹಮೀದ್ ರವರು ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂದರ್ಭೋಚಿತ ನುಡಿಗಳನ್ನಾಡಿದರು.
ಮುಬಶ್ಶಿರ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಟ್ರಸ್ಟಿ ಜನಾಬ್ ಕೆ. ಅಬ್ದುರ್ರಹ್ಮಾನ್ ರವರು ಧನ್ಯವಾದವಿತ್ತರು, ಟ್ರಸ್ಟಿ ಜನಾಬ್ ರಹ್ಮತುಲ್ಲಾಹ ರವರು ಕಾರ್ಯ ಕ್ರಮ ನಿರೂಪಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಉತ್ತಮವಾಗಿ ಸ್ಪಂದಿಸಿದರು.