ಪ್ರತಿ ವರುಷದಂತೆ ಈ ವರುಷವೂ ಅಕ್ಟೋಬರ್ 7ರಿಂದ ಮಂಗಳೂರು ದಸರಾ ಎಂದಿನ ವೈಭವದೊಡನೆ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯುವುದು ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಸಾಯಿರಾಂ ಹೇಳಿದರು.

ವಿವರ ನೀಡಿದ ಹರಿಕೃಷ್ಣ ಬಂಟ್ವಾಳ ಅವರು ಮೆರವಣಿಗೆಯ ಹೊರತಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವೂ ನಡೆಯುತ್ತದೆ. ಇದು ಜನರ ದಸರಾ. ಇದು ಜಿಲ್ಲೆಯಲ್ಲಿ ನಡೆಯುವ ನಾಡಹಬ್ಬ. ಹಾಗಾಗಿ ಎಲ್ಲ ಪಕ್ಷಗಳು ಪಾಲ್ಗೊಳ್ಳಬಹುದು. ಕೆಲವರು ಕ್ಷೇತ್ರದಲ್ಲಿ ಹಣ ಇಲ್ಲ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಸ್ಥಳೀಯ ಶಾಸಕ ಮತ್ತು ಕಾರ್ಪೊರೇಟರ್‌ಗಳು ನಾವು ಮಾಡುತ್ತೇವೆ ಎಂದಿದ್ದರು. ಆದರೆ ದೇವಾಲಯದವರು ಕೇಳಿದ್ದಾರೆ ಎಂದು ತಪ್ಪು ಮಾಹಿತಿಯನ್ನು ಪ್ರಚಾರ ಮಾಡಲಾಗಿದೆ ಎಂದು ಅವರು ಹೇಳಿದರು.

ಶಾಸಕ, ಕಾರ್ಪೊರೇಟರ್‌ಗಳು ಮಾಡದಿದ್ದರೂ ನಾವು ಮಾಡುತ್ತಿದ್ದೆವು. ದಸರಾ ನಡೆಯುವುದೇ ಭಕ್ತ ರು ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ನಡೆಯುತ್ತದೆ. ಕೋವಿಡ್‌ ಕಾರಣಕ್ಕೆ ಆದಾಯ ಎಲ್ಲ ಇಳಿದಿದೆ. ಆದರೆ ದಸರಾ ನಡೆಸಲು ಅಗತ್ಯದ ಹಣಕಾಸು ಕ್ಷೇತ್ರದಲ್ಲಿ ಸಂಗ್ರಹ ಇದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.

ಕೊರೋನಾ ಕಾರಣದಿಂದ ಅನ್ನ ಸಂತರ್ಪಣೆ ಇರುವುದಿಲ್ಲ. ದಸರಾ ವೇಳೆ ಎಲ್ಲರಿಗೂ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಬೇಕಾದವರು ಆಧಾರ್ ತರಬೇಕು ಎಂದು ಪದ್ನರಾಜ್ ಹೇಳಿದರು.

ನಾರಾಯಣ ಗುರುಗಳ ಅನುಗ್ರಹದಿಂದ ಹಿಂದೆ ನಡೆದಂತೆಯೂ ಈ ಬಾರಿಯೂ ದಸರಾ ನಡೆಯುತ್ತದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಊರ್ಮಿಳಾ ರಮೇಶ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಪದ್ಮರಾಜ, ಎಂ. ಶೇಖರ ಪೂಜಾರಿ, ಮಾಧವ ಸುವರ್ಣ, ದೇವೇಂದ್ರ ಪೂಜಾರಿ, ಬಿ. ಜಿ. ಸುವರ್ಣ, ಜಿತಿನ್ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು.