ಮಾಣಿ: ಈ ತಿಂಗಳ 22ರಿಂದ 26ರವರೆಗೆ ನಡೆಯುವ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಶನಿವಾರ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು.
ಜಿಲ್ಲೆಯ ಮೂಲೆ ಮೂಲೆಗಳಿಂದ ವಾಹನಗಳಲ್ಲಿ ಅಡಿಕೆ, ಸಿಂಗಾರ, ಬಾಳೆಗೊನೆ, ಬಾಳೆ ಎಲೆ, ಹಣ್ಣು ಮತ್ತು ತರಕಾರಿಗಳು, ಹೋಮ ದ್ರವ್ಯಗಳು, ಅನ್ನ ಸಂತರ್ಪಣೆಗೆ ಅಕ್ಕಿ, ತೆಂಗಿನಕಾಯಿ ಬೆಲ್ಲ ಮತ್ತಿತರ ದವಸ ಧಾನ್ಯಗಳೊಂದಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಈ ಸಹಸ್ರಮಾನದ ಕಾರ್ಯಕ್ರಮಕ್ಕೆ ಸುವಸ್ತುಗಳನ್ನು ಸಮರ್ಪಿಸಿ ಧನ್ಯರಾದರು.
ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಹೋಬಳಿ ಮುಖಂಡರಾದ ಮುಗುಳಿ ತಿರುಮಲೇಶ್ವರ ಭಟ್ಟರು ಮಂಗಳೂರು- ಮೈಸೂರು ಹೆದ್ದಾರಿಯ ಕೋದಂಡದ್ವಾರದ ಬಳಿ ಶ್ರೀರಾಮದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆಗೊಳಿಸಿದರು.
ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್, ಕೋಶಾಧಿಕಾರಿ ಮೈಕೆ ಗಣೇಶ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಸಂಘಟನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಮೀನಗದ್ದೆ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಮೂರು ಮಂಡಲಗಳ ಅಧ್ಯಕ್ಷರಾದ ಪರಮೇಶ್ವರ ಭಟ್, ಗಣೇಶಮೋಹನ ಕಾಶಿಮಠ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಮತ್ತು ಮಂಗಳೂರು ಹೋಬಳಿಯ ಸಮಸ್ತ ಶಿಷ್ಯಭಕ್ತರು ನೂರಕ್ಕೂ ಅಧಿಕ ವಾಹನಗಳಲ್ಲಿ ಹಸುರುವಾಣಿ ಹೊರೆಕಾಣಿಕೆ ಸಮರ್ಪಣೆ ಮಾಡಿದರು.
ಇಂದು ಪುರಪ್ರವೇಶ
ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪುರಪ್ರವೇಶ ಸಮಾರಂಭ 22ರಂದು ಮಧ್ಯಾಹ್ನ 3 ಗಂಟೆಗೆ ಕೋದಂಡರಾಮ ದ್ವಾರದ ಬಳಿ ನಡೆಯಲಿದೆ. ಶ್ರೀಗಳನ್ನು ಪೂರ್ಣಕುಂಭ ಹಾಗೂ ಛತ್ರ ಚಾಮರಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆದೊಯ್ಯಲಾಗುತ್ತದೆ. ನಾಡಿನ ಖ್ಯಾತ ಸಾಂಸ್ಕ್ರತಿಕ ಮತ್ತು ಜಾನಪದ ತಂಡಗಳು, ಕುಣಿತ ಭಜನಾ ತಂಡಗಳು, ನೃತ್ಯಚೆಂಡೆ ತಂಡಗಳು ಈ ಮೆರವಣಿಗೆಗೆ ಮೆರುಗು ನೀಡಲಿವೆ.
23 ರಿಂದ 26 ರ ವರೆಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಭಜನೆ ಮತ್ತು 22 ರಿಂದ 25 ರ ವರೆಗೆ ಪ್ರತಿದಿನ ಸಂಜೆ 7 ರಿಂದ 10ರವರೆಗೆ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮುದ ನೀಡಲಿವೆ. 23ರಂದು ಸೋಮವಾರ ಬೆಳಿಗ್ಗೆ 11.20ರ ಮೀನಲಗ್ನ ಸುಮೂರ್ಹದಲ್ಲಿ ರಾಘವೇಶ್ವರ ಶ್ರೀಗಳ ಅಮೃತಹಸ್ತಗಳಿಂದ, ಗೋಕರ್ಣದ ವೇದಮೂರ್ತಿ ಶ್ರೀ ಅಮೃತೇಶ ಭಟ್ಟ ಹಿತೇ ಅವರ ಆಚಾರ್ಯತ್ವದಲ್ಲಿ ಸಪರಿವಾರ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರ ಪುನಃಪ್ರತಿಷ್ಠೆ ನಡೆಯಲಿದೆ. ಜತೆಗೆ ಸರ್ವಾಲಂಕಾರ ಭೂಷಿತ ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಶ್ರೀಗುರುಭಿಕ್ಷಾ ಸೇವೆ ಮತ್ತು ಸೂತ್ರಸಂಗಮ ಜರುಗಲಿದೆ.