ಮೂಡುಬಿದಿರೆ: ‘ಆಳ್ವಾಸ್ ಫಾರ್ಮಸಿಯು 1982ರಲ್ಲಿ ಆರಂಭಗೊಂಡಿದ್ದು, ಆಯುರ್ವೇದ ಔಷಧಿ ಮತ್ತು ಇತರ ಆಯುಷ್ ಉತ್ಪನ್ನಗಳನ್ನು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉತ್ಪಾದಕರಾಗಿ ಅಭಿವೃದ್ಧಿಗೊಂಡಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. 

ಮಿಜಾರಿನ ಆಳ್ವಾ ಫಾರ್ಮಸಿಯಲ್ಲಿ ಸೋಮವಾರ ನಡೆದ ವಿವಿಧ ಔಷಧೀಯ ಉತ್ಪನ್ನಗಳ ‘ಫ್ಯಾಕ್ಟರಿ ಔಟ್‍ಲೆಟ್, ವೆಬ್‍ಸೈಟ್ ಬಿಡುಗಡೆ ಮತ್ತು ಟಿವಿಸಿ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೇಗೆ ನಮ್ಮ ನೆರಳು ನಮ್ಮನ್ನು  ಹಿಂಬಾಲಿಸುತ್ತದೆಯೋ, ಹಾಗೆಯೇ ನಾವು ನಂಬಿರುವ ಮೌಲ್ಯಗಳು ನಮ್ಮನ್ನು ರಾಜ ಮಾರ್ಗದಲ್ಲಿ ಕ್ರಮಿಸುವಂತೆ ಮಾಡುತ್ತವೆ.  ಆದರೆ ಇಂದಿನ ಸ್ಪರ್ಧಾತ್ಮಕ ಜಾಹೀರಾತಿನ ಯುಗದಲ್ಲಿ ವಸ್ತುಗಳ ಮಾರುಕಟ್ಟೆ ವಿಧಾನವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಉತ್ಪನ್ನವೊಂದು ತನ್ನ ಅಂತಸತ್ವದ ಜೊತೆ ಜಾಹೀರಾತುಗೊಂಡಾಗ ಜನರನ್ನು ತಲುಪುತ್ತದೆ. ಜಾಹೀರಾತು ಪ್ರಾಮಾಣಿಕರಾಗಿರಬೇಕು. ಜನರಲ್ಲಿ ವಿಶ್ವಾಸರ್ಹತೆಯನ್ನು ಮೂಡಿಸಬೇಕು ಎಂದರು. 

ಆಳ್ವಾಸ್ ಫಾರ್ಮಸಿಯ ನೂತನ ಉತ್ಪನ್ನ ಸುಕೇಶ್  ಪೋಷಕ  ತೈಲವು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿದೆ. ಇನ್ನಿತರ ಔಷಧೀಯ ಉತ್ಪನ್ನಗಳನ್ನು ಉತ್ತಮ ರೀತಿಯಲ್ಲಿ ಮಾರುಕಟ್ಟೆ ಮಾಡಿ, ಅಂತರರಾಷ್ಟ್ರೀಯ ಮಟ್ಟದವರೆಗೆ ತಲುಪುವಂತಾಗಬೇಕು ಎಂದು ಅವರು ಹೇಳಿದರು. 

ಆಳ್ವಾಸ್ ಫಾರ್ಮಸಿಯು ಸರ್ವರ ಸಹಕಾರದಿಂದ ಇನ್ನಷ್ಟು ಆರೋಗ್ಯದಾಯಕ ಔಷಧೀಯ ಉತ್ಪನ್ನಗಳನ್ನು ಸಮಾಜಕ್ಕೆ ನೀಡುವಂತಾಗಲಿ. ಜನರ ಆರೋಗ್ಯ ಸುಧಾರಿಸಲಿ ಎಂದು ಶುಭ ಹಾರೈಸಿದರು . 

ಈ ಕಾರ್ಯದಲ್ಲಿ ‘ಸುಕೇಶ ಹೇರ್ ಆಯಿಲ್’ ನೂತನ ಜಾಹೀರಾತನ್ನು ಬಿಡುಗಡೆಗೊಳಿಸಲಾಯಿತು.   ಈ ಕೇಶ ತೈಲವು ಭೃಂಗರಾಜ, ಜಪಪುಷ್ಪ, ಬ್ರಾಹ್ಮಿ, ತೆಂಗಿನ ಹಾಲು ಇತ್ಯಾದಿಗಳಿಂದ ಕೂಡಿದ್ದು, ಸಮೃದ್ಧವಾಗಿದೆ. ತೆಂಗಿನ ಎಣ್ಣೆ ಬೇಸ್‍ನಲ್ಲಿ ಸಂಸ್ಕರಿಸಲಾಗಿದೆ. ಇದರಿಂದ ಕೂದಲಿನ ಬೆಳವಣಿಗೆ, ಉದುರುವಿಕೆ ತಡೆಗಟ್ಟುವಿಕೆ, ತಲೆಹೊಟ್ಟು ಮತ್ತು ನೆತ್ತಿಯ ಶುಷ್ಕತೆ ನಿವಾರಣೆ, ನಿದ್ರೆಗೆ ಉತ್ತೇಜನ, ಒತ್ತಡ ನಿವಾರಣೆ, ಬಿಳಿಯಾಗುವುದನ್ನು ವಿಳಂಬಗೊಳಿಸುವ ಅಂಶಗಳನ್ನು ಹೊಂದಿದೆ.

ಆಳ್ವಾ ಫಾರ್ಮಾಸಿಯ ಹೆಚ್ಚಿನ ಉತ್ಪನ್ನಗಳು ಅಮೆಜಾನ್ ಹಾಗೂ ಸ್ಪಾರ್ ಹೈಪರ್ ಮಾರ್ಕೆಟ್‍ನಲ್ಲಿ ಲಭ್ಯವಿದೆ.  ಆಳ್ವ ಫಾರ್ಮಾಸಿಯ www.alvasherbalhealth.com ವೆಬ್ಸೈಟ್‍ನಲ್ಲಿ ಎಲ್ಲಾ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.  

ಉದ್ಯಮಿ ಶ್ರೀಪತಿ ಭಟ್, ರಾಜೀವ್ ಗಾಂಧಿ ವಿಜ್ಞಾನ ವಿವಿಗಳ  ವಿಶ್ರಾಂತ ಕುಲಪತಿ ಡಾ ಎಸ್ ರಮಾನಂದ ಶೆಟ್ಟಿ, ಉದ್ಯಮಿ ಕಿಶೋರ್ ಶೆಟ್ಟಿ, ಗ್ರೀಷ್ಮಾ ಆಳ್ವ, ಹನಾ ಆಳ್ವ ಇದ್ದರು. 

ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ನಿತೇಶ್ ಕುಮಾರ್ ಮಾರ್ನಾಡ್  ಕಾರ್ಯಕ್ರಮ ನಿರೂಪಿಸಿದರು.