ಮೂಡುಬಿದಿರೆ:  ಜೀವಶಾಸ್ತ್ರದ ಶಿಕ್ಷಕರು ಈ ಕಾಲಕ್ಕಾನುಗುಣವಾದ ಕೌಶಲ್ಯಗಳನ್ನು ಆಳವಡಿಸಿಕೊಂಡು, ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಯನ್ನು ಪೂರೈಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. 

ದ.ಕ ಜಿಲ್ಲಾ ಪದವಿಪೂರ್ವ  ಜೀವಶಾಸ್ತ್ರ ಉಪನ್ಯಾಸಕರ ಸಂಘದ ದಶಮನೋತ್ಸವದ ಹಿನ್ನಲೆಯಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದ.ಕ ಜಿಲ್ಲಾ ಪದವಿಪೂರ್ವ  ಜೀವಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ದಕ್ಷಿಣ ಕನ್ನಡ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ‘’ಬಯೋದಶಕ, ಒಂದು ದಿನದ ಕಾರ್ಯಾಗಾರ’’ವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಹೆಚ್ಚಿನ ವಿದ್ಯಾರ್ಥಿಗಳು ಡಾಕ್ಟರ್ ಅಥವಾ ಇಂಜಿಯರ್ ಆಗುವ ಬಯಕೆಯಿಂದ ಪದವಿಪೂರ್ವ ಹಂತದಲ್ಲಿ ಪಿಸಿಎಂಬಿ ವಿಷಯವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.  ಈ ಹಂತದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ.  ಇಂದಿನ ಕಾಲಘಟ್ಟದಲ್ಲಿ ಪದವಿಪೂರ್ವ ಪರೀಕ್ಷೆಯ ಅಂಕಗಳಿಂದ ಸರಕಾರಿ ಕೋಟಾದಲ್ಲಿ ಸೀಟನ್ನು ಪಡೆಯಲು  ಸಾಧ್ಯವಿಲ್ಲ.  ಈ  ಹಂತದಲ್ಲಿ ವಿದ್ಯಾರ್ಥಿಗಳನ್ನು ಎನ್‍ಸಿಇಆರ್‍ಟಿ ಪಠ್ಯಕ್ರಮದ ಜೊತೆಯಲ್ಲಿ ನೀಟ್, ಸಿಇಟಿ, ಕ್ಲಾಟ್, ಜೆಇಇ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಬೇಕಾದ ಜವಾಬ್ದಾರಿ ಶಿಕ್ಷಕನದ್ದು. ಹಾಗಾಗಿ ಇಂದಿನ ಶಿಕ್ಷಕ ಆಧುನಿಕ ಜಗತ್ತಿನ ಸವಾಲುಗಳಿಗೆ ತನ್ನನ್ನು ತಯಾರಿ ಮಾಡಿಕೊಳ್ಳುವ ಜರೂರತ್ತಿದೆ ಎಂದರು.  

ಸುಸ್ಥಿರತೆ ಇಂದಿನ ಸವಾಲಾಗಿದ್ದು, ನಮ್ಮೆಲ್ಲರ  ಪ್ರಗತಿ ನಮ್ಮ ತರಗತಿ ಕೋಣೆಯಲ್ಲಿ ರೂಪುಗೊಳ್ಳಲಿದೆ. ಜೀವವಿಜ್ಞಾನದ ಪ್ರಾಧ್ಯಪಕರುಗಳು ಮುಂದಿನ ನೂರು ವರ್ಷಗಳ ಮಾನವಕುಲದ ನಿರ್ಮಾತೃಗಳು. ಕಳೆದ ಎರಡು ಶತಮಾನದಲ್ಲಿ ಜೀವವಿಜ್ಞಾನದ ಕೊಡುಗೆಗಳಾದ ಆ್ಯಂಟಿ ಬಯೋಟಿಕ್, ಜೆನೆಟಿಕ್ ಇಂಜಿನಿಯರಿಂಗ್, ಹಾಗೂ ಕೃಷಿ ವಿಜ್ಞಾನದ ಮೂಲಕ ಸಮಾಜಕ್ಕೆ ಈ ಕ್ಷೇತ್ರದಿಂದ ಬಂದಿದೆ. 

ಜೀವಶಾಸ್ತ್ರ ವಿಷಯ ಜೀವಂತಿಕೆಯನ್ನು ಹೊಂದಿರುವ ವಿಷಯ. ಜೀವಶಾಸ್ತ್ರದ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಹೆಚ್ಚು ಪ್ರೀತಿಸುತ್ತಾರೆ. ಹಾಗಾಗಿ ಈ ಕ್ಷೇತ್ರದ ಸವಾಲುಗಳನ್ನು ಶಿಕ್ಷಕರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದರು.  

ದಕ್ಷಿಣ ಕನ್ನಡ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಯಾನಂದ ಸುವರ್ಣ ಮಾತನಾಡಿ, ಜೀವ ಸಂಕುಲವನ್ನು ಉಳಿಸುವ ಪರಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಅವಶ್ಯಕತೆ ಇದೆ ಎಂದರು. 

ದ.ಕ ಜಿಲ್ಲಾ ಪದವಿಪೂರ್ವ  ಜೀವಶಾಸ್ತ್ರ ಉಪನ್ಯಾಸಕರ ಸಂಘದ ಸ್ಥಾಪಕ ಅಧ್ಯಕ್ಷ ಸುಕುಮಾರ್ ಜೈನ್ ಮಾತನಾಡಿ,  ನಾವೆಲ್ಲರು ಆತ್ಮ ಸಾಕ್ಷಿಗೆ ಅನುಗುಣವಾಗಿ ದುಡಿದರೆ, ಅದರಿಂದ ಸಫಲತೆಯನ್ನು  ಪಡೆಯಲು ಸಾಧ್ಯ. ನಾವು ಕಲಿಸುವ ವಿಷಯ ಮಸ್ತಕಕ್ಕೆ ಹೋಗುವುದರ ಜೊತೆಗೆ ಹೃದಯಕ್ಕೆ ತಲುಪುವಂತಾಗಬೇಕು. ಅದು ಬಹಳಷ್ಟು ಪರಿಣಾಮಕಾರಿ ಎಂದರು. 

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಜಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳ  ಕಠಿಣ ಪರಿಶ್ರಮದಿಂದ ದಕ್ಷಿಣ ಕನ್ನಡ ಜಿಲ್ಲೆ ಕಳೆದ ಮೂರು ವರ್ಷಗಳಲ್ಲಿ  ಸತತವಾಗಿ ಪದವಿಪೂರ್ವ ಪರೀಕ್ಷೆಯ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಶ್ರಮ ಶ್ಲಾಘನೀಯ. ಶಿಕ್ಷಕ ಹುದ್ದೆಯಲ್ಲಿ ಸಿಗುವಷ್ಟು ಆತ್ಮತೃಪ್ತಿ ಹಾಗೂ ಗೌರವ ಬೇರೆ ಯಾವುದೇ ವೃತ್ತಿಯಲ್ಲಿ ಲಭಿಸಲು ಸಾಧ್ಯವಿಲ್ಲ ಎಂದರು.

ದ.ಕ ಜಿಲ್ಲಾ ಪದವಿಪೂರ್ವ  ಜೀವಶಾಸ್ತ್ರ ಉಪನ್ಯಾಸಕರ ಸಂಘದ ಹೊಸ ಲಾಂಛನವನ್ನು ಇದೇ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. 

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಸೇವಾ ನಿವೃತ್ತರಾದ ಜೀವಶಾಸ್ತ್ರ ಉಪನ್ಯಾಸಕರುಗಳಾದ ಕಟೀಲು ಪಪೂ ಕಾಲೇಜಿನ ಸುರೇಶ ಶೆಟ್ಟಿ ಹಾಗೂ ಕಬಕದ ಸರಕಾರಿ ಪದವಿಪೂರ್ವ ಕಾಲೇಜಿನ ವನಿತಾ ಅವರನ್ನು ಸನ್ಮಾನಿಸಲಾಯಿತು.

ಜೀವಶಾಸ್ತ್ರ ವಿಷಯದ ಸ್ಟಡಿ ಮೆಟೀರಿಯಲ್‍ನ್ನು ಈ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಮಾಹಿತಿ ಕೈಪಿಡಿ ತಯಾರಿಸಿದ ವಿವಿಧ ಕಾಲೇಜುಗಳ 24 ಜನ ಉಪನ್ಯಾಸಕರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಹೆಚ್ ಕೊರ್ಸೆ ಕಾರ್ಯಗಾರ ನಡೆಸಿಕೊಟ್ಟರು. ವಿವಿಧ ಕಾಲೇಜುಗಳಿಂದ 175ಕ್ಕೂ ಅಧಿಕ ಜೀವಶಾಸ್ತ್ರ ವಿಷಯದ ಉಪನ್ಯಾಸಕರು ಪಾಲ್ಗೊಂಡರು. 

 ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ ಸದಾಕತ್, ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ಕುಮಾರ್ ಶೆಟ್ಟಿ ಇದ್ದರು. 

ದ.ಕ ಜಿಲ್ಲಾ ಪದವಿಪೂರ್ವ  ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕರುಗಳಾದ ಅಕ್ಷತಾ, ರುಚಿಕಾ, ಮೈತ್ರಿ  ಕಾರ್ಯಕ್ರಮ ನಿರ್ವಹಿಸಿದರು.  ಉಪನ್ಯಾಸಕ ಗುಣಪ್ರಸಾದ್ ಕಾರಂದೂರು ವಂದಿಸಿದರು.