ಜಿನಗುಡುವ ಸೋನೆಮಳೆ, ವಟಗುಟ್ಟುವ ವಟರು ಗಪ್ಪೆ ,ಸುಳಿ ಸುಳಿಯಾಗಿ ಸುರುಳಿಯಂತೆ ಆವರಿಸುವ ಹೊಗೆಯ ನಡುವೆ ಸರಕ್ಕನೆ ಜಾರುವ - ಜಾರಿದಲ್ಲಿ ಪಚಕ್ಕನೆ ಮೈ-ತಲೆಗೆ ರಟ್ಟುವ-ಚಿಮ್ಮುವ ಕೆಸರಿನಾಟದ ರಂಪಾಟ ರಂಗಿ ನೋಕುಳಿಯಾಗಿ ನೋಡುಗರ ಕಣ್ಮನ ತಣಿಸುತ್ತದೆ. ಕಾಡು-ಮೇಡು, ಗಿಡ-ಗಂಟಿ, ಜಲ-ಹೊಲ, ಬೀಳು-ಕಾಳು, ಜಲಪಾತ-ಹಿಮಪಾತ, ಎಲ್ಲವೂ ಪ್ರಕೃತಿಯ ಸೊಬಗನ್ನು, ಸೌಂದರ್ಯವನ್ನು ಸವಿಯುವ ಕಣ್ ಮನಗಳಿಗೆ ಕಟ್ಟಿಕೊಡುವ ಪ್ರೇರಕಗಳು. ಮನಕ್ಕೆ ಪೂರಕವಾದ, ಪ್ರೇರಕವಾದ ಇವೆಲ್ಲವೂ ಮುದ ನೀಡುವುದರೊಂದಿಗೆ ಸದಾ ಉಲ್ಲಸಿತಗೊಳಿಸಲು ಕಾರಣೀ ಭೂತವಾದವುಗಳು. ಆದುದರಿಂದಾಗಿ ಹಿಂದಿನ ಕಾಲದ ಜನರು ಸ್ವತಹ ದುಡಿದು, ಕೈಯಾರೆ ಕೆಲಸ ಮಾಡಿ ಪ್ರಕೃತಿಯ ಎಲ್ಲವನ್ನು ಆಸ್ವಾದಿಸುತ್ತಿದ್ದರು. ಆದರೆ ದಿನ ಕಳೆದಂತೆ ನವ ನವೀನ ಉಪಕರಣಗಳು, ಸರಕುಗಳು, ಸರಂಜಾಮುಗಳು ಕೈ ಸೇರಿದಂತೆ ಪ್ರಕೃತಿಯಿಂದ ಮನುಷ್ಯ ದೂರವಾಗುತ್ತಾ ಹೋದನು.
ಮನೆಯಲ್ಲೇ ಬೆಳೆದ, ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿ : ಬೆಳಗ್ಗೆ ಏಳುವ ಸಮಯ ಬೆಳಗಿನ ಜಾವ ಐದುವರೆಯಿಂದ ಜಾರುತ್ತಾ ಬಂದು ಏಳಕ್ಕೂ ತತ್ವಾರಗೊಂಡು ಈ ದಿನಗಳಲ್ಲಿ ಹಕ್ಕಿಗಳ ಕಲರವ, ಚಿಲಿಪಿಲಿ, ಕೋಳಿಯ ಕೂಗು, ಇತ್ಯಾದಿ ಎಲ್ಲವೂ ಮೊಬೈ ಲಿಗೆ ಬದಲಾಯಿಸಲ್ಪಟ್ಟಿದೆ. ಅಂತೂ ಎದ್ದಾಕ್ಷಣ ತೋಟದ ಸುತ್ತಸುತ್ತಿ ಮಾವಿನೆಲೆಯಿಂದ ಅಥವಾ ಕಹಿಬೇವಿನ ಕಡ್ಡಿಯಿಂದ ಹಲ್ಲುಜ್ಜಿ ನೈಸರ್ಗಿ ಕವಾಗಿ ಮುಖಮಾರ್ಜನಗೊಳಿಸಿಕೊಳ್ಳುತ್ತಿದ್ದ ಅಂದಿನ ಕಾಲಕ್ಕೂ ,ಎದ್ದಾಕ್ಷಣ ರಾಸಾಯನಿಕ ಯುಕ್ತಪೇಸ್ಟ್ ಹಚ್ಚಿಕೊಂಡು ಮನೆ ಇಡೀ ತಿರುಗಾಡಿ ಎಲ್ಲಾ ಕಡೆ ಎಂಜಲನ್ನು ರಟ್ಟಿಸುವ/ಹಾರಿಸುವ ಈ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಇರಲಿ ಅಂತೂ ಮುಖವೇ ನೋತೊಳೆಯಲ್ಪಟ್ಟಿತು. ತರುವಾಯ ದೇವರ ಸ್ತುತಿಯೊಂದಿಗೆ ದೇವಾಲಯಕ್ಕೋ, ಅಶ್ವತ್ಥ ಮರಕ್ಕೋ, ತುಳಸಿ ಗಿಡಕ್ಕೋ ಪ್ರದಕ್ಷಿಣೆ ಬಂದು ಅವುಗಳ ತಾಜಾ ತಾಜಾ ಆಮ್ಲಜನಕದಿಂದ ದೀರ್ಘ ಶ್ವಾಸೋಚ್ಛ್ವಾಸ ಪ್ರಕ್ರಿಯೆಯಿಂದ ನವೋಲ್ಲಾಸ ಪಡೆದು ತಂಗಳ ಅನ್ನಕ್ಕೆ ಮೊಸರಿಕ್ಕಿ , ಮೃಷ್ಟಾಣ್ಣ ಉಣ್ಣುತ್ತಿದ್ದು ಅಥವಾ ಬಿಸಿಬಿಸಿ ಗಂಜಿಗೆ ತುಪ್ಪ ಇಕ್ಕಿ ಪಚ ಪಚನೆ ಸುರಿಯುತ್ತಿದ್ದ ಆ ದಿನಗಳಿಗೂ, ರಾಸಾಯನಿಕ ಹಾಕಿ ಬೆಳೆಸಿದ ವಸ್ತುಗಳಿಂದ ಮಾಡಿದ ವಿವಿಧ ತಿಂಡಿ-ಪಾನಿಯಗಳ ಇಂದಿನ ದಿನಗಳಿಗೂ ಎಷ್ಟೊಂದು ಬದಲಾವಣೆಯಾಗಿದೆ.
ಮನೆಯಲ್ಲಿ ತಿಂದರೆ ಸ್ವಲ್ಪವಾದರೂ ರಾಸಾಯನಿಕಗಳ ಪ್ರಮಾಣ ತಗ್ಗಬಹುದೇನೋ ಆದರೆ ಅದೂ ಸಾಧ್ಯವಿರದೆ ಕಚೇರಿಗೆ ಹೋಗುವ ದಾರಿಯಲ್ಲೇ ಎಲ್ಲೋ ಒಂದೆಡೆ ರಸ್ತೆ ಬದಿಯ ಹೋಟೆಲ್ಲಿಗೆ ಧಾಳಿ ಇಟ್ಟು ಬೆಳೆದಾಗ ಹಾಕಲಾಗುವ ರಾಸಾಯನಿಕಗಳಿಗೆ ಮತ್ತಷ್ಟು ಹೆಚ್ಚುವರಿ ರಾಸಾಯನಿಕಗಳಾದ ಟೇಸ್ಟ್ ಮೇಕರ್, ಕಲರ್ ಮೇಕರ್ ಇತ್ಯಾದಿಗಳೆಲ್ಲವನ್ನು ಹಾಕಿ ಎರಡು ಪಟ್ಟು ರುಚಿಕರವಾಗುವಂತೆ ಮತ್ತು ತಿಂಗಳಾನುಗಟ್ಟಲೆ ಬದಲಾಯಿಸದೆ ಇರುವ ಎಣ್ಣೆಯಲ್ಲಿ ಮಾಡಿದ ತಿಂಡಿ ಇತ್ಯಾದಿಗಳು ಬಾಯಲ್ಲಿ ನೀರೂರಿಸುವಂತೆ ಮಾಡಿದರು ಸಹ ಜೀವಕ್ಕೆ ಭಯ ಹುಟ್ಟಿಸುವ ಮಟ್ಟಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ. ಬದುಕು ಪರಾವಲಂಬಿಯಾದಷ್ಟೂ ಜೀವವು ಕೂಡ ಆಸ್ಪತ್ರೆಯ ಪಾಲಾಗುವ ಅಪಾಯವಿದೆ. ಇದು ಕೇವಲ ಬೆಳಗ್ಗಿನ ಉಪಹಾರಕ್ಕೆ ಮಾತ್ರ ಸೀಮಿತವಲ್ಲ. ಇಡೀ ದಿನ ಮನೆಯಲ್ಲಿ ತಿಂಡಿ-ತೀರ್ಥ -ಊಟ ಮಾಡದೆ ಅಥವಾ ಮನೆಯ ಬುತ್ತಿಯನ್ನು ಕೊಂಡು ಹೋಗದೆ ಹೊರಗಡೆಯೇ ಎಲ್ಲವನ್ನು ಪೂರೈ ಸುವವರಿಗೆ ಆರೋಗ್ಯದ ಸಮಸ್ಯೆ ಕೆಲವೇ ವರ್ಷಗಳಲ್ಲಿ ಪ್ರಾರಂಭವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇಂದು ನಾವು ಮಾರು ದೂರದ ಅಂಗಡಿಗಳಿಗೂ ಸಹ ವಾಹನ ಇಲ್ಲದೆ ಚಲಿಸಲಾಗದ ಪರಿಸ್ಥಿತಿಗೆ ಬಂದಿದ್ದೇವೆ. ಕನಿಷ್ಠ ಪಕ್ಷ ಅರ್ಧ ಕಿಲೋ ಮೀಟರ್ ಕೂಡ ನಡೆದಾಡುವ ತಾಕತ್ತು ಇಂದಿನವರಲ್ಲಿ ಇಲ್ಲವಾಗಿದೆ. ಉಪಯೋಗಿಸುವ ಎಲ್ಲ ವಾಹನಗಳಿಂದ ಹೊರ ಸೂಸುವ ರಾಸಾಯನಿಕ ಯುಕ್ತ ಕ್ಯಾನ್ಸರ್ ಕಾರಕ ಹೊಗೆಯಿಂದಾಗಿ ನಾವು ಸೇವಿಸುವ ಶುದ್ಧಗಾಳಿ ಮಲಿನಯುಕ್ತವಾಗಿ ಪರಿಣಮಿಸಿದೆ. ಒಂದೆರಡು ಕಿಲೋ ಮೀಟರ್ ದೂರಕ್ಕೆ ಅರ್ಧ ಗಂಟೆ ಮೊದಲಾಗಿ ಹೊರಟಲ್ಲಿ ದೇಹಕ್ಕೆ ಆಯಾಸವಾದರೂ ಇಡೀ ಶರೀರಕ್ಕೆ ವ್ಯಾ ಯಾಮ ದೊರೆತು ಪರಿಸರದ ವೀಕ್ಷಣೆಯೊಂದಿಗೆ ಮನಸ್ಸು ಉಲ್ಲಾಸದಿಂದ ಹಾಗೂ ದಾರಿಯಲ್ಲಿ ಸಿಗುವವರ ನಗು ಪರಿಚಯ ಎಲ್ಲವೂ ಸಾಧ್ಯವಾಗಲಿದೆ. ದೂರದ ಪ್ರದೇಶಗಳಿಗೆ ಹೋಗುವಾಗ ಕೂಡ ಸಾಧ್ಯವಾದಷ್ಟು ಏರ್ ಕಂಡೀಶನ್ ಉಪಯೋಗ ಮಾಡದೆಯೇ ಇರುವುದು ಆರೋಗ್ಯಕ್ಕೆ ಉತ್ತಮ. ಏರ್ ಕಂಡೀಷನರ್ ಗಳ ಬಳಕೆಯಿಂದ ಅದು ಹೊರ ಸೂಸುವ ತಾಪಮಾನ, ಬಿಡುವ ವಿಷಯುಕ್ತ ಗಾಳಿ ಭೂಮಿಯ ತಾಪಮಾನ ಏರಿಕೆಗೆ ಹಾಗು ಓಜೋನ್ ಪದರದ ನಾಶಕ್ಕೆ ಕಾರಣವಾಗುತ್ತಿದೆ. ಆದುದರಿಂದ ಸಾಧ್ಯವಾದಷ್ಟು ಮಟ್ಟಿಗೆ ವಾಹನ, ಮನೆ, ಕಚೇರಿ ಎಲ್ಲ ಕಡೆ ಏರ್ ಕಂಡೀಷನರ್ ಬಳಕೆಯನ್ನು ವರ್ಜಿಸಬೇಕಾಗಿದೆ.
ಪರಿಸರದ ಗಿಡಮರಗಳನ್ನು ರಕ್ಷಿಸಿ : ಪರಿಸರ, ಪ್ರಕೃತಿ ಎಂದ ಕ್ಷಣ ನಮಗೆ ತಟ್ಟನೆ ನೆನಪಾಗುವುದು ಗಿಡ ಮರಗಳು. ಏಕೆಂದರೆ ಗಿಡ ಮರಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಂಡು ನಮಗೆ ಶುದ್ಧವಾದ ಆಮ್ಲಜನಕವನ್ನು ನೀಡುತ್ತವೆ. ಆದುದರಿಂದ ಅಂತಹ ಗಿಡ ಮರಗಳನ್ನು ಉಳಿಸುವುದಕ್ಕಾಗಿ ಸಾಧ್ಯವಾದಷ್ಟು ಮರರಹಿತವಾದ ಪೀಠೋಪಕರಣಗಳನ್ನೇ ಉಪಯೋಗಿಸಬೇಕು. ರಿಸೈಕಲ್ ಮಾಡಿ ತಯಾರಿಸಿದ ಪೀಠೋಪಕರಣಗಳನ್ನೇ ಬಳಸುವುದರಿಂದ ಪರಿಸರ ವಿನಾಶವು ಕಡಿಮೆಯಾಗಲು ಕೊಡುಗೆ ನೀಡಿದಂತಾಗುತ್ತದೆ. ಅನಗತ್ಯವಾಗಿ ಬಳಸಿ ಬಿಸಾಡುವ ಪ್ಲೇಟು-ತಟ್ಟೆಗಳ ಬದಲಿಗೆ ಸ್ಟೀಲ್ ಲೋಟ-ತಟ್ಟೆಗಳನ್ನೇ ಉಪಯೋಗಿಸಿ ಮತ್ತೆ ತೊಳೆದು ಪುನರ್ಪಿಬಳಸುವುದರಿಂದ ಅಷ್ಟರಮಟ್ಟಿಗೆ ತ್ಯಾಜ್ಯ ಹಾಗೂ ಮರಗಳ ನಾಶವನ್ನು ಕಡಿಮೆ ಮಾಡಬಹುದಾಗಿದೆ.
ಇಂದು ಪ್ರತಿಯೊಂದು ನಗರ ಪ್ರದೇಶಗಳಲ್ಲಿ ಉಪಯೋಗಿಸಿ ಬಿಸಾಡಿದ ಕಾಗದ, ಪ್ಲಾಸ್ಟಿಕ್ ಇತ್ಯಾದಿಗಳ ಪ್ರಮಾಣವೇ ಸಾವಿರಗಟ್ಟಲೆ ಟನ್ ಗಳಷ್ಟಿದೆ. ಅಂತಹ ಎಲ್ಲ ಪ್ಲೇಟು-ತಟ್ಟೆ-ತ್ಯಾಜ್ಯಗಳನ್ನು ಅನಗತ್ಯ ಎಸೆದು ಮಾಲಿನ್ಯ ಉಂಟುಮಾಡುವ ಬದಲು ಸ್ಟೀಲ್ನ ಉಪಕರಣಗಳನ್ನು ಉಪಯೋಗಿಸುವುದರಿಂದ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದ ಮಾಲಿನ್ಯವನ್ನು ತಡೆಯಬಹುದಾಗಿರುತ್ತದೆ.
ಕಾಗದ ಬಳಕೆ ನಿಲ್ಲಿಸಿ, ಅಂತರ್ಜಲ ಹೆಚ್ಚಿಸಿ : ಪ್ರಿಂಟ್, ಜೆರಾಕ್ಸ್ , ಕಾಗದ ಇತ್ಯಾದಿಗಳ ಬದಲು ಆನ್ಲೈನ್, ವಾಟ್ಸಾಪ್, ಇ-ಮೇಲ್ ಗಳಲ್ಲಿಯೇ ವ್ಯವಹಾರ ಮಾಡುವುದರಿಂದ ಮತ್ತಷ್ಟು ಹೆಚ್ಚು ಮರಗಳ ನಾಶವನ್ನು ತಡೆಯಬಹುದಾಗಿದೆ. ಮಾತ್ರವಲ್ಲ ವಿದ್ಯು ತ್ ಉಳಿತಾಯದ ತಂತ್ರಾಂಶವನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯು ತ್ ಉಳಿತಾಯವನ್ನು ಮಾಡಬಹುದಾಗಿರುತ್ತದೆ. ಮಳೆ ಬಿದ್ದಾಗಲೆಲ್ಲ ಮಳೆ ನೀರನ್ನು ಹಿಡಿದಿಟ್ಟು ಚೆಕ್ ಡ್ಯಾ ನ್ಗಳ ಮೂಲಕ ಸಂಗ್ರಹಿಸಿದರೆ ಅಂತರ್ಜಲ ಹೆಚ್ಚಿಸುವ ಪ್ರಯತ್ನಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಮಾತ್ರವಲ್ಲ ಮಳೆ ನೀರು, ಕೊಯ್ಲು ಮಾಡುವ ಮೂಲಕವೂ ಅಂತರ್ಜಲ ಹೆಚ್ಚಿಸಲು ಉಪಕಾರ ಮಾಡಿದಂತಾಗುತ್ತದೆ. ಏಕೆಂದರೆ ನೀರು ಅಮೃತಕ್ಕೆ ಸಮಾನ. ನೀರನ್ನು ಮಿತವಾಗಿ, ಹಾಳಾಗದಂತೆ, ವ್ಯರ್ಥವಾಗದಂತೆ, ಸೋರಿಕೆಯಾಗದಂತೆ ಬಳಸುವುದರಿಂದ ಬೇಸಿಗೆಯ ತಾಪಮಾನವನ್ನು ಕಡಿಮೆಗೊಳಿಸಲು ಸಾಧ್ಯವಿದೆ.
ಮನೆಯ ಪ್ರತಿಯೊಂದು ಕೆಲಸದ ಸಂದರ್ಭದಲ್ಲಿ ವಿನಾಕಾರಣ ಪೈಪನಿಂದ ನೀರು ಹಾರಿಸುವ ಬದಲು ಬಕೆಟ್ ನಲ್ಲಿ ಹಿಡಿದು ಉಪಯೋಗಿಸುವುದರಿಂದ ಮತ್ತು ಅಗತ್ಯ ಇದ್ದಾಗ ಮಾತ್ರ ವಿದ್ಯುತ್ ಉಪಯೋಗಿಸುವುದರಿಂದ ಹಾಗೂ ಸೋಲಾರ್ ಚಾಲಿತ ಉಪಕರಣಗಳ ಉಪಯೋಗದಿಂದ ಸಾಕಷ್ಟು ವಿದ್ಯುತ್ ಉಳಿತಾಯ ಸಾಧ್ಯವಿದೆ. ಮನೆಯಲ್ಲಿ ಕೈ ತೋಟ ಮಾಡುವುದರಿಂದ, ಪ್ಲಾಸ್ಟಿಕ್ ತೊಟ್ಟೆಗಳಿಗೆ ಬದಲು ನಿಮ್ಮದೇ ಕೈ ಚೀಲ ಕೊಂಡು ಹೋಗುವುದರಿಂದ, ಕುಕ್ಕರಿಗೆ ನೀರು ಹಾಕಿ ಬೇಯಿಸುವುದರಿಂದ ಗ್ಯಾ ಸ್ ಉಳಿತಾಯ ಸಾಧ್ಯವಿದೆ. ವಾಷಿಂಗ್ ಮೆಷಿನ್ ಗೆ ಸ್ವಲ್ಪ ಸ್ವಲ್ಪ ಬಟ್ಟೆಗಳ ಬದಲು ಪೂರ್ತಿ ಲೋಡು ಬಟ್ಟೆ ಹಾಕುವುದರಿಂದಲೂ ನೀರನ್ನು ಉಳಿತಾಯ ಮಾಡಬಹುದಾಗಿರುತ್ತದೆ. ಅತಿ ಹೋಗಿ ಉಗುಳುವ ವಾಹನಗಳನ್ನು ನಿಲ್ಲಿಸುವುದರಿಂದಲೂ ವಾಯು-ಶಬ್ ಮಾಲಿನ್ಯವನ್ನು ತಡೆಗಟ್ಟಬಹುದಾಗಿರುತ್ತದೆ.
ಇಂದಿನ ದಿನಗಳಲ್ಲಿ ಕಂಡ ಕಂಡಲ್ಲಿ ಪೆಡಂಭೂತದಂತೆ ಕಣ್ಣಿಗೆ ರಾಜ್ಯತ್ತಿರುವುದು ಪ್ಲಾಸ್ಟಿಕ್ ತ್ಯಾಜ್ಯ. ತೆಳು ಪ್ಲಾಸ್ಟಿಕ್ ನಕೈ ಚೀಲ, ಬಿತ್ತಿ ಪತ್ರ, ತೋರಣ, ಫ್ಲೆಕ್ಸ್ , ಬಾವುಟ, ತಟ್ಟೆ, ಲೋಟ, ಚಮಚ, ಫಿಲಂ, ಹಾಳೆ, ಥರ್ಮಾಕೋಲ್ ಇತ್ಯಾದಿಗಳೆಲ್ಲದರ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕಾಗಿದೆ. ಅಂತಹ ಎಲ್ಲಾ ವಸ್ತುಗಳ ರಚನೆ ಅಥವಾ ತಯಾರಿಕೆಯನ್ನೇ ನಿಲ್ಲಿಸಿದರೆ ಎಲ್ಲೆಂದರಲ್ಲಿ ಅಂತಹ ವಸ್ತುಗಳನ್ನು ಎಸೆಯುವುದನ್ನು ಕೂಡ ನಿಯಂತ್ರಿಸಬಹುದಾಗಿರುತ್ತದೆ. ಕೇವಲ ಇವುಗಳ ತಯಾರಿಕೆಯನ್ನೇ ನಿಲ್ಲಿಸಿದಲ್ಲಿ ಅರ್ಧ ಕರ್ಧ ಪರಿಸರ ಮಾಲಿನ್ಯವನ್ನು ತಡೆದು ನೆಲ, ಜಲ, ವಾಯು, ಆಕಾಶಗಳೆಲ್ಲವೂ ಸಾಕಷ್ಟು ಶುದ್ಧೀಕರಣಗೊಳ್ಳಲು ಸಾಧ್ಯವಿದೆ. ಆದರೆ ಎಲ್ಲ ಸರಕಾರಗಳು ಅದಕ್ಕಾಗಿ ಮನ ಮಾಡಬೇಕಾಗಿದೆ. ಕೇವಲ ಒಂದು ಸರಕಾರ, ಒಂದು ಸ್ವ ಸರಕಾರ, ಒಂದು ಪಂಚಾಯತ್ ಮಾತ್ರವಲ್ಲ ಇಡೀ ದೇಶದ ಎಲ್ಲ ರೀತಿಯ ಸರಕಾರ ಮತ್ತು ಆಡಳಿತಗಳು ಈ ಕ್ರಮಕ್ಕೆ ಬದ್ಧತೆಯನ್ನು ತೋರಿಸಿದಲ್ಲಿ ಮಹತ್ವದ ಈ ಕಾರ್ಯ ಯಶಸ್ವಿಯಾಗಲು ಸಾಧ್ಯವಿದೆ.
ಪರಿಸರ ದಿನ ವಾರ್ಷಿಕ ಉತ್ಸವವಾಗಲಿ : 1974ರ ಜೂನ್ 5 ಅನ್ನು ವಿಶ್ವ ಸಂಸ್ಥೆ ವಿಶ್ವ ಪರಿಸರ ದಿನ ಎಂದು ಆಚರಿಸಿ ಪರಿಸರ ಉಳಿಸುವ ಮಾರ್ಗೋಪಾಯಗಳನ್ನು ಸೂಚಿಸಿದ್ದರು ಕೂಡ ಅವ್ಯಾಹತವಾಗಿ ಗಿಡ ಮರ ನಾಶ, ತ್ಯಾಜ್ಯ ಮಾಲಿನ್ಯದ ಕ್ವಿಂಟಲ್ಗಟ್ಟಲೆ ಏರಿಕೆ, ಗಣಿಗಾರಿಕೆ ಕಲ್ಲಿದ್ದಲು ಬಳಕೆ ಇತ್ಯಾದಿಗಳಿಂದಾಗಿ ಭೂಮಿಯ ತಾಪಮಾನ ಶೇಕಡ 0.4 ರಿಂದ ಶೇಕಡ 1.8ಕ್ಕೆ ಏರಿಕೆಯಾಗಿದೆ. ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯ, ವಿಷಕಾರಿ ರಾಸಾಯನಿಕ ಕ್ರಿಮಿಕೀಟ ನಾಶಕಗಳು ಪಂಚಭೂತಗಳಾದ ನೀರು, ಗಾಳಿ, ಮಣ್ಣು, ಆಕಾಶ ಇತ್ಯಾದಿಯಲ್ಲಿ ವ್ಯಾಪಿಸಿ ದಿನಕ್ಕೊಂದು ಹೆಸರಿನ ಗುಣಪಡಿಸಲು ಆಗದೆ ಇರುವ ಕಾಯಿಲೆಗಳು,
ಅನಾರೋಗಿ ಮಕ್ಕಳುಗಳ ಸಂಖ್ಯೆ ಹೆಚ್ಚುತ್ತಿದೆ. ತಾಪಮಾನ ಏರಿಕೆಯಿಂದ ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟವು ಏರುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ ಹಸಿರನ್ನು ಉಳಿಸುವುದಕ್ಕಾಗಿ ನಗರಗಳಲ್ಲಿ ಕೆರೆಗಳನ್ನು ನುಂಗಿ ಅಕ್ರಮವಾಗಿ ನಿರ್ಮಿಸಿದ, ನಿರ್ಮಿಸುತ್ತಿರುವ, ನಿರ್ಮಿಸಲು ಉದ್ದೇಶಿಸಿರುವ ಬಹು ಮಹಡಿ ಕಟ್ಟಡ, ವಾಣಿಜ್ಯೋದ್ಯಮ ಕಟ್ಟಡಗಳನ್ನು ನಿವಾರಿಸಬೇಕಿದೆ.
ಕೋಟಿಗಟ್ಟಲೆ ವ್ರಥಾ ಖರ್ಚು ಮಾಡಿ ಕಾಡೆಲ್ಲವನ್ನು ನಾಶಗೊಳಿಸಿ ನಿರ್ಮಿಸಲು ಹೊರಟಿರುವ ಅಣೆಕಟ್ಟುಗಳೆಲ್ಲದರ ನಿರ್ಮಾಣವನ್ನು ಕೈ ಬಿಡಬೇಕಾಗಿದೆ. ಹೊಸ ಅಣೆಕಟ್ಟುಗಳಿಗೆ ಬದಲು ಇರುವ ಅಣೆಕಟ್ಟುಗಳ ಆಳವನ್ನು ಹೆಚ್ಚಿಸಿದಲ್ಲಿ ಗಿಡಮರ ನಾಶವನ್ನು ತಡೆಯಬಹುದಾಗಿದೆ. ಪರ್ಯಾಯ ಇಂಧನ ಮೂಲಗಳಾದ ಗಾಳಿ ಹಾಗೂ ಸೂರ್ಯನ ಶಾಖವನ್ನು ಉಪಯೋಗಿಸಿ ಕಾರ್ಖಾನೆ ಗಳನ್ನು ನಡೆಸಬಹುದಾಗಿದೆ. ತ್ಯಾಜ್ಯ, ಮಾಲಿನ್ಯಗಳೆಲ್ಲವನ್ನು ನಿಯಂತ್ರಿಸಿ ಅವುಗಳ ಸಮರ್ಪಕ ನಿರ್ವ ಹಣೆಯನ್ನು ಕೈಗೊಳ್ಳಬೇಕಾಗಿದೆ. ಇಂತಹ ಅಭಿವೃದ್ಧಿಪರ, ಪರಿಸರ ರಕ್ಷಣಾ, ಗಿಡಮರ ಸಂರಕ್ಷಣೆಯನ್ನು ಬದ್ಧತೆ, ಪ್ರಾಮಾಣಿಕತೆಯಿಂದ ಜಾರಿಗೊಳಿಸಿದಲ್ಲಿ ಮಾತ್ರ ಉಳಿದಿರುವ ಪರಿಸರವನ್ನು ಕಾಪಿಡಬಹುದಾಗಿದೆ. ವೈಯಕ್ತಿಕ, ಪಕ್ಷವಾರು ಅಭಿಪ್ರಾಯಕ್ಕೆ ಬದಲಾಗಿ ಪರಿಸರ ರಕ್ಷಕರ ಒಪ್ಪಿಗೆ ಪಡೆದೇ ಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ಆಗಬೇಕು.
ಕೃಷಿ ಬದುಕನ್ನು ಕೈಗೊಂಡು ಬೆಳೆಯಿರಿ : ಪರಿಸರ, ಕೃಷಿ ಇತ್ಯಾದಿಗಳು ಇಂದಿನ ದಿನಗಳಲ್ಲಿ ಅತ್ಯಂತ ಪ್ರಾಮುಖ್ಯದ ಸಂಗತಿಗಳಾಗಿದ್ದರು ಕೂಡ, ಬಹಳಷ್ಟು ಗ್ರಾಮೀಣ ಮಂದಿ ಕೃಷಿ ಇತ್ಯಾದಿಗಳನ್ನು ಮಾಡಲು ಸಾಕಷ್ಟು ಸ್ಥಳಾವಕಾಶಗಳಿದ್ದರೂ ಕೂಡ, ಅವೆಲ್ಲವನ್ನು ಬಿಟ್ಟು ಅಥವಾ ತೊರೆದು ಪಟ್ಟಣಕ್ಕೆ ಬಂದು ನಾಲ್ಕಾರು ಕಾಸಿಗೆ ದುಡಿದು ಬದುಕುತ್ತಿದ್ದಾರೆ. ಆದರೆ ಅವರ ಗದ್ದೆ, ಬಯಲು ಇತ್ಯಾದಿಗಳು ಉಳುಮೆ ಮಾಡದೆ ಹಡಿಲು ಬಿದ್ದು ಖಾಲಿಯಾಗಿವೆ. ಒಂದು ವೇಳೆ ಬೆಳೆಯನ್ನು ಬೆಳೆದಿದ್ದಲ್ಲಿ ಪರಿಸರವು ರಕ್ಷಿಸಲ್ಪಡುತ್ತಿತ್ತು, ಹಳ್ಳಿಯೂ ಉದ್ಧಾರವಾಗಿ ಸಾಕಷ್ಟು ವೈಯಕ್ತಿಕ ಅಭಿವೃದ್ಧಿಯು ಸಾಧ್ಯವಾಗುತ್ತಿತ್ತು. ಆದರೆ ಹಳ್ಳಿಯನ್ನು ಬಿಟ್ಟು, ನಗರಕ್ಕೆ ವಲಸೆ ಬಂದ ಕಾರಣ ಹೆಚ್ಚಿನವರು ಕೊಳಗೇರಿವಾಸಿಗಳಾಗಿದ್ದಾರೆ. ಆದ್ದರಿಂದ ಹಳ್ಳಿ, ಗ್ರಾಮವಾಸಿಗಳು ಇರುವ ಸ್ಥಳಾವಕಾಶವನ್ನು ಬಳಸಿ ಬೆಳೆಯಲು ಪ್ರಯತ್ನಿಸುವುದು ಅತ್ಯಂತ ಶ್ರೇಯಸ್ಕರ. ರೈತರು/ನಗರವಾಸಿಗಳು ತಮ್ಮಲ್ಲಿರುವ ಕಳೆ, ಕಸ, ಕೊಳಕು, ಕಶ್ಮಲಗಳನ್ನು ಸುಡುವುದಕ್ಕೆ ಬದಲು ಪುನರ್ಬಳಕೆಯ ಸಂಸ್ಥೆಗಳಿಗೆ ನೀಡುವುದರಿಂದ ವಾಯುಮಾಲಿನ್ಯವನ್ನು ತಡೆಗಟ್ಟಬಹುದಾಗಿರುತ್ತದೆ. ಕಸ, ಕಳೆಗಳಿಗೆ ಬೆಂಕಿ ಹಚ್ಚುವುದರಿಂದ ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಿ ಉಸಿರಾಟಕ್ಕೆ ತೊಂದರೆ ದಾಖಲಾಗುತ್ತದೆ. ಒಬ್ಬರ ಚಲನವಲನಕ್ಕೂ ನಾಲ್ಕು ಚಕ್ರದ ವಾಹನದ ಉಪಯೋಗಕ್ಕೆ ಬದಲು ಸಾರ್ವಜನಿಕ ವಾಹನವನ್ನು ಬಳಸಿದರೆ ಅಷ್ಟರಮಟ್ಟಿನ ಮಲಿನತೆಯನ್ನು ಕಡಿಮೆಗೊಳಿಸಿದಂತೆ ಆಗುತ್ತದೆ. ಏಕೆಂದರೆ ಕೇವಲ ಒಬ್ಬರಿಗಾಗಿ ಸಾಕಷ್ಟು ಇಂಧನ ಬಳಕೆ ನಡೆದು ವಿಷಕಾರಿ ಹೊಗೆ ವಾತಾವರಣಕ್ಕೆ ಸೇರುವುದು ಸಾರ್ವಜನಿಕ ವಾಹನದ ಬಳಕೆಯಿಂದ ಕಡಿಮೆಗೊಳ್ಳುತ್ತದೆ.
ಪ್ಲಾಸ್ಟಿಕ್ ಅನ್ನು ವರ್ಜಿಸಿ, ಸ್ವಚ್ಛಭಾರತ ಗೊಳಿಸಿ : ಪ್ರಕೃತಿಯ ಶ್ರೇಷ್ಠತೆಯನ್ನು ಆರಾಧಿಸುವ ರೈತ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ನ ವಿರುದ್ಧವು ಭಗವಂತನಲ್ಲಿ ಮೊರೆ ಇಡುತ್ತಿದ್ದಾನೆ. ಕಂಡ ಕಂಡಲ್ಲಿ ಗುಟ್ಕಾ , ಲೇಸ್, ಕುರ್ಕುರೆ ಇತ್ಯಾ ದಿಗಳನ್ನು ತಿಂದು ಬಿಸಾಡುವ ಅದರ ಹೊರ ಕವಚದಿಂದಾಗಿ ಮತ್ತು ಎಲ್ಲೆಲ್ಲಿಂದಲೋ ತಂದು ರಸ್ತೆ ಬದಿಗಳಲ್ಲಿ ಎಸೆದು ಹೋಗುವ ತ್ಯಾಜ್ಯದಿಂದಾಗಿ "ಸ್ವಚ್ಛ ಭಾರತ ಅಭಿಯಾನ" ಹಳ್ಳ ಹಿಡಿದಿದೆ. ಸ್ವಯಂ ಸೇವಾ ಸಂಸ್ಥೆಗಳು, ಗ್ರಾಮೀಣ ಸರ್ಕಾರಗಳು ಎಷ್ಟೇ ಸ್ವಚ್ಛತಾ ಕಾರ್ಯಗಳನ್ನು ಕೈ ಗೊಂಡರು ಅನಾಗರಿಕರಂತೆ ವರ್ತಿಸುವ, ಕಣ್ಣಿದ್ದು ಕುರುಡರಂತೆ, ತಿಳಿದಿದ್ದು ಮೂಢರಂತೆ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವ-ತಮ್ಮನ್ನು ತಾವೇ ವಿದ್ಯಾವಂತರು, ನಾಗರಿಕರು ಎಂದು ಕರೆಸಿಕೊಳ್ಳುವವರನ್ನು ನೋಡಿಯೂ ರೈತರು,
ಪರಿಸರ ಆಸಕ್ತರು ಕಣ್ಣೀರಿಡುತ್ತಿದ್ದಾರೆ. ನೀರು ನಿಲ್ಲುವ ಪ್ರದೇಶಗಳನ್ನು ಅಕ್ರಮ ಕಟ್ಟಡ ಕಟ್ಟಿ, ನುಂಗಿ ನೀರು ಕುಡಿದ ಹಾಗೂ ಇತರ ಪ್ರದೇಶಗಳನ್ನು ನೀರಲ್ಲಿ ತೇಲುವಂತೆ ಮಾಡಿದ ಮಂದಿಗಾಗಿಯೂ ನಗರ ಪ್ರದೇಶದ ಮಂದಿ ಕಣ್ಣೀರಿಡುತ್ತಿದ್ದಾರೆ.
ಅಕ್ರಮಗಳನ್ನು ಬಿಟ್ಟು ಭವಿಷ್ಯಕ್ಕಾಗಿ ಬದುಕಿ : ಹಣಕ್ಕಾಗಿ ನಡೆಯುತ್ತಿರುವ ಎಲ್ಲಾ ಅಕ್ರಮಗಳು ಮನುಷ್ಯನ ಪರಿಸರವನ್ನು ಹಾಳು ಮಾಡಿ ಪ್ರಕೃತಿ ವಿಕೃತಿಗೊಳ್ಳುತ್ತಿರುವುದಕ್ಕೆ , ಪರಿಸರ ವಿನಾಶಗೊಳ್ಳುತ್ತಿರುವುದಕ್ಕೆ ಪ್ರಥಮತಃ ನಾವು ಬದಲಾಗಿ, ಹತ್ತಿರದವರನ್ನು ಬದಲಾಯಿಸಿ, ಸಮಾಜವನ್ನು ತಿದ್ದುವ ಕಾರ್ಯ ಮಾಡಬೇಕಾಗಿದೆ. ಪಕ್ಷ, ಜಾತಿಗಳ ಮೇಲಾಟಕ್ಕೆ ಬದಲು ಮುಂದಿನ ತಲೆಮಾರಿಗಾಗಿ ಮಾನವೀಯ ಅಂತಃಕರಣ ಪ್ರತಿಯೊಬ್ಬರಲ್ಲೂ ಮಿಡಿಯಬೇಕಾಗಿದೆ. ಇದು ಎಲ್ಲರಲ್ಲೂ ಸಾಕಾರಗೊಂಡು ಬದ್ಧತೆಯಿಂದ ಬೆಳೆದು ಎಲ್ಲ ರೀತಿಯ ಅನೀತಿ, ಅಕ್ರಮಗಳಿಗೆ ತಿಲಾಂಜಲಿ ಇಟ್ಟಲ್ಲಿ ಮಾತ್ರ ಸರಕಾರದ ಎಲ್ಲ ರೀತಿಯ ಅಭಿಯಾನಗಳು, ಜನರ ಆಂದೋಲನಗಳು, ಯಶಸ್ವಿಯಾಗಲು ಸಾಧ್ಯವಿದೆ. ಅಂತಹ ದಿನಗಳಿಗಾಗಿ ಎದುರು ನೋಡುತ್ತಾ "ಸರ್ವೇ ಜನಾಃ ಸುಖಿನೋಭವಂತು."
ಲೇಖನ: ರಾಯಿ ರಾಜಕುಮಾರ್ ಮೂಡುಬಿದಿರೆ.