ಚಲುವನೇ ತುಸು ಆಲಿಸು ನೀ ನಿಂತು... 

ಈ ಮನದ ಪಡಿಪಾಟಲುಗಳ..! 

ನನ್ನ ಕೈ ಬೆರಳೀಗ ಹಿಡಿದ ಲೇಖನಿಯ ಮರೆತಾಯ್ತು

ನಿನ್ನ  ನೊಸಲನು ರಮಿಸುತಿಹ ಸುರುಳಿ ಮುಂಗೂದಲಿನ ಸಹವಾಸ ಬಯಸುತ..! 


ಹೃದಯವೇ ಲೇಖನಿಯ ಹಿಡಿದಾಯ್ತು...ಅತಿಶಯದಿ,

ಮೊದಲೊಲವಿನುದಯಕೆ ಪದಗಳ ಹುಡುಕಾಡಿ

ಕವನದ ರಂಗೋಲೆ ಬಿಡಲು ಬಿಳಿಹಾಳೆಯ ಅಂಗಳವ ಅರಸುತ..! 


ಚಿಗುರು ಮೀಸೆಯ ಸೂರಿನಡಿ

ತೇಲಿ ಬಂದ ಬೆಳ್ಳಿ ನಗೆಯ ಕೋಲ್ಮಿಂಚು 

ಮನಸೂರೆಗೊಂಡಿರಲು, 

ತಾರಾಪುಂಜವೇ ಆ ನಿನ್ನ ಜೋಡಿ ನಯನಗಳಲಿ

ನನ್ನದೆಗೆ  ಕನ್ನ ಹಾಕುವ ಸಂಚು ಹೂಡಿ ನಿಂತಿರಲು

ಈ ಸಂತೆ ಬಯಲಲಿ , ಹೃದಯ ಕಳೆದುಕೊಳ್ಳಲು ಬೇರೆನು ಬೇಕಿತ್ತು ಈ ಒಂಟಿ ಬಡಪಾಯಿಗೆ...!? 


ಮೌನ ಹೃದಯದ ಕನವರಿಕೆಯಲ್ಲಿ ಈಗೀಗ

ಬರಿ ನಿನ್ನ ಹೆಸರೇ ಪ್ರೇಮಗೀತೆ... 

ಹೇಳಿ ಹೋಗೀಗ,  ವಿರಹದ ಸೆರೆಮನೆಯ ಖಾಯಂ ಖೈದಿಯಾಗಿಸದೇ ನನ್ನ..!

ಯಾವೂರ ಮಂತ್ರವಾದಿಯ ಮಗನೋ.. ನೀನು..!?ಮಾಡಿರುವ ಜಾದು ಏನು..!? 


ಓ ಒಲವೇ ಕೇಳೀಗ.... 

ಹೃದಯದೊಲವಿನ ಮೊದಲ ಪಿಸುಮಾತುಗಳೆಲ್ಲ

ದನಿಯಾಗದೇ, ಅಧರಗಳಂಚಿನಲಿ ಅಡಗಿ ನಿಂತಿಹವು ತುದಿಗಾಲಿನಲಿ ತೊದಲುತ 

ಲಜ್ಜೆಯ ರಂಗ ಕದಪುಗಳಲಿ ಧರಿಸಿ...! 


ಬಾ ಒಮ್ಮೆ ನೋಡು.... 

ನನ್ನೀ ತೆರೆದ ಕಂಗಳ ಕಿಟಕಿಯಲೊಮ್ಮೆ ಇಣುಕಿ, 

ನನ್ನಂತರಂಗದ ರಹಸ್ಯ ಮಾತುಗಳನೆಲ್ಲಾ

ಆ ಮೂರು ಜಾದೂ ಪದಗಳಲಿ ಪೋಣಿಸಿ

ನೀನೇ ನುಡಿದು ಬಿಡು, 

ನಿದ್ದೆ ಮರೆತ ನಯನಗಳುಪವಾಸಕೊಮ್ಮೆ ತೆರೆಯನೆಳೆದು...!! 

 

ಸುಮತಪಸ್ವಿನಿ. 

ನರಸಿಂಹರಾಜಪುರ

ಚಿಕ್ಕಮಗಳೂರು...