ಕಲ್ಕೂರ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 29ರಂದು ಕದ್ರಿಯ ಮಂಜು ಪ್ರಸಾದದಲ್ಲಿ ಹರಿಪಾದ ಸೇರಿರುವ ಪೇಜಾವರ ಶ್ರೀಗಳ ಸ್ಮರಣಾರ್ಥ ವಿಶ್ವೇಶತೀರ್ಥ ನುಡಿ ನಮನ ಕಾರ್ಯಕ್ರಮವು ನಡೆಯಿತು.
ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ವಿಶ್ವೇಶತೀರ್ಥರು ಜಗ ಮಾರ್ಗದರ್ಶಿ. ಸ್ವಾಮೀಜಿ ಸತ್ತಾಗ ಬಟ್ಟೆ ಕಟ್ಟಿ ಮೌನ ವ್ರತ ಪಾಲಿಸುವುದು ನಮ್ಮ ಕ್ರಮ; ಪೇಜಾವರ ಸ್ವಾಮೀಜಿ ತೀರಿಕೊಂಡ ಕಾಲದಲ್ಲಿ ಕೊರೋನಾ ಕಾರಣದಿಂದ ಇಡೀ ಜಗತ್ತೇ ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿತ್ತು ಎಂದರು.
ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ವಿವೇಕಾನಂದ ಮತ್ತು ವಿಶ್ವೇಶತೀರ್ಥರು ಮಾತ್ರ ಕಾವಿ ಧರಿಸಲು ಅರ್ಹರು ಎಂದು ಚಂಪಾ ಹೇಳಿದ್ದನ್ನು ನೆನಪಿಸಿಕೊಂಡರು. ಹಣ್ಣು ಇರುವ ಮರಕ್ಕೆ ತಾನೆ ಕಲ್ಲು ಹೊಡೆಯುವುದು ಎಂದು ಟೀಕೆ ಬಗೆಗೆ ಸ್ವಾಮೀಜಿ ಹೇಳಿದರು ಎಂದವರು ಹೇಳಿದರು
ಗಣಪತಿ ಆಚಾರ್ಯ ಕದ್ರಿ ನುಡಿ ನಮನದಲ್ಲಿ ವಿಶ್ವೇಶತೀರ್ಥರು ವಿದ್ಯಾರ್ಥಿಗಳಿಗೆ ತುಪ್ಪ ಸರಿಯಾಗಿ ಬಡಿಸಿದೆಯೇ ಎಂದು ನೋಡುವುದರಿಂದ ಹಿಡಿದು ಸಕಲ ವಿಷಯಗಳಲ್ಲೂ ಕಾಳಜಿ ಹೊಂದಿದ್ದರು ಎಂದರು.
ಗಣೇಶ್ ಅಮೀನ್ ಸಂಕಮಾರ್ ತನ್ನ ನುಡಿ ನಮನ ಸಲ್ಲಿಸಿ ಪೇಜಾವರರಲ್ಲಿ ಬುದ್ಧ, ಕ್ರಿಸ್ತ, ಪೈಗಂಬರ್, ರಾಮ, ಕೃಷ್ಣ ಎಲ್ಲ ಇದ್ದರು. ಅವರು ಹಸಿವಿನ ತೇರು ಎಳೆವಲ್ಲಿ ಧರ್ಮ ಇರುವುದೆಂದು ನಂಬಿದವರು ಎಂದು ತಿಳಿಸಿದರು.
ಜಬ್ಬಾರ್ ಸಮೋ ನುಡಿ ನಮನ ಸಲ್ಲಿಸುತ್ತ ಅವರ ಪಿಸುದನಿ ನಮ್ಮ ಬೊಬ್ಬೆಗಿಂತ ಪರಿಣಾಮಕಾರಿ. ಅವರೊಡನೆ ಇದ್ದ ತಮ್ಮ ಒಡನಾಟವನ್ನು ಬಿಡಿಸಿಟ್ಟರು.
ಎಸ್. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.