ಮಂಗಳೂರು: ಕೊರೋನಾದಿಂದ ದೇಶವು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಅದರಲ್ಲಿಯೂ ಕುಲಕಸುಬನ್ನೇ ನೆಚ್ಚಿಕೊಂಡಿರುವ ಸಮುದಾಯಗಳಲ್ಲಿ ಉದ್ಯೋಗಾವಕಾಶ ಇಲ್ಲದೇ ಬದುಕು ತತ್ತರಿಸುತ್ತಿದೆ. ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸಬೇಕು ಎಂದು ಶ್ರೀ ರಾಮಕೃಷ್ಣ ಮಠದಶ್ರೀ ಏಕಾಗಮ್ಯಾನಂದ ಸ್ವಾಮೀಜಿಯವರು ಹೇಳಿದರು.

ವಿಶ್ವಕರ್ಮ ಸಹಕಾರ ಬ್ಯಾಂಕ್‍ನ 45ನೇ ಸ್ಥಾಪನಾ ದಿನಾಚರಣೆಯಂಗವಾಗಿ ಮಂಗಳವಾರ ಆನ್‍ಲೈನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸ್ಥಾಪನಾ ದಿನದ ಮಹತ್ವದ ಬಗ್ಗೆ ಸಂದೇಶವನ್ನು ನೀಡಿ ಮಾತನಾಡಿದರು.

ಹಿರಿಯರು ಕಟ್ಟಿದ ಸಂಸ್ಥೆಯನ್ನು ಬೆಳೆಸಬೇಕು. ಜಾತಿ ವ್ಯವಸ್ಥೆ, ಭಾರತೀಯ ಸಂಸ್ಕøತಿಯ ಜೀವಾಳವಾಗಿದೆ. ಜಾತಿ, ಸಂಘಟನೆಗಳು, ಪರಸ್ಪರ ಒಗ್ಗೂಡಿಸುವ ಕೆಲಸ ಮಾಡುತ್ತದೆಯೇ ಹೊರತು ವಿಘಟಿಸುವುದಿಲ್ಲ. ವಿಶ್ವಕರ್ಮ ಸಮಾಜವು ಕೌಶಲ್ಯವನ್ನು ಹೊಂದಿದ ಸಮಾಜವಾಗಿದ್ದು ಈ ಕೌಶಲ್ಯವನ್ನು ಬೆಳೆಸಲು ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರದ ‘ಸ್ಕಿಲ್ ಇಂಡಿಯಾ’ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಕೌಶಲ್ಯದೊಂದಿಗೆ ವೃತ್ತಿಯಲ್ಲಿ ಹೊಸತನಕ್ಕೆ ತೆರೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಸಂದೇಶ ನೀಡಿದರು.

ಅಧ್ಯಕ್ಷತೆ ವಹಿಸಿದ ಬ್ಯಾಂಕ್‍ನ ಅಧ್ಯಕ್ಷರಾದ ಹರೀಶ್ ಆಚಾರ್ಯ ಮಾತನಾಡಿ ಸುಮಾರು 45 ವರ್ಷಗಳ ಹಿಂದೆ ಚಿನ್ನದ ಕೆಲಸಗಾರರ ಆರ್ಥಿಕ ಶ್ರೇಯೋಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡು ಹುಟ್ಟಿಕೊಂಡ ಈ ಸಂಸ್ಥೆ ಇಂದು ರಾಜ್ಯದ ಪ್ರಮುಖ ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿ ಒಂದಾಗಿ ಮೂಡಿಬಂದಿದೆ. ನಮ್ಮ ಸಂಸ್ಥೆಯ ಸ್ಥಾಪನೆಯ ಘನ ಉದ್ದೇಶವನ್ನು ಅರಿತುಕೊಂಡು ಸದಸ್ಯರ ಸಮಸ್ಯೆಗಳಿಗೆ ಧ್ವನಿಯಾಗಿ ಸ್ಪಂದಿಸಿ, ಅವರ ಸಮಗ್ರ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಮ್ಮಕರ್ತವ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು, ಸದಸ್ಯರು ಹಾಗೂ ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡರು.