ಅಂಗಳದಲ್ಲಿ ನಗುತಿವೆ ನವಜಾತ ಸಸಿಗಳು

ಅವನಿಯ ಮಡಿಲಲಿ ನಸುನಗುತಿವೆ ಮಕ್ಕಳು

ತಲೆಯೆತ್ತಿ  ನೋಡುತಿವೆ ಮೆಲ್ಲನೆ ಗಗನವನು 

ಅಂಗೈ ಚಾಚಿ ಸ್ಪರ್ಶಿಸಲೇ ಆ ಮುಗ್ಧತೆಯನು


ಮುದ್ದು ಮುದ್ದಾಗಿ ಹಸಿರು ಹೊದ್ದು ಕೂತಿವೆ

ಮಳೆಹನಿಗಳಿಂದ ಶೃಂಗರಿಸಿಕೊಂಡು ನಾಚುತಿವೆ

ಮಣ್ಣಲಿ  ಫಳ ಫಳನೆ ಹೊಳೆಯುವ ಹೊನ್ನುಗಳೇ

ಘಮ ಘಮನೇ ಘಮಿಸುವ ಎಳೆ ಎಲೆಗಳೇ


ಇಣುಕಿ ನೋಡುತಿವೆ ರವಿಯ ರಶ್ಮಿಯು ಈ ಸೊಬಗನು

ಮನ ಸೋಲರೇನು ಕಂಡು ಈ ಪ್ರಕೃತಿಯ ಚೆಲುವನು

ವರ್ಣಿಸಲಿ ಹೇಗೆ ನಿಮ್ಮನು ಭುವಿಯ  ಅಕ್ಕರೆಯ ಮಕ್ಕಳೇ

ವೈಭವದಿ ರಾರಾಜಿಸುವ ನಂದನವನದ ಕುಡಿಗಳೇ


ನಾಳೆಯ ಹೆಮ್ಮರವೇ ನಮ್ಮ  ಪ್ರಾಣುವಾಯುವೇ

ಜೀವಿಸು ಗಟ್ಟಿತನದಿ ಚಿರಕಾಲದಿ ಧರಣಿಯ ಶಿಶುವೇ

ನೆಲ ತಬ್ಬಿ ನಿಂತಿವೆ ಹೆಜ್ಜೆ ಇಡದ ಹಾದಿಯಲಿ

ಬೆಳೆದು ಬಿಡು ತುಳಿವ ಜನರ ಮಧ್ಯದಲಿ


ಸಾರ್ಥಕ ನಿನ್ನ ಜನ್ಮ ಭುವಿವೇ ನಿನ್ನ ಜನನಿ

ಕೊನೆಗೆ ಮಡಿವೆ ಅವಳದೆ ಮಡಿಲಿನಲಿ

ಮತ್ತೆ ಚಿಗುರೊಡೆವೆ ಅವಳಲ್ಲಿ,ದಣಿವಿರದೆ

ಸವೆಯುವೆ ಸೇವೆಯಲಿ ಬೆಳೆವೆ ನಿಸ್ವಾರ್ಥದಲಿ

✍ ಅಂಜಲಿ ಶ್ರೀನಿವಾಸ