ಮುಡಿಪು: ಜಗತ್ತು ಇಂದು ಸಂಕಷ್ಟದಲ್ಲಿದೆ. ಸ್ವಾರ್ಥ, ದ್ವೇಷ ಹಾಗೂ ಮದದಿಂದ ಮನುಷ್ಯ ಪ್ರಕೃತಿಯನ್ನು ಶೋಷಣೆ ಮಾಡುತ್ತಾ ನಾಗರಿಕತೆಯ ಹೆಸರಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾನೆ. ಸಜ್ಜನರು, ಬಡವರು, ಮಹಿಳೆಯರು ಆತಂಕಗೊಂಡಿದ್ಧಾರೆ. ಸಾಮಾಜಿಕ ನ್ಯಾಯವನ್ನು ಒದಗಿಸುವ ಬಡವರ ಪರವಾದ ದೇವರು ನಮಗೆ ಬೇಕು. ಕನಕದಾಸರು ರಾಮಧಾನ್ಯ ಚರಿತೆಯಲ್ಲಿ ಚಿತ್ರಿಸಿದ ರಾಮ ಈ ಮಾದರಿಯ ದೇವರು, ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಮತ್ತು ರಾಮಕುಂಜದ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಲಲಿತಕಲಾ ಸಂಘದ ವತಿಯಿಂದ ರಾಮಕುಂಜದಲ್ಲಿ ನಡೆದ ಕನಕ ತತ್ತ್ವ ಚಿಂತನ ಕಾರ್ಯಕ್ರಮದಲ್ಲಿ ಕನಕ ಮತ್ತು ನಾವು ಬದುಕುವ ಕಾಲ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಮಾತನಾಡಿ, ಮಹಾತ್ಮರು ಸಂತರು ಇಡೀ ಸಮಾಜದ ಆಸ್ತಿ.  ಅವರ ಸಂದೇಶಗಳು ಸಾರ್ವಕಾಲಿಕ. ಆದರೆ ಇಂದು ಅವರನ್ನು ಜಾತಿ ಪಂಗಡಗಳ ಪ್ರತಿನಿಧಿಯೆಂಬಂತೆ ಬಿಂಬಿಸುತ್ತಿರುವುದು ಖೇದಕರ ಎಂದರು.

ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಮಾತನಾಡಿ,  ಪರಂಪರೆಯ ಧನಾಂಶವನ್ನು ಒಪ್ಪಿಕೊಳ್ಳುತ್ತಲೇ ಒಳವಿಮರ್ಶೆಯ  ಗುಣವನ್ನು ಹೊಂದಿದಾಗ ಮಾತ್ರ ನಾವು ಮಾನವೀಯರಾಗುತ್ತೇವೆ ಎಂಬುದನ್ನು ಕನಕ ಸಾಹಿತ್ಯ ತೋರಿಸಿಕೊಟ್ಟಿದೆ, ಎಂದರು. ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಸೇಸಪ್ಪ ರೈ ಉಪಸ್ಥಿತರಿದ್ದರು. 

ಕಾಲೇಜಿನ ಲಲಿತ ಕಲಾ ಸಂಘದ ಸಂಯೋಜಕಿ, ಉಪನ್ಯಾಸಕಿ ಸುಜಾತ ಸ್ವಾಗತಿಸಿದರು. ವಿದ್ಯಾರ್ಥಿನಿ ಹರ್ಷಿತ ವಂದಿಸಿದರು. ಕನ್ನಡ ಉಪನ್ಯಾಸಕಿ ಸುರಕ್ಷಿತಾ ಶೆಟ್ಟಿ ನಿರೂಪಿಸಿದರು.  ಬಳಿಕ ನಡೆದ ಕನಕ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ಶಶಿಧರ ರಾವ್ ಗಿರಿವನ, ಶರತ್ ಬಿಳಿನೆಲೆ ಬೆಂಗಳೂರು, ಮಲ್ಲಿಕಾ ರಾವ್ ಕಡಬ ಪ್ರಸನ್ನ ಪುತ್ರಪಾಡಿ, ಶ್ವೇತಶ್ರೀ ಗಿರಿವನ ಹಾಡಿದರು. ಇದೇ ಸಂದರ್ಭದಲ್ಲಿ  ಕಡಬ ತಾಲೂಕಿನ ಆಹ್ವಾನಿತ ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಮತ್ತು ಕೀರ್ತನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.