ಮಂಗಳೂರಿನಲ್ಲಿ ಈಗ ಧಾರಾಳವಾಗಿ ಈರೋಲ್, ತಾಳಿಬೊಂಡ, ತಾಟಿನುಂಗು, ಹಣಿಬೆಂಡ ಇತ್ಯಾದಿ ಹೆಸರುಗಳಿಂದ ತಂಪೀಯುವ ತಾಳೆ ಫಲ ದೊರೆಯುತ್ತದೆ. ಮಂಗಳೂರು ಕಡೆ ಈರೋಲ್ ಎಂದರೆ ಉಡುಪಿ ಕಡೆ ತಾಳೆ ಮರದ ಎಳನೀರು ಎಂಬ ಅರ್ಥದಲ್ಲಿ ತಾಳಿಬೊಂಡ ಎನ್ನುತ್ತಾರೆ. ಈಗ ಕುಂದ ಕನ್ನಡ ಎನ್ನುವ ಬಡಕಾಯಿ ಭಾಷೆಯಲ್ಲಿ ಅದನ್ನೇ ಅನುಸರಿಸಿ ಹಣಿಬೆಂಡ ಎನ್ನುವರು. ಬೊಂಡ ಅಲ್ಲಿ ಬೆಂಡ ಆಗಿದೆ. ತಾಳಿ ಮರವನ್ನು ಬಡಕಾಯಿ ಭಾಷೆಯಲ್ಲಿ ಹಣಿಮರ ಎನ್ನುವರು. ಮುಕ್ಕಣ್ಣನಂತೆ ಬಹುತೇಕ ಇದರಲ್ಲಿ ಮೂರು ಕಣ್ಣು ಇರುವುದು ಅದಕ್ಕೆ ಕಾರಣ ಇರಬಹುದು. ಕೆಲವೊಮ್ಮೆ ಎರಡು ಕಣ್ಣು, ಅಪರೂಪಕ್ಕೆ ಒಂದು ಕಣ್ಣಿನ ತಾಳಿಬೊಂಡ ಸಹ ಇರುತ್ತದೆ.
ಈ ಕಾಯಿಯನ್ನು ಎಳನೀರು ಕೆತ್ತಿದಂತೆ ಮೇಲೆ ಕೆತ್ತಿದಾಗ ಒಳಗೆ ಸಾಮಾನ್ಯವಾಗಿ ಮೂರು ಗುಳಿಗಳಿದ್ದು ಅದರಲ್ಲಿ ಇರುವ ತಿನ್ನುವ ಮರಿ ಎಳನೀರನ್ನು ಕಣ್ಣು ಎಂದು ಕರೆಯುತ್ತಾರೆ. ತೆಂಗಿನಕಾಯಿಗಿಂತ ದಪ್ಪನೆಯ ತಿನ್ನುವ ಕಣ್ಣಿನ ಒಳಗೆ ಎಳೆಯದರಲ್ಲಿ ಎಳನೀರು ಮಾದರಿಯಲ್ಲೇ ಆದರೆ ಸಣ್ಣ ಪ್ರಮಾಣದಲ್ಲಿ ನೀರು ಇರುತ್ತದೆ. ಅದರ ಸವಿ ಬಲ್ಲವರೆ ಬಲ್ಲರು. ಬೆಳೆದಂತೆ ನೀರು ಮಾಯವಾದರೆ ಕಣ್ಣು ತಿನ್ನಲು ಗಟ್ಟಿಯಾಗಿ ಇರುತ್ತದೆ.
ತಾಳಿ ಮರ ತೆಂಗಿನ ಮರಕ್ಕಿಂತ ಎತ್ತರ ಮತ್ತು ದಪ್ಪ ಇರುವುದರಿಂದ ಅದನ್ನು ಏರುವವರು ಕಡಿಮೆ. ಹಾಗಾಗಿ ನಾನು ಸಣ್ಣವನಿದ್ದಾಗ ಕಾಯಿ ತಿನ್ನಲು ಕಾಯಬೇಕು. ಆದರೆ ಹಣ್ಣು ಆದಾಗ ಸಾಕಷ್ಟು ಬೀಳುತ್ತಿದ್ದವು. ಅದನ್ನು ತಿಂದು ಬಾಯಿಗೆಲ್ಲ ಅಂಟಿಸಿಕೊಳ್ಳುತ್ತಿದ್ದೆವು. ಹಣ್ಣಾದ ಮೇಲೆ ಒಳಗಿನ ಕಣ್ಣು ಮತ್ತು ಅದರ ಹೊರಭಾಗ ಚಿಪ್ಪಾಗಿ ಗಟ್ಟಿಯಾಗುತ್ತವೆ. ಆದ್ದರಿಂದ ತಿನ್ನಲಾಗದು. ಆದರೆ ಚಿಪ್ಪಿನ ಹೊರಭಾಗದ ನಾರಿನ ನಡುವೆ ಮಾವಿನ ಹಣ್ಣಿನ ಹಳದಿ ಬಣ್ಣದಲ್ಲಿ ಪರಿಮಳಭರಿತ ಸಿಹಿ ತಿರುಳು ಇರುತ್ತದೆ. ನಾರನ್ನು ಚೀಪಿ ಇದನ್ನು ತಿನ್ನಬೇಕು. ಸಿಹಿಯಾದ ರಸಾಯನದಂತೆ ಇರುತ್ತದೆ.
ತಾಳಿ ಇಲ್ಲವೇ ಈರೋಲ್ ಮರದಲ್ಲಿ ಗಂಡು ಮರ ಮತ್ತು ಹೆಣ್ಣು ಮರ ಬೇರೆ ಬೇರೆ ಇರುತ್ತದೆ. ಇವುಗಳ ನಡುವೆ ಪರಾಗಸ್ಪರ್ಶ ಆದಾಗ ಹೆಣ್ಣು ಮರ ಫಲ ಬಿಡುತ್ತದೆ. ಕಾಯಿ ಒಂದು ಬಗೆಯ ಎಳನೀರು ಆದುದರಿಂದ ಬೇಡಿಕೆ ಹೆಚ್ಚು. ಹಣ್ಣು ಹಿಂದಿನ ಕಾಲದಲ್ಲಿ ಎಲ್ಲರೂ ತಿನ್ನುತ್ತಿದ್ದರು. ಇಂದು ತೀರಾ ಕಡಿಮೆ.
ಇದರಿಂದ ನೀರಾ ಮತ್ತು ಹೆಂಡ ಇಳಿಸುತ್ತಾರೆ. ಅದರಿಂದ ಬೆಲ್ಲ ತಯಾರಿಸುತ್ತಾರೆ. ನೀರಾ ಮತ್ತು ಬೆಲ್ಲ ಮನೆ ಮದ್ದು, ಅಜ್ಜಿ ಮದ್ದು, ಸಿದ್ದ ವೈದ್ಯ ಮೊದಲಾದವುಗಳಲ್ಲಿ ಔಷಧವಾಗಿ ಬಳಕೆಯಾಗುತ್ತದೆ. ತುಳುನಾಡಿನಲ್ಲಿ ಒಂದು ಕಾಲದಲ್ಲಿ ಇದರ ಓಲೆ ಮಾದರಿಯ ಓಲಿಯಲ್ಲಿ ಹುಯ್ದ ಓಲೆಬೆಲ್ಲ ಪ್ರಸಿದ್ಧವಿತ್ತು. ಇಂದು ನಕಲಿ ಓಲೆಬೆಲ್ಲ ಬರುತ್ತಿದೆ.
ಕೃಷ್ಣ ಗಿರಿ, ಧರ್ಮಪುರಿ ಸುತ್ತಿನ ಇದರ ಬೆಲ್ಲ ಬೆಂಗಳೂರಿನಲ್ಲಿ ದೊರೆಯುತ್ತದೆ. ಸಣ್ಣ ಇಡ್ಲಿ ಮಾದರಿಯಲ್ಲಿ ಅವರು ಬೆಲ್ಲ ಹುಯ್ಯುತ್ತಾರೆ. ಇದರ ಪುಡಿ ಕಲ್ಲುಸಕ್ಕರೆ ಕೂಡ ಬರುತ್ತದೆ. ಇದು ಔಷಧಿಗೆ ಬಳಕೆಯಾಗುತ್ತದೆ. ಅದನ್ನು ತಾಟಿಬೆಲ್ಲ, ಪನೆ ಕರ್ಕಂಡು ಎಂದು ಹೇಳಲಾಗುತ್ತದೆ. ಫಲ ಕಾಲದಲ್ಲಿ ಕಾಯಿಯ ಕಣ್ಣು ತೆಗೆದು, ಪ್ಯಾಕ್ ಮಾಡಿ ಬೆಂಗಳೂರಿನಲ್ಲಿ ತಾಟಿನಿಂಗು ಎಂದು ಮಾರುತ್ತಾರೆ.
ತುಳುನಾಡಿನಲ್ಲಿ ಕಾಯಿಯನ್ನು ಕತ್ತರಿಸಿ ಕಣ್ಣು ತೆಗೆದು ಕೊಡುತ್ತಾರೆ. ಈಗ ಮಂಗಳೂರಿಗೂ ಕಾಯಿ ಸ್ಥಳೀಯದರ ಜೊತೆಗೆ ತಮಿಳುನಾಡಿನಿಂದಲೂ ಬರುತ್ತದೆ. ಹಾಗಾಗಿ ಸಾಕಷ್ಟು ಕಡೆ ಈಗ ಸಿಗುತ್ತಿದೆ. ಚಿತ್ರದಲ್ಲಿ ಸ್ಟೇಟ್ ಬ್ಯಾಂಕ್ ಬಳಿ ಗಾಡಿ ತುಂಬ ಕಾಯಿ ಮಾರುವುದು ಮಾಮೂಲು.
-By ಪೇಜಾ