ಸಾವು...ಎಂತಹ ಗಟ್ಟಿ ಗುಂಡಿಗೆಯಿರುವವನಿಗು ಎದುರು ನಿಂತಾಗ ಒಮ್ಮೆ ನಡುಗಿಸಿಬಿಡುವಂತಹ ಬದುಕಿನ ಅತೀ ಕೊನೆಯ ಅಸ್ತ್ರ. ಎಲ್ಲೊ ಜನ್ಮ ಪಡೆದು, ಮತ್ತೆಲ್ಲಿಯೊ ಎಲ್ಲಕ್ಕೂ ಹೋರಾಟ ನಡೆಸಿ, ಹಾರಾಡಿ,ಚೀರಾಡಿ,ಕೊಸರಾಡಿ, ನಗು, ಅಳು, ಬೇಸರ, ಅಕ್ಕರೆ, ಪ್ರೀತಿ,..ಮತ್ತಿತರೆ ಬದುಕಿನ ಈ ಎಲ್ಲ ಜಂಜಡಗಳ ಅಂತ್ಯ ಸಾವು..!
ಹೌದು...ಸಾವು ಹುಟ್ಟಿದ ಪ್ರತಿಯೊಂದು ಜೀವಿಗೂ ಎಂದಾದರೊಂದು ದಿನ ಬಂದು ಅಪ್ಪುವ ದಿವ್ಯಪ್ರೇಮಿ..!
ಸಾವುತಾನೆ, ಎಲ್ಲರಿಗೂ ಬರುತ್ತದೆ. ಅದರಲ್ಲಿ ವಿಶೇಷ ಏನಿದೆ ಎಂದು ಉಡಾಫೆ ಮಾಡುವವರು ಕೆಲವರಾದರೆ, ಸಾವು ಬಂದು ತಟ್ಟಿ ಎಬ್ಬಿಸುವ ಮುಂಚೆ, ಸಿಕ್ಕಿರುವ ಜನ್ಮಕ್ಕೆ ನ್ಯಾಯ ಒದಗಿಸುವಂತದ್ದು ಏನಾದರೂ ಸಾಧಿಸಿಹೋಗಬೇಕಪ್ಪ ಅನ್ನುವ ಛಲ ಹಲವರದ್ದು. ಹುಟ್ಟಿದಿವಿ ಅಂದಮೇಲೆ ಬದುಕು ಹೆಂಗ್ ಬರುತ್ತೊ ಹಂಗೆ ಬದುಕಿ ಹೋಗಿಬಿಡಬೇಕು ಅನ್ನುವ ನಿರ್ಲಕ್ಷ್ಯ ಕೆಲವರದ್ದು.
Finally ಸಾವು ಎನ್ನುವುದು ಯಾರನ್ನೂ ಬಿಡೋದಿಲ್ಲ, ಮತ್ತು ಸತ್ತಾಗ ಏನನ್ನೂ ಹೊತ್ತೊಯ್ಯುವುದಿಲ್ಲ ಎಂಬುದರ ಅರಿವು ಎಲ್ಲರಿಗೂ ಇದೆ. ಆದರೂ ಸಂಪಾದನೆ, ಸಂಪಾದಿಸಿದ್ದೆಲ್ಲವ ಕೂಡಿಡುವ, ಕೂಡಿಟ್ಟು ಕೋಟ್ಯಧಿಪತಿ ಎನಿಸಿಕೊಳ್ಳು ಹವಣಿಕೆ. ಹಲವರು ದಿನದ ತುತ್ತಿಗಾಗಿ ಹೋರಾಟ ನಡೆಸಿದರೆ, ಕಾಸು ಗುಡ್ಡೆ ಹಾಕಿಕೊಂಡೊ ಅಥವಾ ಅಪ್ಪನೊ ಅಜ್ಜನೊ ಮಾಡಿಟ್ಟ ಆಸ್ತಿಯನ್ನು ಕರಗಿಸುವುದೇಗೆ ಎಂದು ಪಬ್ ರೆಸ್ಟೋರೆಂಟ್ ಗಳಲ್ಲಿ ಕೂತು ತಿನ್ನುವವನೊಬ್ಬ.
ಹಿಡಿ ತುತ್ತಿಗಾಗಿ ಎಲ್ಲರದೂ ಹೋರಾಟವೆ, ವಿವಿಧ ಆಯಾಮಗಳ ಜೊತೆ...ಅಷ್ಟೇ ವ್ಯತ್ಯಾಸ. ಯಾರು ಯಾರನ್ನು ನಂಬದಿದ್ದರು, ಎಷ್ಟೇ ಜಾತಿ, ವರ್ಣ, ಕುಲ, ಮತವೆಂದು ಬೇಧ ಮಾಡಿದರೂ, ಸಾವು ಮಾತ್ರ ಎಲ್ಲರಿಗೂ ಸಮಾನ ಪ್ರೀತಿ ಅರ್ಥಾತ್ ಯಾರೂ ತನ್ನಿಂದ ತಪ್ಪಿಸಿಕೊಳ್ಳದಂತೆ ಬಂದು ಅಪ್ಪಿಬಿಡುತ್ತದೆ.
ಇನ್ನು ಸಾವಿನ ಮನೆಗೆ ಬಂದು ಚಹಾ ಬೇಡ ಕಾಫಿ ಕೊಡ್ರೀ , ಹೂವಿನ ರೇಟು ಬಹಳ ಜಾಸ್ತಿಯಾಗಿದೆ ನೋಡಿ..ಒಂದು ಚಿಕ್ಕ ಹಾರಕ್ಕೆ ೫೦ರೂಪಾಯಿ, ಅಯ್ಯೋ ಪಾಪ ಇಷ್ಟು ಬೇಗ ಸಾಯಬಾರದಿತ್ತು, courtesyಗಾದರು ಒಂದೆರಡು ಹನಿ ಕಣ್ಣೀರು ಸುರಿಸಬೇಕು, ಅಷ್ಟೊಂದು ಸಂಪಾದಿಸಿದರೂ ಪಾಪ ಬೀದಿಯಲ್ಲಿ ಸಾವು ಬಂತು, ಈ ಎಲ್ಲ ಅಂತೆಕಂತೆಗಳ ಸಂತೆಯೊಳಗೆ ಹೆಣದ ಹಿಂದೆ ನಡೆಯುವವರ ನಡುವೆ, ಮಾನವೀಯತೆ ಇರುವವನೊಬ್ಬ ಬಿದಿರು ತಾಟಿಗೆ ಹೆಗಲಾಗಿ ನಿಂತರೆ, ಮಣ್ಣಿನ ಕೊನೆ ಹಿಡಿ ಹೆಣದ ಮೇಲೆ ಬಿದ್ದು ಮುಚ್ಚಿಹೋಗುವವರೆಗು ಜೊತೆಯಾದರೆ, ಹರಿವ ಕಣ್ಣೀರ ಒರೆಸಲು ಆಗದಿದ್ದರು ಕಣ್ಣೀರು ಬತ್ತುವ ವರೆಗು ಜೊತೆಯಾದರೆ ಅವನೊಳಗೊಬ್ಬ ಮನುಷ್ಯನಿದ್ದಾನೆ ಎಂದರ್ಥ.
ಅರ್ಥಾತ್.. ಖುಷಿಯಾಗಿದ್ದಾಗ, ದುಡ್ಡು ಕೈಯಲ್ಲಿ ಚೆನ್ನಾಗಿ ಓಡಾಡುವಾಗ, ಸಂಭ್ರಮಿಸುವಾಗ, ಹಬ್ಬ ಆಚರಿಸುವಾಗ, ನಗುವಾಗ ಈ ಎಲ್ಲ ಸಮಯಗಳಲ್ಲಿ ಯಾರುಬೇಕಾದರು ಜೊತೆಯಾಗಬಹುದು. ಆದರೆ ನಮ್ಮ ನೋವಿನಲ್ಲಿ, ಕಷ್ಟದ ಸಮಯಗಳಲ್ಲಿ, ಬೇಸರದಲ್ಲಿ ಜೊತೆಯಾಗಿ ನಿಲ್ಲುವ, ಸ್ಪಂದಿಸುವ ಒಂದಾದರು ಜೀವವನ್ನು ನೀವು ಸಂಪಾದಿಸಿರದೆ ಇದ್ದರೆ, ನೀವು ಎಷ್ಟೆ ಧನ ಕನಕಗಳನ್ನು ಸಂಪಾದಿಸಿದ್ದರೂ ವ್ಯರ್ಥವೆ !! ಮತ್ತು ಸಮಯಕ್ಕೆ ಬೇಕಾದಂತೆ ಉಪಯೋಗಿಸಿಕೊಂಡು, ಕಷ್ಟಕ್ಕಾದವರ ಕೈ ಬಿಟ್ಟು ಬಹು ದೂರ ನೀವು ನಡೆದಿದ್ದೀರಿ ಎಂದರೆ, ನಿಮ್ಮೊಳಗೊಬ್ಬ ರಾಕ್ಷಸ ಜನ್ಮತಳೆದಿದ್ದಾನೆ ಎಂದರ್ಥ..!
ಜಗತ್ತು ಎಷ್ಟೇ ಮುಂದುವರೆಯಲಿ, ಅಥವಾ ಇಡೀ ಜಗತ್ತೇ ನಿಮ್ಮೆದುರು ತಿರುಗಿ ಬೀಳಲಿ, ಬಣ್ಣ ಮಾಸದಂತ ಯಾವುದಾದರೂ ಒಂದು ಸುಂದರ ಬಂಧವನ್ನು ನಿಮ್ಮಿಡೀ ಜೀವನದಲ್ಲಿ ನೀವು ಸಂಪಾದಿಸಿಕೊಂಡಿದ್ದೀರಾ ?? ಎಲ್ಲ ಹೋರಾಟ ಹಾರಾಟಗಳನ್ನು ಬದಿಗಿಟ್ಟು ಒಮ್ಮೆ ಪ್ರಶ್ನಿಸಿಕೊಳ್ಳಿ ?!
ಎಲ್ಲರೂ ಒಂದು ದಿನ ಬಾಯಿಗೆ ಅಕ್ಕಿಕಾಳು ಹಾಕಿಸಿಕೊಂಡು ಈ ಜಗತ್ತಿಂದ ಟೆಂಟ್ ಕಿತ್ತು ಹೋಗಲೇಬೇಕು, ಹಿಡಿ ಅಕ್ಕಿಕಾಳು ಸುರಿಯಲಾದರು ಬದುಕಿನ ಹೋರಾಟಗಳ ಜೊತೆ ರಾಜಿ ಮಾಡಿಕೊಂಡು, ಒಂದಷ್ಟು ಬಂಧಗಳನ್ನು ಉಳಿಸಿಕೊಂಡು ಬದುಕಿನ ಸಾರ್ಥಕ್ಯ ಕಂಡುಕೊಳ್ಳೋಣ.
-By ಪಲ್ಲವಿ ಚೆನ್ನಬಸಪ್ಪ