ಇಂದು ಮಂಗಳೂರಿನಿಂದ ಹಳ್ಳಿಗಾಡಿನ ತನಕ ಉರುವಲು ಬಳಸುವವರಿಲ್ಲದೆ ಹಾಳಾಗುತ್ತಲಿದೆ. ಇದು ಕಾಲದ ಅನಿವಾರ್ಯವೂ ಆಗಿದೆ.
ಆದಿ ಮಾನವನಿಗೆ ಆಹಾರವೆಂದರೆ ನೇರ ಪ್ರಕೃತಿಯಲ್ಲಿ ದೊರೆಯುವ ನಾನಾ ಸಸ್ಯ ಭಾಗಗಳು ಮತ್ತು ಕೊಂದ ಪ್ರಾಣಿಗಳು. ಇವನ್ನೆಲ್ಲ ಅವರು ಹಸಿ ಹಸಿಯಾಗಿಯೇ ತಿನ್ನುತ್ತ ಬಂದರು. ಪ್ರಾಣಿಗಳು ಓಡುವಾಗ ಚಕಮಕಿ ಕಲ್ಲುಗಳ ಉಜ್ಜಲ್ಪಟ್ಟು ಕಾಡಗಿಚ್ಚು ಎದ್ದಿತು. ಇದರಲ್ಲಿ ಸಿಕ್ಕು ಸತ್ತ ಪ್ರಾಣಿಗಳ ಮಾಂಸ ತಿಂದ ಮಾನವನಿಗೆ ಸುಟ್ಟ ಮಾಂಸ ರುಚಿ ಎಂಬುದು ಅರಿವಾಯಿತು. ಮಾಂಸ ಮಾತ್ರವಲ್ಲ ಕೆಲವು ಗೆಡ್ಡೆ ಗೆಣಸುಗಳನ್ನೂ ಸುಟ್ಟು ತಿಂದು ಅದನ್ನು ಆಹಾರದ ಕ್ರಮವಾಗಿಸಿಕೊಂಡ. ಅಲೆಮಾರಿ, ಕಾಡಾಡಿಗೆ ಉರುವಲಿನ ಕೊರತೆ ಇರಲೇ ಇಲ್ಲ.
ಬೆಂಕಿಯನ್ನು ಕಾದಿಡುವುದು ಪರಸ್ಪರ ಸ್ಪರ್ಧೆ ಕಾದಾಟಕ್ಕೂ ಕಾರಣವಾಗಿತ್ತು. ಮುಂದೆ ಕೆಂಡದ ಹಟ್ಟಿ, ಕೆಂಡದ ಮನೆಯವರಿಗೆ ಬೆಂಕಿ ಕಾದಿಡುವುದೇ ಕಸುಬಾಯಿತು. ಒಂದೂಮುಕ್ಕಾಲು ಶತಮಾನದ ಹಿಂದೆ ಬೆಂಕಿಪೆಟ್ಟಿಗೆ ಬರುವವರೆಗೆ ಇದೇ ಕತೆ.
ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಮಡಕೆಯಲ್ಲಿ ಕೆಲವು ಕಾಳುಗಳನ್ನು ಬೇಯಿಸಿ ತಿನ್ನಲು ಮಾನವ ಆರಂಭಿಸಿದ. ಓಡಿನ ಮೇಲೆ ಸುಟ್ಟು ತಿನ್ನಲೂ ಕಲಿತ. ಆರು ಸಾವಿರ ವರುಷಗಳ ಹಿಂದೆ ಈಜಿಪ್ತ್ ನಲ್ಲಿ ಬ್ರೆಡ್ ತಯಾರಿಕೆಯೂ ಆರಂಭವಾಯಿತು.
ಇವಕ್ಕೆಲ್ಲ ಮೂಲ ಉರುವಲು ಕಟ್ಟಿಗೆ. ಇದ್ದಿಲು, ಬೆರಣಿಯಂಥವು ಕೊಸುರು ಅಷ್ಟೇ. ಈಗ ಅಡುಗೆ ಅನಿಲ, ಸೂರ್ಯ ಶಕ್ತಿ, ನಾನಾ ಬಗೆಯ ವಿದ್ಯುತ್ ಬಳಕೆಯಿಂದಾಗಿ ಒಲೆ ಮತ್ತು ಕಟ್ಟಿಗೆ ಉರುವಲು ಕೇಳುವವರಿಲ್ಲವಾಗಿದೆ.
ಮಂಗಳೂರು, ಬೆಂಗಳೂರಿನಂಥ ನಗರಗಳಲ್ಲಿ ಅಲೆಮಾರಿಗಳು, ಕೂಲಿಗೆ ಬಂದವರು, ಗುಡಿಸಲು ವಾಸಿಗಳು ಕಟ್ಟಿಗೆ ಆಯುವುದಕ್ಕೂ ಒಂದು ಸ್ವಲ್ಪ ಸಮಯ ಇಡುತ್ತಿದ್ದರು. ಇಂದು ನಗರ ಬಿಡಿ ಹಳ್ಳಿಗಳ ಮಟ್ಟಿಗೂ ಈ ಚಿತ್ರ ಬದಲಾಗಿದೆ. ಏನೋ ಅಲ್ಪ ಸ್ವಲ್ಪ ಕಟ್ಟಿಗೆ ಬಳಕೆ ಇದೆ. ತೆಂಗಿನ ಸೋಗೆ ಕೇಳುವವರಿಲ್ಲ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕೇಳಲು ಜನರಿಲ್ಲದೆ ರಾಶಿ ಬಿದ್ದ ಉರುವಲು ಇಂದು ಸಾಕು ಬೇಕಾದಷ್ಟು ಕಣ್ಣಿಗೆ ಬೀಳುತ್ತದೆ.
-By Perooru Jaru