ಪುತ್ತೂರು : ಕಲೆಯ ಆರಾಧನೆಯಿಂದ ಕಲಾವಿದ ಬೆಳೆಯುತ್ತಾನೆ. ಕಲೆಯೂ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ನುರಿತ ಕಲಾವಿದ ತನ್ನ ಪ್ರಾವಿಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೇ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ನಡೆಸುವ ಪ್ರಯತ್ನಗಳು ಕಲೆಯ ಉಚ್ಚ್ರಾಯಕ್ಕೆ ಕಾರಣವಾಗುತ್ತವೆ. ಕಲೆ ತನ್ನ ಬದುಕಿಗೆ ಮೌಲ್ಯ ತಂದುಕೊಟ್ಟಿದೆ ಎಂಬ ವಿನೀತ ಭಾವದಿಂದ ಕಲೆಯನ್ನು ಆರಾಧಿಸುತ್ತ ಹೋದರೆ ಅದು ಇನ್ನಷ್ಟು ಹೆಚ್ಚಿನ ಸಿದ್ಧಿ ಮತ್ತು ಪ್ರಸಿದ್ಧಿ ಸಾಧಿಸಲು ಸಾಧ್ಯ ಎಂದು ತೆಂಕು ತಿಟ್ಟು ಯಕ್ಷಗಾನದ ಸುಪ್ರಸಿದ್ಧ ಭಾಗವತರಾದ ಯಕ್ಷಧ್ರುವ ಶ್ರೀ.ಪಟ್ಲ ಸತೀಶ ಶೆಟ್ಟಿ ಹೇಳಿದರು. ಅವರು ಸಂತಫಿಲೋಮಿನಾ ಕಾಲೇಜಿನ ಯಕ್ಷ ಕಾಲಾ ಕೇಂದ್ರವು ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಲೆ ಮತ್ತು ಕಲಾವಿದ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.
ಕಲೆಗಳ ಪ್ರಕಾರಗಳು ಹಲವು. ವಿದ್ಯಾರ್ಥಿಗಳು ಕನಿಷ್ಠ ಒಂದು ಕಲೆಯನ್ನಾದರೂ ನಿರಂತರ ಅಧ್ಯಯನ ಮತ್ತು ಅಭ್ಯಾಸ ಮಾಡಬೇಕು. ಯಾವುದೇ ಕಲೆಯಲ್ಲಿ ಆಸಕ್ತಿ ತನ್ನಿಂದ ತಾನೇ ಬರಲಾರದು. ಕಲೆಯನ್ನು ಸ್ವಾಂಗೀಕರಿಸುವ ನಿಟ್ಟಿನಲ್ಲಿ ಮನ ಮಾಡಬೇಕು. ಆಗ ಮಾತ್ರ ಕಲೆ ಸಿದ್ಧಿಸುತ್ತದೆ. ಚಿತ್ರಕಲೆ, ಸಂಗೀತ, ನೃತ್ಯ ಹೀಗೆ ಯಾವುದೋ ಒಂದು ಕಲಾಪ್ರಕಾರದಲ್ಲಿ ಆಸಕ್ತಿ ತಳೆದು ಅದರಲ್ಲಿಲ್ಲ್‍ಪ್ರಾವಿಣ್ಯತೆ ಪಡೆಯಲು ಸತತ ಪ್ರಯತ್ನ ಮಾಡಬೇಕು. ಕಲೆಯಿಂದ ಜೀವನಕ್ಕೆ ಹೆಚ್ಚಿನ ಅರ್ಥ ಬರುತ್ತದೆ. ಯಕ್ಷಗಾನದಂಥ ಸಮೃದ್ಧವಾದ ಕಲೆ ಇನ್ನೊಂದಿಲ್ಲ. ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕಾಗಿದೆ. ಭಾಗವತಿಕೆ, ಚೆಂಡೆ – ಮದ್ದಳೆ, ನಾಟ್ಯ, ಮಾತುಗಾರಿಕೆ, ಬಣ್ಣಗಾರಿಕೆ ತಾಳಮದ್ದಳೆ ಹೀಗೆ ಯಕ್ಷಗಾನದ ಬೇರೆ ಬೇರೆ ಆಯಾಮಗಳ ಕುರಿತು ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಂಡರೆ ಯಕ್ಷಗಾನ ಇನ್ನಷ್ಟು ಸಮೃದ್ಧವಾಗಲಿದೆ ಎಂದು ಅವರು ಹೇಳಿದರು. ತಾನು ಯಾವ ಬಗೆಯಲ್ಲಿ ಯಕ್ಷಗಾನಕ್ಕೆ ಪ್ರವೇಶಿಸಿದೆ ಮತ್ತು ಎಷ್ಟೆಲ್ಲ ಸವಾಲು ಎದುರಿಸುತ್ತ ಈ ಮಟ್ಟಕ್ಕೆ ಬೆಳೆದೆ ಎಂದು ಅವರು ತಮ್ಮ ಜೀವನಾನುಭವವನ್ನು ಉಪನ್ಯಾಸದಲ್ಲಿ ಪ್ರಸ್ತಾವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಂ|ಡಾ|ಎಂಟೋನಿ ಪ್ರಕಾಶ್ ಮಂತೆರೋ ಅವರು ಮಾತನಾಡಿ ಯಕ್ಷಗಾನವೆನ್ನುವುದು ಕರಾವಳಿ ಭಾಗದ ಸಾಂಸ್ಕೃತಿಕ ವೈಭವ, ಸಮೃದ್ಧಿಯ ಪ್ರತೀಕ. ಪೌರಾಣಿಕ ಕಥಾನಕಗಳ ಮೂಲಕ ಜೀವನ ಮೌಲ್ಯಗಳನ್ನು ಹೇಳುವ, ಪಸರಿಸುವ, ಎಲ್ಲರನ್ನು ಒಂದಾಗಿಸುವ ಯಕ್ಷಗಾನವು ಅನನ್ಯ. ಯಕ್ಷಗಾನದಲ್ಲಿ ಸಾಧಿಸಿದ ಕಲಾವಿದರು ನೀಡುವ ಉಪನ್ಯಾಸ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ಯಕ್ಷಗಾನದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಪ್ರೇರಿಸುತ್ತವೆ ಎಂದು ಹೇಳಿದರು.
ಕಾಲೇಜಿನ ಲಲಿತಕಾಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಾಣಿಜ್ಯ – ವ್ಯವಹಾರ ವಿಭಾಗದ ಪ್ರಾಧ್ಯಾಪಕ ಮತ್ತು ಯಕ್ಷಕಾಲಾ ಕೇಂದ್ರದ ನಿರ್ದೇಶಕ ಪೆÇ್ರ.ಪ್ರಶಾಂತ್ ರೈ ಸ್ವಾಗತಿಸಿ, ವಿದ್ಯಾರ್ಥಿನಿ ಮೈತ್ರಿ ಭಟ್ ನಿರೂಪಿಸಿದರು. ಗಣಿತಶಾಸ್ತ್ರ ಪ್ರಾದ್ಯಾಪಕ ವೃಕ್ಷವರ್ಧನ ಹೆಬ್ಬಾರ್ ವಂದಿಸಿದರು. ಉಪನ್ಯಾಸ ಕಾರ್ಯಕ್ರಮದ ಬಳಿಕ ಶ್ರೀ ಸತೀಶ ಶೆಟ್ಟಿ ಪಟ್ಲ ಮತ್ತು ಪ್ರಶಾಂತ್ ರೈ ಮುಂಡಾಳುಗುತ್ತು ಅವರಿಂದ ದ್ವಂದ್ವ ಯಕ್ಷಗಾನ ಹಾಡುಗಾರಿಕೆ ನಡೆಯಿತು. ಮದ್ದಳೆಯಲ್ಲಿ ಚಂದ್ರಶೇಖರ ಗುರುವಾಯನಕೆರೆ, ಚೆಂಡೆಯಲ್ಲಿ ಕೌಶಲ ರಾವ್ ಮತ್ತು ಭೌತಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿ ನಾರಾಯಣ ಶರ್ಮ ಸಹಕರಿಸಿದರು.