ಉಡುಪಿ: ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು ಹಾಗೂ ಅತೀ ಹಿಂದುಳಿದ ಬುಡಕಟ್ಟು ಸಮುದಾಯದ ಜನರಿಗೆ ಕಾನೂನಿನ ನೆರವನ್ನು ಒದಗಿಸುವ ಗುರಿಯನ್ನು ಕಾನೂನು ಸೇವೆಗಳ ಕೇಂದ್ರ ಹೊಂದಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್ ಶಶಿಧರ್ ಶೆಟ್ಟಿ ಹೇಳಿದರು.

    ಅವರು ಚೇರ್ಕಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಜಿಲ್ಲಾ ವಕೀಲರ ಸಂಘ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ ವಿವಿಧ ಇಲಾಖೆಗಳು ಉಡುಪಿ ಜಿಲ್ಲೆ ಮತ್ತು ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯ ಕುಂಜಿಬೆಟ್ಟು ಇವರ ಜಂಟಿ ಸಹಯೋಗದೊಂದಿಗೆ ನಡೆದ ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ (ಬುಡಕಟ್ಟು ಜನರ ಹಕ್ಕು ಜಾರಿ ಮತ್ತು ಸಂರಕ್ಷಣೆ) ಯೋಜನೆ 2015 ರ ಅನುಷ್ಠಾನ ಮತ್ತು ಕಾನೂನು ಸೇವೆಗಳ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

     ರಾಜ್ಯದಲ್ಲಿ ಅಧಿಕವಾಗಿ ಬುಡಕಟ್ಟು ಸಮುದಾಯ ಕಂಡುಬರುವ ಗ್ರಾಮ ಪಂಚಾಯತ್ಗಳಲ್ಲಿ ಕಾನೂನು ಸೇವೆಗಳ ಕೇಂದ್ರವನ್ನು ತೆರೆಯಲು ನಿರ್ಧರಿಸಿದ್ದು, ಈಗಾಗಲೇ ರಾಜ್ಯದಲ್ಲಿ ಚಾಮರಾಜನಗರ, ರಾಯಚೂರು, ಚೇರ್ಕಾಡಿ, ಯಲ್ಲಾಪುರ ಭಾಗಗಳಲ್ಲಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದ್ದು, ಬುಡಕಟ್ಟು ಜನರಿಗೆ ಅವರ ಹಕ್ಕುಗಳು ಮತ್ತು ಸರಕಾರದಿಂದ ಅವರಿಗೆ ನೀಡುವ ಯೋಜನೆಗಳ ಕುರಿತು ಮಾಹಿತಿ ನೀಡುವ ಉದ್ದೇಶವನ್ನು ಕಾನೂನು ಸಲಹಾ ಕೇಂದ್ರ ಹೊಂದಿದೆ ಎಂದರು.

    ಚೇರ್ಕಾಡಿ ಗ್ರಾಮ ಪಂಚಾಯತ್ನಲ್ಲಿರುವ ಬುಡಕಟ್ಟು ಜನಾಂಗದ ಸಮೀಕ್ಷೆಯ ಪ್ರಕಾರ ಒಟ್ಟು 1839 ಮಂದಿ ಬುಡಕಟ್ಟು ಸಮುದಾಯದವರಾಗಿದ್ದು, ಅವರಲ್ಲಿ ಇನ್ನೂ ಅನೇಕ ಮಂದಿ ಈವರೆಗೆ ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ, ಪಡಿತರ ಚೀಟಿ, ಜನನ ಹಾಗೂ ಮರಣ ಪ್ರಮಾಣ ಪತ್ರದಿಂದ ವಂಚಿತರಾಗಿದ್ದಾರೆ. ಇಂತಹವರನ್ನು ಗುರುತಿಸಿ, ಕಾನೂನಿನ ಅಡಿಯಲ್ಲಿ ಅವರಿಗೆ ಸಿಗುವ ಸೌಲಭ್ಯವನ್ನು ಒದಗಿಸುವ ಚಿಂತನೆಯನ್ನು ಕಾನೂನು ಸಲಹಾ ಕೇಂದ್ರ ಮಾಡಲಿದೆ ಎಂದರು.

     ರಾಜ್ಯದಲ್ಲಿರುವ ಪ್ರತಿಯೊಂದು ಕಾನೂನು ಕಾಲೇಜುಗಳಲ್ಲಿ ಕಾನೂನು ಸೇವೆಗಳ ಕೇಂದ್ರವನ್ನು ತೆರೆಯುವುದಲ್ಲದೇ, ಒಂದು ಕಾಲೇಜು ಕನಿಷ್ಠ ಐದು ಗ್ರಾಮಗಳನ್ನು ದತ್ತು ಪಡೆಯಬೇಕು ಹಾಗೂ ಅಲ್ಲಿನ ವಿದ್ಯಾರ್ಥಿಗಳು ಗ್ರಾಮದಲ್ಲಿ ಒಂದು ವಾರಗಳ ಕಾಲ ಸಮೀಕ್ಷೆ ನಡೆಸಿ, ಎಲ್ಲಾ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಸಂಬAಧಪಟ್ಟ ಇಲಾಖೆಯನ್ನು ಸಂಪರ್ಕಿಸಿ, ಸಮೀಕ್ಷೆಯ ನಂತರ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಸಮಕ್ಷಮದಲ್ಲಿ ಅವುಗಳನ್ನು ಎಲ್ಲಾ ಇಲಾಖೆಯವ ಸಭೆ ಆಯೋಜಿಸಿ, ಆ ಗ್ರಾಮದ ಜನರಿಗೆ ಅಗತ್ಯವಿರುವ ಯೋಜನೆಗಳನ್ನು ತಿಳಿಸುವ ಹಾಗೂ ಒದಗಿಸುವ ಕಾರ್ಯ ಮಾಡಬೇಕು ಎಂದರು.

     ಮುಖ್ಯ ಅತಿಥಿಗಳಾಗಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಡಾ. ಮೋಹನ್ ರಾವ್ ನಲ್ವಾಡಿ ಮಾತನಾಡಿ, ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಮನುಷ್ಯ ಹುಟ್ಟಿನಿಂದ ಸಾಯುವ ತನಕ ಮತ್ತು ಸತ್ತ ನಂತರವೂ ಕಾನೂನು ಚೌಕಟ್ಟಿನಲ್ಲಿರುತ್ತಾನೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಭಾರತ ಸಂವಿಧಾನ ಮಹತ್ತರದ್ದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಈ ಕಾನೂನು ಸಲಹಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಎಸ್ ಭಟ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದಲ್ಲಿ ಕಾನೂನು ಸಲಹಾ ಕೇಂದ್ರದ ಸ್ಥಾಪನೆ ಇಲ್ಲಿನ ಜನರಿಗೆ ಉಪಯುಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ನ್ಯಾಯಾಲಯಕ್ಕೆ ಹೋಗಲು ಅಸಾಧ್ಯ ಎಂದು ಕೈಕಟ್ಟಿ ಕೂರುವ ಪ್ರಮೇಯವಿಲ್ಲ. ಎಲ್ಲಾ ಮಾಹಿತಿಗಳು ಇಲ್ಲಿಯೇ ದೊರೆಯುವುದರಿಂದ ಗ್ರಾಮಸ್ಥರಿಗೆ ಇದು ಸಹಾಯಕವಾಗಿದೆ ಎಂದರು.

    ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

     ಕಾರ್ಯಕ್ರಮದಲ್ಲಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ದೂದ್ಪೀರ್, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಡಾ. ನಿರ್ಮಲಾ ಕುಮಾರಿ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಬಿ. ನಾಗರಾಜ್, ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಪಂಚಾಯತ್ನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ಚೇರ್ಕಾಡಿ ಗ್ರಾಮ ಪಂಚಾಯತ್ನ ಸದಸ್ಯ ಹರೀಶ್ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಷ್ ವಂದಿಸಿದರು. ಚೇರ್ಕಾಡಿ ಶಾಲಾ ಅಧ್ಯಾಪಕಿ ಜಯಶೀಲ ನಿರೂಪಿಸಿದರು.