ಸಮಯ ಮೀರಿಸುವ, ಸಂಜ್ಞೆ ಇಲ್ಲದ,ಸಂಜೆಯ ಭಾವಗಳು... ದೀಪ ಹಚ್ಚಿ ಬಿಟ್ಟೆ, ಕತ್ತಲಾಯಿತೆಂದು. ಬದುಕಿಗೆ ಬೆಳಕಾಗಿದ್ದು ಯಾವಾಗ?,ಗೊತ್ತಿಲ್ಲ.!

ಸೀಮೆಎಣ್ಣೆ ದೀಪದ ಹೊಗೆ ,ಸುರುಳಿ ಸುತ್ತಿಕೊಂಡು

ಕರಿ ಆದದ್ದು ನೋಡಿಕೊಂಡು ಬೆಳೆದವನು ನಾನು.


ಹಚ್ಚಿದ ದೀಪದ ಎಣ್ಣೆ ಕಾಲಿಯಾಯಿತು,ಬತ್ತಿಯು ಕರಟು ಹೋಯಿತು,ಬತ್ತಿ ಹುಡುಕಿದೆ.ಹಸಿ ಹಸಿ ಭಿತ್ತಿಯ ನಡುವೆ ಒತ್ತಿ ಇಟ್ಟ ಬತ್ತಿ ತೇವ ಆಗಿತ್ತು,

ಅಳಿದುಳಿದ ಎಣ್ಣೆಯ ಸುರಿದು ಕಡ್ಡಿ ಕೀರಿದೆ.ಚಟ ಪಟ ಸದ್ದು,ಬತ್ತಿ ನಂದಿ ಹೋಯಿತು.


ಮತ್ತೆ ಕತ್ತಲು, ಅಪರೂಪವೇನಲ್ಲ ಕತ್ತಲಲ್ಲಿ ನಡೆದವನಿಗೆ,ಬೆಳಕು ಹಸಿ ಸುಳ್ಳನ್ನು ಹೇಳಿದ್ದು  ಕೇಳಿಸಿಕೊಂಡು ನಕ್ಕವನಿಗೆ,ಕತ್ತಲಲ್ಲಿ ವಾಸ್ತವದ

ಅನಾವರಣತೆಯಲ್ಲವೆ,?,ಊಟಕ್ಕೆ ಉಪ್ಪಿನಕಾಯಿ

ಇರಬೇಕು ಎಂದೇನೂ ಇಲ್ಲಾ,ನೀರು ಉಪ್ಪು ಸುರುವಿ

ಉಂಡವರಿಗೆ!?.


ಜಾರು ಬಂಡೆಗಳ ನಡುವೆ,ಕಲ್ಲು ಒತ್ತಿಸಿಕೊಂಡು ಕತ್ತಲಲ್ಲಿ ನಡೆಯುವಾಗ, ಆದ ನೋವುಗಳಿಗೆ ಎಂತಾ

ಸ್ವಾದವಿದೆ,ಅನುಭವಿಸಬೇಕು ಇಡಿ ಇಡಿಯಾಗಿ.

ಕಲ್ಲು ಕೊಯ್ದ ನೋವಿನ ಸುತ್ತ ಏಳುವ ಹುಣ್ಣುಗಳಲ್ಲಿ ಎದ್ದು ಕೂರುವ ತುರಿಕೆ ಇದೆಯಲ್ಲ

ಅದ್ಭುತ,,!!


ಚಲನೆ ರಹಿತವಾಗಿ,ಬದುಕಿ ಬಿಡಬೇಕು.ಕತ್ತಲಲ್ಲಿ!

ಬೆಳಕು ಹರಿಯುವಾಗ,ಕಣ್ಣೀರು ಒರೆಸಿಕೊಳ್ಳುವ ದುರ್ದು ಎದ್ದು ಬಿಡುತ್ತದೆ,ಬಹುಪಾಲು ಇನ್ನೊಬ್ಬರಿಗಾಗೆ ಬದುಕುವುದಲ್ಲವೆ!?,ನಮಗಾಗೆ ಬದುಕಿದ್ದಾಗ,ನಿಸ್ವಾರ್ಥ ಪ್ರಾಮಾಣಿಕ ಬೆಳಕು ಹರಿಯುತ್ತದೆ. ಇನ್ನೊಬ್ಬರಿಗಾಗಿ ಬದುಕಲು ಶುರು ಮಾಡಿದಾಗಲೆ.!!


- ರತ್ನಾಕರ್ (ಗಡಿಗೇಶ್ವರ)