ಮಂಗಳೂರು: ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿ ತನ್ನ ನೆಲೆ ಕಂಡುಕೊಂಡಿರುವ ಧವಳ ಕೋ ಆಪರೇಟಿವ್ ಸೊಸಾಯಿಟಿ ಇದರ ಉದ್ಘಾಟನೆಯು ಜೂನ್ 19ರಂದು ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಪರಮಪೂಜ್ಯ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಮತ್ತಿತರರು ಜ್ಯೋತಿ ಬೆಳಗುವ ಮೂಲಕ ಧವಳ ಉದ್ಘಾಟನೆಗೆ ಚಾಲನೆ ನೀಡಿದರು.
ಹಣ ಹೆಸರು ತರುತ್ತದೆ ಹಾಗೂ ಹೆಸರು ಕೆಡಿಸುತ್ತದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸುವುದರ ಮೂಲಕ ಸಾಮಾಜಿಕ ಬದ್ಧತೆಯಾಗಿರುತ್ತದೆ. ನಿಯಂತ್ರಣದಲ್ಲಿ ಇದ್ದರೆ ಹಣ ಇಡುವವನಿಗೂ, ಹಣ ಪಡೆಯುವ ಎಲ್ಲರಿಗೂ ಲಾಭಕರ ಹಾಗೂ ಹಿತಕರ ಎಂದು ಭಟ್ಟಾರಕ ಸ್ವಾಮೀಜಿಯವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಸುರೇಶ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು. ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಧವಳದ ಅಧ್ಯಕ್ಷ ಸುದರ್ಶನ ಜೈನ್, ಉಪಾಧ್ಯಕ್ಷ ಜಿನೇಂದ್ರ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿಯವರು ಭದ್ರತಾ ಕೊಠಡಿಯ ಕೀ ಹಸ್ತಾಂತರ ಮಾಡಿ ಮಾತನಾಡಿದರು. ಜೈನ ಹಿತದೊಡನೆ ಸರ್ವರ ಹಿತವನ್ನು ಸೊಸಾಯಿಟಿ ಸಾಧಿಸಲಿ ಎಂದು ಅವರು ಹಾರೈಸಿದರು.
ಶಾಸಕ ವೇದವ್ಯಾಸ ಕಾಮತ್ ಅವರು ಬ್ಯಾಂಕಿನ ಅತ್ಯಾಧುನಿಕ ಕಂಪ್ಯೂಟರ್ ಜಾಲವನ್ನು ಉದ್ಘಾಟನೆ ಮಾಡಿದರು. ಮಾತನಾಡಿದ ಅವರು ಇಲ್ಲಿ ಧವಳ ಆರಂಭಿಸಿ ಐದು ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಅದ್ಭುತ. ಮೊದಲ ದಿನವೇ ಬ್ಯಾಂಕು ಎರಡು ಕೋಟಿ ರೂಪಾಯಿ ಠೇವಣಿ ಒಟ್ಟು ಮಾಡಿದೆ ಎಂದರೆ ಇದು ಬೆಳಗುವ ಬ್ಯಾಂಕ್ ಎಂಬುದರಲ್ಲಿ ಅನುಮಾನವೇ ಇಲ್ಲ. ದೇಶಕ್ಕೆ ಅದ್ಭುತ ಬ್ಯಾಂಕುಗಳನ್ನು ನೀಡಿದ ಸ್ಥಳ ಈ ತುಳುನಾಡು. ಇದು ಅದರ ಹೊಸ ಸಂತಾನ. ರಾಜೇಂದ್ರ ಕುಮಾರ್ ಅವರ ಅನುಭವ ಧವಳಕ್ಕೆ ಸಿಗಲಿ ಎಂದು ಅವರು ಹಾರೈಸಿದರು.