ದಕ್ಷಿಣ ಕನ್ನಡ ಜಿಲ್ಲೆಯ ಫಿಸಿಯೋತೆರಪಿ ಶಿಕ್ಷಕರ ಸಂಘದವರು ಮಾರ್ಚ್ 25ರಂದು ಮಂಗಳೂರಿನ ಟಿಎಂಎಪಿ ಕನ್ವೆನ್ಶನ್ ಕೇಂದ್ರದಲ್ಲಿ ಮಂಗಳೂರು ಫಿಸಿಯೋಕಾನ್ 2022 ಎಂಬ ಅಂತರರಾಷ್ಟ್ರೀಯ ಫಿಸಿಯೋತೆರಪಿ ಸಮಾವೇಶವನ್ನು ನಡೆಸಿದರು. ಕೋವಿಡ್‌ ಬಳಿಕ ಬದುಕನ್ನು ಸುಸ್ಥಿತಿಗೆ ತರುವುದು ಎನ್ನುವುದು ವಿಚಾರ ಸಂಕಿರಣದ ವಿಷಯವಾಗಿತ್ತು.

ಭಾರತೀಯ ಫಿಸಿಯೋತೆರಪಿ ಒಕ್ಕೂಟದ ಅಧ್ಯಕ್ಷರಾದ ಡಾ. ಯು. ಟಿ. ಇಫ್ತಿಕಾರ್ ಆಲಿಯವರು ಸಮಾವೇಶದ ಸಂಘಟನಾ ಅಧ್ಯಕ್ಷರಾಗಿ ಅದ್ದೂರಿ ವ್ಯವಸ್ಥೆ ಮಾಡಿದ್ದರು.

ವೇದಿಕೆಯಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕದ ಆರೋಗ್ಯ ಮಂತ್ರಿ ಡಾ. ಕೆ. ಸುಧಾಕರ್ ಮತ್ತಿತರರು.

ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಅವರು ಮಾತನಾಡಿ ಫಿಸಿಯೋತೆರಪಿ ತಜ್ಞರು ಬದುಕನ್ನು ಉತ್ತಮ ಗುಣಮಟ್ಟದಲ್ಲಿ ಮುಂದುವರಿಯಲು ಸಹಕಾರಿ. ಉತ್ತಮ ಆರೋಗ್ಯ ಇರಲು ಫಿಸಿಯೋತೆರಪಿ ತಜ್ಞರ ಸಹಕಾರ ಬೇಕು. ಅವರ ಮಾರ್ಗದರ್ಶನದಲ್ಲಿ ನಡೆದರೆ ಪ್ರಾಣಾಯಾಮ ಮೊದಲಾದವುಗಳ ಮೂಲಕ ಔಷಧಿ ಚಿಕಿತ್ಸೆಯಿಂದ ದೂರ ಇರಬಹುದು. ನಿಮ್ಹಾನ್ಸ್ ಮೂಲಕ ಭಾರತದಲ್ಲಿ ಮಾನಸಿಕ ದೈಹಿಕ ಆರೋಗ್ಯಕ್ಕೆ ಒತ್ತು ನೀಡಿ ಕಾರ್ಯ ಎಸಗುತ್ತಿದೆ ಕರ್ನಾಟಕ ಎಂದು ಸಚಿವ ಸುಧಾಕರ್ ತಿಳಿಸಿದರು.

ಮಂಗಳೂರಿನ 20 ಸೇರಿ ರಾಜ್ಯದಲ್ಲಿ 75ರಷ್ಟು ಫಿಸಿಯೋತೆರಪಿ ಕಾಲೇಜುಗಳು ಕರ್ನಾಟಕದಲ್ಲಿ ಇವೆ. ಔಷಧೀಯ ವೈದ್ಯಕೀಯ ಸಂಸ್ಥೆಗಳ ವಿಷಯದಲ್ಲೂ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಸಾವಿರಾರು ವರುಷಗಳ ಭಾರತೀಯರ ಫಿಸಿಯೋತೆರಪಿ ಜ್ಞಾನ ಇಂದು ವಿಶ್ವ ಮಾನ್ಯತೆ ಪಡೆದಿದೆ. ಅಮೆರಿಕದಂಥ ದೇಶಗಳಲ್ಲಿ ಫಿಸಿಯೋತೆರಪಿಸ್ಟ್‌ಗಳು ಎಲ್ಲೆಡೆ ಲಭ್ಯವಿದ್ದರೆ, ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರ ಅಂಥ ಸೇವೆ ಇದೆ. ಇದು ದೇಶದ ಮೂಲೆ ಮೂಲೆಗೆ ಹರಡಬೇಕು. ಆರೋಗ್ಯ ಭಾಗ್ಯದ ಸಮಾಜ ನಮ್ಮದಾಗಬೇಕು ಎಂದು ಡಾ. ಸುಧಾಕರ್ ತಿಳಿಸಿದರು.

ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ಮಾತನಾಡಿ ಹತ್ತು ವರುಷಗಳ ಹಿಂದೆ ಒಂದು ವ್ಯಾಯಾಮವನ್ನು ಫಿಸಿಯೋತೆರಪಿ ಸಲಹೆ ಮೇಲೆ ಕಷ್ಟದಿಂದ ಕಲಿತೆ. ಮುಂದೆ ಅದರಿಂದ ನನ್ನ ದೈಹಿಕ ತೊಂದರೆಗಳು ದೂರವಾದವು. ದೈಹಿಕ ವ್ಯಾಯಾಮಗಳು ಗುಣಕಾರಿ ಎಂಬುದು ನನಗೆ ಮನನವಾಯಿತು ಎಂದು ಹೇಳಿದರು.

ಮಂಗಳೂರು ಫಿಸಿಯೋತೆರಪಿಸ್ಟ್‌ಗಳಿಗೆ ಉತ್ತಮ ಮಾರುಕಟ್ಟೆಯಾಗಿದೆ. ಇಲ್ಲಿ ಸಾಕಷ್ಟು ‌ವೈದ್ಯಕೀಯ ಕಾಲೇಜುಗಳು ಇವೆ ಎಂದರೆ ಇದು ಜ್ಞಾನದ ನೆಲೆಯಾಗಿದೆ. ಕೇರಳವು ಶಿಕ್ಷಣದಲ್ಲಿ ದೇಶದಲ್ಲೇ ಮುಂದಿದ್ದರೂ ವೈದ್ಯಕೀಯ ಮತ್ತು ಫಿಸಿಯೋತೆರಪಿ ಕಲಿಯಲು ಕೇರಳದವರು ಮಂಗಳೂರಿಗೆ ಬರುತ್ತಿದ್ದಾರೆ. ಜೀವನದ ಗುಣಮಟ್ಟವು ನಮ್ಮ ಕಲಿಕೆ, ನಡೆಗಳನ್ನು ಅವಲಂಬಿಸಿದೆ ಎಂದು ರಾಜ್ಯಪಾಲರು ಹೇಳಿದರು.

ಜ್ಞಾನದತ್ತ ಬೆನ್ನು ತೋರಿಸದೆ ಕಲಿಯುವ ಹುರುಪಿನ ಮಂದಿ ಇಲ್ಲಿ ಸೇರಿದ್ದಾರೆ. ಹೆಣ್ಣು ಮಕ್ಕಳು ಇಲ್ಲೂ ಮುಂದಿದ್ದಾರೆ. ಆದರೆ ವೇದಿಕೆ ಮೇಲೆ ಗಂಡಸರೇ ಇದ್ದಾರೆ. ಚಿನ್ನದ ಪದಕಗಳ ಸಂಖ್ಯೆ ಮತ್ತು ಪದಕ ವಿಜೇತರು ಎಂದಾಗಲೂ ಹೆಣ್ಣು ಮಕ್ಕಳೇ ಮುಂದಿದ್ದಾರೆ. ವಯನಾಡಿನಲ್ಲಿ 23 ಚಿನ್ನದ ಪದಕ ವಿಜೇತರಲ್ಲಿ ಒಬ್ಬರು ಮಾತ್ರ ಪುರುಷ, ಬೇರೆಲ್ಲ ಹೆಣ್ಣು ಮಕ್ಕಳೇ ಆಗಿದ್ದಾರೆ ಎಂಬುದನ್ನು ನಾನೇ ಕಣ್ಣಾರೆ ಕಂಡು ಅಚ್ಚರಿಗೊಂಡೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದರು.

ಜ್ಞಾನದ ಲೋಕ ಎಂದರೆ ಅಲ್ಲಿ ಮೊದಲ ಸ್ಥಾನದಲ್ಲಿ ಹೆಣ್ಣುಗಳು ಇದ್ದಾರೆ ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ನಮ್ಮೂರ ಜನ ಕೃಷಿಯಲ್ಲಿ ಈಡುಗೊಂಡಿದ್ದಾರೆ. ಅಲ್ಲಿ ನೋಡಿದರೂ ಹೆಣ್ಣಿನ ದುಡಿಮೆಯೇ ಅಧಿಕ. ಈಗ ಅಲ್ಲೆಲ್ಲ ಸೈಕಲೇರಿ ದೂರದ ಶಾಲೆ ಕಾಲೇಜುಗಳಿಗೆ ಹೋಗುವ ಹೆಣ್ಣುಗಳನ್ನು ನೋಡುತ್ತಿದ್ದೇನೆ. ಅವರ ಜ್ಞಾನ ದಾಹಕ್ಕೆ ಕಲ್ಲು ಹಾಕಬೇಡಿ ಎಂದು ರಾಜ್ಯಪಾಲರು ವಿವರಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿಯ ಉಪಕುಲಪತಿ ಡಾ. ಎಂ. ಕೆ. ರಮೇಶ್, ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಗಳ ಡಾ. ಎಚ್. ಎಸ್. ಬಲ್ಲಾಳ್ ಸಹ ಮಾತನಾಡಿದರು.