ಮಂಗಳೂರು: ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ 26 ನೇ ವರ್ಷದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀ ಐವನ್ ಡಿ ಸೋಜರವರು ರಿಕ್ಷಾಚಾಲಕರಿಗೆ ನೀಡಲಾಗುವ ಯೋಜನೆಗಳು ಮತ್ತು ಪಿಂಚಣಿ ಯೋಜನೆಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ, ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಪ್ರತ್ಯೇಕವಾದ ವಿಭಾಗವೊಂದನ್ನು ತೆರೆದು, ಪ್ರತಿ ತಾಲೂಕುಗಳಲ್ಲಿ ಅಸಂಘಟಿತ ವಾಹನ ಚಾಲಕರಿಗೆ ನೆರವಾಗುವಂತೆ ಕಾರ್ಮಿಕ ಅಧಿಕಾರಿಯೊಂದನ್ನು ನೇಮಿಸಬೇಕೆಂದು ಮತ್ತು ರಿಕ್ಷಾ ಚಾಲಕರ ಸಾಮಾಜಿಕ ಮತ್ತು ಶೈಕ್ಷಣಿಕ  ಚಟುವಟಿಕೆಗಳ ಕಾರ್ಯ ನಿರ್ವಹಣೆಗೆ ನೆರವಾಗಲು, ಪ್ರತಿ ತಾಲೂಕು ಮಟ್ಟದಲ್ಲಿ ರಿಕ್ಷಾ ಭವನಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರಾರಂಭಿಸಲು ರಾಜ್ಯ ಸರಕಾರ ಅನುಮತಿ ನೀಡಬೇಕೆಂದು ಐವನ್ ಡಿ ಸೋಜರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಿಳಿಸಿದರು. 

ವಾರ್ಷಿಕ ಮಹಾಸಭೆಯಲ್ಲಿ ಸತತ 26ನೇ ವರ್ಷಗಳ ಅಧ್ಯಕ್ಷರಾಗಿ ಶ್ರೀ ಐವನ್ ಡಿ ಸೋಜರವರು ಪುನರ್ ಆಯ್ಕೆಗೊಂಡು ಮಾತನಾಡುತ್ತಿದ್ದರು. ಮಹಾಸಭೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಸೀತಾರಾಂ ಶೆಟ್ಟಿ, ಗಣೇಶ್ ಉಳ್ಳಾಲ್, ಕಾರ್ಯದರ್ಶಿ ಶೇಖರ್ ದೇರಳಕಟ್ಟೆ, ಜೊತೆ ಕಾರ್ಯದರ್ಶಿ ರಾಜೇಶ್ ಪಳ್ಳಕೆರೆ, ಕೋಶಾಧಿಕಾರಿ ವಿಲ್ಫ್ರೆಡ್ ಫೆರ್ನಾಂಡಿಸ್, ಲೂವಿಸ್ ಡಿ ಸೋಜ, ಅನಿಲ್ ಲೋಬೊ ಮತ್ತು 12 ಮಂದಿಯ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಲಾಯಿತು. 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂತೋಷ್‍ರವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ರಾಜೇಶ್ ಸ್ವಾಗತಿಸಿದರು, ವಸಂತ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿ ವಂದಾನರ್ಪಣೆಗೈದರು.