ಉಜಿರೆ: ಆತ್ಮನಿಗೆ ಸಾವಿಲ್ಲ. ದೇಹಕ್ಕೆ ಮಾತ್ರ ಸಾವು. ನಾವು ಅಂಗಿ ಬದಲಾಯಿಸಿದಂತೆ ಆತ್ಮನು ಪಾಪ-ಪುಣ್ಯಕ್ಕೆ ಅನುಗುಣವಾಗಿ ಅನೇಕ ಭವಗಳನ್ನು ದಾಟುತ್ತಾನೆ. ನಮ್ಮ ಮತಿ ಅಂದರೆ ಮನಸ್ಸು ಇದ್ದಂತೆ ನಮ್ಮ ಸ್ಥಿತಿ-ಗತಿಯೂ ಇರುತ್ತದೆ ಎಂದು ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

    ಅವರು ಬುಧವಾರ ಮೂಡಬಿದ್ರೆಯಲ್ಲಿ ಲೆಪ್ಪದ ಬಸದಿಯಲ್ಲಿ ಬುಧವಾರಇತ್ತೀಚೆಗೆ ನಿಧನರಾದ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮರ ಆತ್ಮಶಾಂತಿಗಾಗಿ ನಡೆದ 216 ಕಲಶ ಅಭಿಷೇಕದ ಬಳಿಕ ಶಾಸ್ತ್ರದಾನ ಕೃತಿ “ದ್ರವ್ಯ ಸಂಗ್ರಹ” ಬಿಡುಗಡೆಗೊಳಿಸಿ ಮಾತನಾಡಿದರು.

    ಡಾ. ಬಿ. ಯಶೋವರ್ಮರು ನೂರು ವರ್ಷಗಳಲ್ಲಿ ಮಾಡಬೇಕಾದ ಸಾಧನೆಯನ್ನು 65 ವರ್ಷಗಳಲ್ಲೆ ಮಾಡಿದ್ದಾರೆ. ಅವರೊಬ್ಬ ಯಶಸ್ವಿ ನಾಯಕ, ಸ್ನೇಹಜೀವಿ, ಶಾಂತ ಸ್ವಭಾವದವರಾಗಿ ಸ್ಥಿತ ಪ್ರಜ್ಞೆ ಹೊಂದಿದ್ದರು. ಜೈನಧರ್ಮದ ಆಳವಾದ ಅಧ್ಯಯನ ಮಾಡಿದ ಅವರು ಉತ್ತಮ ವಾಗ್ಮಿಯೂಆಗಿದ್ದರು. ಮೂಡಬಿದ್ರೆ ಜೈನ ಮಠದಲ್ಲಿ ಜೈನಧರ್ಮದ ಶಾಸನಗಳ ಅಧ್ಯಯನ, ಗ್ರಂಥ ಭಂಡಾರ ಮತ್ತು ಸಂಶೋಧನೆಗೆ ಸಹಕಾರ ನೀಡಿದ್ದಾರೆಎಂದು ಶ್ಲಾಘಿಸಿದರು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ರಂಗ ಕಲೆ ಮೊದಲಾದ ಎಲ್ಲಾ ಪ್ರಕಾರಗಳಲ್ಲಿಯೂ ಆಸಕ್ತರು ಹಾಗೂ ಪರಿಣತರಾಗಿದ್ದರು. ಸ್ವಾಧ್ಯಾಯ, ವ್ರತ-ನಿಯಮಗಳ ಪಾಲನೆಯಿಂದ ತಮ್ಮ ಜೀವನ ಪಾವನ ಮಾಡಿದ್ದಾರೆಎಂದರು.

    ಶಾಸ್ತ್ರದಾನ ಕೃತಿಯನ್ನು ಎಲ್ಲರಿಗೂ ಉಚಿತವಾಗಿ ವಿತರಿಸಲಾಯಿತು.

    ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಭಾರತ ಪವಿತ್ರದೇಶವಾಗಿದ್ದು ಜಿನಾಲಯಗಳು, ದೇವಾಲಯಗಳು, ಭೂತಾಲಯಗಳು ನಮಗೆ ಮಾನಸಿಕ ಶಾಂತಿ, ನೆಮ್ಮದಿ ನೀಡುತ್ತವೆ. ಜೈನಧರ್ಮದ ಆಚಾರ-ವಿಚಾರಗಳು ಶ್ರೇಷ್ಠವಾಗಿವೆ ಎಂದರು.

    ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್, ಡಿ. ಶ್ರೇಯಸ್‍ಕುಮಾರ್, ನಿಶ್ಚಲ್‍ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಡಾ. ಮೋಹನ್ ಆಳ್ವ, ಕೆ. ರಾಜವರ್ಮ ಬಳ್ಳಾಲ್, ಕೆ. ಜಯವರ್ಮ ರಾಜ ಬಳ್ಳಾಲ್, ಧಾರವಾಡದ ಡಾ. ನಿರಂಜನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

    ಒಂಭತ್ತು ಬಾರಿ ಪಂಚ ನಮಸ್ಕಾರ ಮಂತ್ರ ಪಠಣ ಮಾಡಲಾಯಿತು.