ಚಿಕ್ಕಮಗಳೂರು, ಫೆ.28:- ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರದ ನೊಂದಣಿಯನ್ನು ಆರಂಭಿಸಬೇಕು ಎಂದು ಅಜ್ಜಂಪುರ ಹಾಗೂ ಕಡೂರು ತಾಲ್ಲೂಕಿನ ರೈತ ಬಾಂಧವರು ಜಿಲ್ಲಾಡಳಿತ ವನ್ನು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಸೋಮವಾರ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಅವರ ನೇತೃತ್ವದಲ್ಲಿ ಅಜ್ಜಂಪುರ, ಕಡೂರು ತಾಲ್ಲೂಕಿನ ರೈತರು ಈ ಸಂಬಂಧ ಮನವಿ ಸಲ್ಲಿಸಿ ಆಗ್ರಹಿಸಿದರು.
ತಾಲ್ಲೂಕಿನ ರೈತರಿಗೆ ಕಳೆದ ಎರಡು ತಿಂಗಳಿನಿಂದಲೂ ಯಾವುದೇ ನೊಂದಣಿಯನ್ನು ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ನೀಡಿರುವ ಸಣ್ಣ ರೈತರಿಗೆ ಶೇ.10ರ ನೋಂದಣಿಯು ಸಹ ಆಗಿರುವುದಿಲ್ಲ ಇದರಿಂದ ರೈತರಿಗೆ ತೀವ್ರ ಸಮಸ್ಯೆ ಉದ್ಬವಿಸಿದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರದ ನೊಂದಣಿ ಆರಂಭಿಸಿ ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಕೋರಲಾಗಿದ್ದು ಸಮಸ್ಯೆ ಆಲಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ, ರಾಜ್ಯ ವರಿಷ್ಟ ಕೃಷ್ಣೇಗೌಡ, ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ಎಂ.ಬಿ.ಚಂದ್ರಶೇಖರ್, ಕಡೂರು ತಾಲ್ಲೂಕು ಅಧ್ಯಕ್ಷ ಕೆ.ಟಿ.ಆನಂದ್, ಅಜ್ಜಂಪುರ ತಾಲ್ಲೂಕು ಅಧ್ಯಕ್ಷ ಅರುಣ್‍ಕುಮಾರ್ ಮತ್ತಿತರರು ಹಾಜರಿದ್ದರು.