ಮುಂಬಯಿ, ಸೆ.12: ಮಾಣಿಕ್ಯ ಪ್ರಕಾಶನ ಸಂಸ್ಥೆ ಹಾಸನ, ಕರ್ನಾಟಕ  ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಹಾಗೂ ಅಂತರ್ ರಾಜ್ಯಗಳ ಸಾಹಿತ್ಯಿಕ ಕ್ಷೇತ್ರದ ಕೊಡ ಮಾಡುವ 2023ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಸಂಸ್ಥೆಯ ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರಕ್ಕೆ ಮುಂಬಯಿ ಅಲ್ಲಿನ ಹೆಸರಾಂತ ಲೇಖಕಿ ಅನಿತಾ ಪಿ. ತಾಕೊಡೆ ಅವರ `ನಿವಾಳಿಸಿ ಬಿಟ್ಟ ಕೋಳಿ' ಕಥಾ ಸಂಕಲನ ಆಯ್ಕೆಗೊಳಿಸಲಾಗಿದೆ ಎಂದು ಎಂದು ಮಾಣಿಕ್ಯ ಪ್ರಕಾಶನ ಹಾಸನ ಇದರ ಪ್ರಕಾಶಕ ದೀಪ ಉಪ್ಪಾರ್ ಹಾಗೂ  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಜ್ಯ ಹಾಗೂ ಅಂತರ್ ರಾಜ್ಯಗಳ ಸಾಹಿತ್ಯಿಕ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಅವಿರತವಾಗಿ ಕಾರ್ಯೋನ್ಮುಖ ವಾಗಿ ಸಾಧನೆ ಗೈಯುತ್ತಿರುವ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದು, ಸದರಿ ದತ್ತಿ ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ  ರೂಪಾಯಿ 2,000 ನಗದು ಬಹುಮಾನ ಒಳಗೊಂಡಿದೆ. 2023ರ ಸೆ.24ರ ಭಾನುವಾರ ಹಾಸನ ಇಲ್ಲಿನ ಸಂಸ್ಕøತ ಭವನದಲ್ಲಿ ಹಮ್ಮಿಕೊಂಡಿರುವ 7ನೇ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಮಾಣಿಕ್ಯ ಪ್ರಕಾಶನ ತಿಳಿಸಿದೆ.

ಅನಿತಾ ಪೂಜಾರಿ ಅವರು ಕವಿಯಾಗಿ, ಲೇಖಕರಾಗಿ, ಕಥೆಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ಇವರು  ಕೆಎಸ್‍ಒಯು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಸ್ವರ್ಣ ಪದಕಕ್ಕೆ ಭಾಜನರಾಗಿದ್ದಾರೆ. ಇದೀಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ| ಜಿ. ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ `ಮುಂಬಯಿ ಬಿಲ್ಲವರು ಸಾಂಸ್ಕೃತಿಕ ಅಧ್ಯಯನ' ವಿಷಯದ ಕುರಿತು ಪಿಎಚ್.ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ.

ಈಗಾಗಲೇ ಅನಿತಾ ಅವರ ಒಟ್ಟು ಏಳು ಕೃತಿಗಳು ಲೋಕಾರ್ಪಣೆಗೊಂಡಿವೆ. ಇವರ ಕವನ ಸಂಕಲನ ಅಂತರಂಗದ ಮೃದಂಗದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬೈ ವತಿಯಿಂದ ಶ್ರೀಮತಿ ಸುಶೀಲಾ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಜನಸ್ಪಂದನ ಟ್ರಸ್ಟ್ (ರಿ.) ಸುವ್ವಿ ಪಬ್ಲಿಕೇಷನ್ಸ್ ಶಿಕಾರಿಪುರ ಕೊಡಮಾಡುವ ಅಲ್ಲಮ ಸಾಹಿತ್ಯ ಪ್ರಶಸ್ತಿ, ಮೋಹನ ತರಂಗ ಈ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ನಗದು ಪುರಸ್ಕಾರ ಸೇರಿದಂತೆ ಸಾಹಿತ್ಯ  ಕ್ಷೇತ್ರದಲ್ಲಿ ಇವರ ಸಾಧನೆಗೆ ಹತ್ತು ಹಲವಾರು ಪ್ರಶಸ್ತಿ, ಪ್ರತಿಷ್ಠಿತ ಗೌರವಗಳು ಲಭಿಸಿವೆ. 2019ರಲ್ಲಿ ಮೈಸೂರು ಅರಮನೆಯಲ್ಲಿ ನಡೆದ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಗೌರವ ಪುರಸ್ಕಾರಕ್ಕೆ ಪಾತ್ರರಾಗಿದಿದ್ದಾರೆ.

ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಇವರ ಕತೆ, ಭಾವಗೀತೆ ಮತ್ತು ಕವನಗಳು ಪ್ರಸಾರಗೊಂಡಿವೆ. ಇವರು ಪ್ರಸ್ತುತ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.)ಇದರ ಕಾರ್ಯಕಾರಿ ಸಮಿತಿಯ ಸಕ್ರೀಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.