ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ ಇತ್ಯಾದಿ ಕ್ಷೇತ್ರಕ್ಕೆ ಅಪಾರ ದೇಣಿಗೆ ನೀಡಿಯೂ ಕೊಂಕಣಿ ಭಾಷಾ ಸಮೂಹದಿಂದ ಗುರುತಿಸಲ್ಪಡದ ಅಪಾರ ಜನರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆಗೆ ಹಲವಾರು ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ. ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ  ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಪುರಸ್ಕಾರ ವಂಚಿತ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸ ಬೇಕೆನ್ನುವ 

ಉದ್ದೇಶದಿಂದ ಹುಬ್ಬಳ್ಳಿಯಿಂದ ಪ್ರಕಟಗೊಳ್ಳುತ್ತಾ ಇದೀಗ ಯಶಸ್ವಿಯಾಗಿ ನಿಯಮಿತ ಪ್ರಕಟಣೆಯ 34ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವ "ಸರಸ್ವತಿ ಪ್ರಭಾ" ಕೊಂಕಣಿ ಮಾಸಿಕವು ಈ ವರ್ಷದಿಂದ ಪ್ರತಿ ವರ್ಷ "ಸರಸ್ವತಿ ಪ್ರಭಾ ಪುರಸ್ಕಾರ" ನೀಡಬೇಕೆಂದು ನಿರ್ಣಯಿಸಿದೆ. 

ಡಾ. ಮೋಹನ ಜಿ. ಶೆಣೈ

ಅನಿಲ ಪೈ

2022ನೇ ಪ್ರಥಮ ವರ್ಷದಲ್ಲಿ 25ಕ್ಕಿಂತ ಅಧಿಕ ಸಾಹಿತ್ಯ ಕೃತಿಗಳನ್ನು ಬರೆದ (ಅವುಗಳಲ್ಲಿ 6 ಕೊಂಕಣಿ ಕೃತಿಗಳು) ಬೆಂಗಳೂರಿನ ಕೊಂಕಣಿ ಸಹಿತ ಕನ್ನಡ, ಇಂಗ್ಲೀಷ್, ಹಾಗೂ ಹಿಂದಿ ಸೇರಿ  ಚತುರ್ಭಾಷಾ ಸಾಹಿತಿ 80ಕ್ಕಿಂತ ಅಧಿಕ ವಯಸ್ಸಾದ ವಯೋವೃದ್ಧ ಡಾ. ಮೋಹನ ಜಿ. ಶೆಣೈ ಮತ್ತು ಕೊಂಕಣಿ ರಂಗಕಲೆಗೆ ಅಪಾರ ಸೇವೆ ಸಲ್ಲಿಸಿದ ಹಾಗೂ  ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ 30ಕ್ಕಿಂತ ಅಧಿಕ ನಾಟಕಗಳನ್ನು ಬರೆದ 75 ವರ್ಷ ವಯಸ್ಸಿನ ಶಿರಸಿಯ  ಅನಿಲ ಪೈ ಇವರಿಗೆ  "ಸರಸ್ವತಿ ಪ್ರಭಾ ಪುರಸ್ಕಾರ -2022" ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಪ್ರಶಸ್ತಿ ವಿಜೇತರಿಗೆ ಪತ್ರಿಕೆಯ ವತಿಯಿಂದ ಶಾಲು, ಸ್ಮರಣಿಕೆ, ಹಾರ, ಸನ್ಮಾನ ಪತ್ರ, ಫಲತಾಂಬೂಲ ಹಾಗೂ ರೂ. 2022/-  ನಗದು ಹಣದೊಂದಿಗೆ ಸದ್ಯದಲ್ಲಿಯೇ ಅವರವರ ಮನೆಗಳಿಗೆ ಹೋಗಿ ಸತ್ಕರಿಸಿ ಬರಲಾಗುವುದು ಎಂದು ಹುಬ್ಬಳ್ಳಿಯ  ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕ ಆರಗೋಡು ಸುರೇಶ ಶೆಣೈ ಹಾಗೂ ಪತ್ರಿಕೆಯ ಉತ್ತರ ಕನ್ನಡ ಜಿಲ್ಲೆಯ ಗೌರವ ಸಂಘಟನಾ ಪ್ರತಿನಿಧಿಗಳಾದ ಡಾ. ಅರವಿಂದ ಶ್ಯಾನಭಾಗ, ಬಾಳೇರಿಯವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.