ಮಂಗಳೂರು, ಮೇ 10: ನಕಲಿ ಜಾತಿ ಪತ್ರ ನೀಡುವುದಕ್ಕೆ ಕೂಡಲೆ ತಡೆ ವಿಧಿಸಬೇಕು ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘ, ದ. ಕ. ಜಿಲ್ಲೆಯ ಮೊಗೇರ ಸಂಘ ದ. ಕ.   ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಜಿಲ್ಲೆಯ ಎಲ್ಲ ತಾಲೂಕುಗಳ ಮೊಗೇರ ಸಂಘ, ಜಿಲ್ಲೆಯ ಎಲ್ಲ ತಾಲೂಕುಗಳ ದೈವಸಾನ ಸಮಿತಿ ಮೊದಲಾದವರು ಮಂಗಳೂರು ತಹಶಿಲ್ದಾರರ ಕಚೇರಿಗೆ ನಡೆದು ಬಂದು ಪ್ರತಿಭಟನೆ ನಡೆಸಿದರು.

ದಲಿತರ ಹೆಸರಿನಲ್ಲಿ ಬಲಿತರು ನಕಲಿ ಪರಿಶಿಷ್ಟ ಜಾತಿ ಪಡೆದು ಎಷ್ಟು ಕಾಲ ವಂಚಿಸುತ್ತೀರಿ? ತುಳುನಾಡಿನ ಮೂಲನಿವಾಸಿಗಳ ಮತ್ತು ಅಂಬೇಡ್ಕರ್ ಅವರ ವಾರಸುದಾರರಿಗೆ ಮೀಸಲಾತಿ ವಂಚಿಸುತ್ತಿರುವ ಕಂದಾಯ ಇಲಾಖೆಯಿಂದ ಶಾಸಕರವರೆಗೆ ಎಲ್ಲರಿಗೂ ಶಿಕ್ಷೆಯಾಗಲಿ. ದಲಿತರಿಗೆ ನ್ಯಾಯ ಸಿಗಲಿ ಮೊದಲಾದ ಘೋಷಣೆಗಳು ಮೊಳಗಿದವು.

ಅಶೋಕ ಕೊಂಚಾಡಿ, ಎಂ. ದೇವದಾಸ್, ರಮೇಶ್ ಕೋಟ್ಯಾನ್, ಅಂಗರ ಹಾರಾಡಿ, ವೆಂಕಟೇಶ ವಿಟ್ಲ, ಬಾಬು ಎರ್ನೋಡಿ ಮೊದಲಾದವರು ಉಪಸ್ಥಿತರಿದ್ದರು.