ಮಂಗಳೂರು, ಮೇ 31: ಜಾತ್ಯಾತೀತತೆ, ಸಬಲೀಕರಣ, ಮುನ್ನಡೆ ಎನ್ನುವ ಧ್ಯೇಯೋದ್ದೇಶದೊಡನೆ ಮಂಗಳೂರು ಪುರಭವನದಲ್ಲಿ ಕರ್ನಾಟಕದ ಮುಸ್ಲಿಮರ ನೋವು ನಲಿವುಗಳ ಅನಾವರಣದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶ ಯಶಸ್ವಿಯಾಗಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ ರಾಜ್ಯ ಸಮಿತಿಯ ಮುನಿರ್ ಕಾಟಿಪಳ್ಳ ಅವರು ಕಮ್ಯೂನಿಸ್ಟ್ ಪಕ್ಷ ಮುಸ್ಲಿಂ ಸಮಾವೇಶ ನಡೆಸುವುದು ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಮೋದಿಯವರು ಪ್ರಧಾನಿ ಆದ ಮೇಲೆ ಮುಸ್ಲಿಮರನ್ನು ಏಕಾಂಗಿ ಆಗಿಸುವ ಕೆಲಸವನ್ನು ಸಂಘ ಪರಿವಾರ ತೀವ್ರವಾಗಿಸಿದೆ. ಆ ನಿಟ್ಟಿನಲ್ಲಿ ಮುಸ್ಲಿಂ ಸಮಾವೇಶ ಕಾಲದ ಅಗತ್ಯವಾಗಿದೆ.
ಕೇರಳದ ಮಾಜೀ ಉನ್ನತ ಶಿಕ್ಷಣ ಸಚಿವ ಮತ್ತು ಹಾಲಿ ಕುಟ್ಟಿಕುಳಂ ಶಾಸಕರಾದ ಡಾ. ಕೆ. ಟಿ. ಜಲೀಲ್ ನೇರ ಮಾತಿನ ಮೂಲಕ ಉದ್ಘಾಟನೆ ಮಾಡಿದರು.
ಜನರ ನಂಬಿಕೆಗಳು ಹಿಂದೆ ಚರ್ಚೆಯ ವಿಷಯವಾಗಿರಲಿಲ್ಲ. ಇಂದು ಅದೇ ಕೆಲವರ ಉದ್ಯೋಗವಾಗಿದೆ. ಅಶೋಕ ಚಕ್ರವರ್ತಿಯು ಬೌದ್ಧ ಧರ್ಮ ಸ್ವೀಕರಿಸಿದ. ಮತಾಂತರ ಕಾರಣ ಆತ ಆಳಲು ಅನರ್ಹ ಎಂದು ಹೇಳಿದ್ದಿದೆ. ಅರಿವು ದೇಶದ ಗುರಿ ಆಗಿರಬೇಕಿತ್ತು. ಆದರೆ ಅರಿವುಗೇಡಿತನ ಇಂದು ದೇಶದ ಹೆಗ್ಗುರುತಾಗುತ್ತಿದೆ ಎಂದು ಕೆ. ಟಿ. ಜಲೀಲ್ ಹೇಳಿದರು.
ಮೊದಲ ಸ್ವಾತಂತ್ರ್ಯ ಸಮರ ಎಂಬ ಹೋರಾಟದಲ್ಲಿ ಕೊನೆಯ ಮೊಗಲ್ ದೊರೆ ಬಹದೂರ್ ಶಾ ಅನಂತರ ರಂಗೂನಿಗೆ ಗಡಿಪಾರು ಆದರು. ಮುಂದೆ ದೇಶದಲ್ಲಿ ಮುಸ್ಲಿಂ ಮುಖ್ಯತ್ವ ಕುಗ್ಗಿತು. ಮೊದಲ ಪ್ರಧಾನಿ ನೆಹರೂ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಭಾಗವಹಿಸಿದಾಗ ಖಂಡಿಸಿದವರು. ಆದರೆ ಇಂದಿನ ರಾಜಕೀಯವು ಅಂಧ ಧಾರ್ಮಿಕ ಬಾಹುಬಂಧನದಲ್ಲಿದೆ. ಬಿಜೆಪಿಯ ವಾಜಪೇಯಿ ಗುಜರಾತ್ ಮುಸ್ಲಿಂ ಕೊಲೆಗಳನ್ನು ಖಂಡಿಸಿದ್ದರು. ಇಂದು ಅಂಥ ಸಾಮಾನ್ಯ ಸೌಹಾರ್ದದ ರಾಜಕೀಯವೂ ಉಳಿದಿಲ್ಲ ಎಂದು ಶಾಸಕ ಜಲೀಲ್ ತಿಳಿಸಿದರು.
ಇಂದಿನ ಬಿಜೆಪಿಯು ಎಲ್ಲ ಕಡೆ ಹಿಟ್ಲರ್‌ನನ್ನು ಅನುಸರಿಸುತ್ತಿದೆ. ಒಂದು ಸಮುದಾಯವನ್ನು ಸಂಪೂರ್ಣವಾಗಿ ಕೀಳರಿಮೆಗೆ ತಳ್ಳುವ ಕೆಲಸದಲ್ಲಿ ತೊಡಗಿಕೊಂಡಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಬೌದ್ಧಿಕತೆಯು ಪುರೋಗತಿಯ ಬದಲು ತಿರೋಗತಿಯತ್ತ ಸಾಗಿದೆ. ನೆಹರೂರು ಎಲ್ಲ ಜನಸಮುದಾಯ ಈ ದೇಶದ ಆಸ್ತಿ ಎಂದರು. ಈಗ ಆಳುವವರು ಕೆಲವು ಧರ್ಮಗಳನ್ನು, ಜಾತಿಗಳನ್ನು ನಿರಂತರವಾಗಿ ತುಳಿಯುತ್ತಿದೆ. ಮೋದಿ ಮತ್ತು ಅಮಿತ್ ಶಾ ಈ ದೇಶದ ನಿಜ ಚರಿತ್ರೆಯನ್ನು ಓದಬೇಕು. ಮತಾಧಾರಿತ ದೇಶಗಳು ಎಷ್ಟು ಸಿರಿವಂತವಾದರೂ ಮಾನವೀಯ ನೆಲೆಯಲ್ಲಿ ಕುಸಿಯುತ್ತವೆ. ಇದು ದೇಶವನ್ನು ದುರ್ಬಲ ಗೊಳಿಸುತ್ತದೆ. ಬೀಫ್ ಹೆಸರಿನಲ್ಲಿ ದೇಶದಲ್ಲಿ ನೂರಕ್ಕೂ ಹೆಚ್ಚು ಜನರನ್ನು ನಡು ರಸ್ತೆಯಲ್ಲಿ ಕೊಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ತನ್ನ ಮೂಲ ತತ್ವ ಕಳೆದುಕೊಂಡಿದೆ. ಭಾರತವು ಹಿಂದುತ್ವ ಮುಂದಿಟ್ಟು ಸಾಗಿದರೆ ಭಾರತವು ಜಾಗತಿಕವಾಗಿ ಹಿಂದುಳಿಯುವುದನ್ನು ತಡೆಯಲಾಗದು. ಬಾಬರಿ ಮಸೀದಿ ಎಂದರು. ಬಿಟ್ಟುಕೊಟ್ಟಿವೆ. ಈಗ ವಾರಣಾಸಿ, ಮಥುರಾ ಎಂದು ಕಾಲು ಕೆರೆದು ಜಗಳ ಹುಟ್ಟು ಹಾಕುತ್ತಿರುವ ಸಂಘ ಪರಿವಾರ, ಬಿಜೆಪಿ ಅಭಿವೃದ್ಧಿ ಮರೆತು, ಸಂಸ್ಕಾರರಹಿತವಾಗುತ್ತಿದೆ. ಮೋದಿ ನಡೆ ಪ್ರಶ್ನಿಸದಿದ್ದರೆ ದೇಶ ಕತ್ತಲೆಯತ್ತ ಸಾಗುತ್ತದೆ; ಅಫ್ಘಾನಿಸ್ತಾನ ಆಗುತ್ತದೆ ಎಂದು ಕೆ. ಟಿ. ಜಲೀಲ್ ಹೇಳಿದರು.
ಉದ್ಘಾಟನಾ ಗೋಷ್ಠಿಯಲ್ಲಿ ಡಿಎಸ್‌ಎಸ್‌ನ ಮಾವಳ್ಳಿ ಶಂಕರ್, ಸಾಹಿತಿ ಡಾ. ಕೆ. ಶರೀಫಾ, ಸಿಪಿಎಂನ ಯು. ಬಸವರಾಜು, ಯಾದವ ಶೆಟ್ಟಿ ಮಾತನಾಡಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಸಯ್ಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು.
ಅಕ್ರಂ ಪಾಶಾ, ಕೆ. ಎಸ್. ವರಲಕ್ಷ್ಮಿ, ಕೆ. ನೀಲಾ, ಡಾ. ಪ್ರಕಾಶ್, ಕಾಸಿಂ, ಜೈನುಲ್ ಮೊದಲಾದವರು ಉಪಸ್ಥಿತರಿದ್ದರು.
ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ
ಸಿಪಿಎಂ ಸಂಘಟಿಸಿದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದ ಮಧ್ಯಾಹ್ನದ ಗೋಷ್ಠಿ ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ.
ಇದರಲ್ಲಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿಯವರು ನಾನಾ ಜನ ಸಮಸ್ಯೆ ಮರೆತು ಧರ್ಮ ಸಮಸ್ಯೆ ಈ ಆಳುವವರಿಗೆ ಏಕೆ ಮುಖ್ಯವಾಗುತ್ತದೆ ಎಂದು ಪ್ರಶ್ನಿಸಬೇಕು. ಅಭಿವೃದ್ಧಿಯ ಹೆಸರು ಹೇಳಿ ಅಧಿಕಾರಕ್ಕೆ ಬಂದವರು, ಅದನ್ನು ಮರೆತು ಧರ್ಮದ ವಿಷಯ ಮಾತನಾಡಿದರೆ ಎಲ್ಲರೂ ಅದನ್ನು ಪ್ರಶ್ನಿಸಬೇಕು. ಇಲ್ಲದಿದ್ದರೆ ಕೋಮುವಾದಿಗಳು ತಮ್ಮ ಸಮಾಜ ವಿದ್ರೋಹಿ ಕೆಲಸ ನಡೆಸುತ್ತಿರುತ್ತಾರೆ ಎಂದು ಹೇಳಿದರು.
ಅನಂತರ ಮಾತನಾಡಿದವರು ರಾಜಕೀಯ ವಿಶ್ಲೇಷಕ ಡಾ. ಕೆ. ಪ್ರಕಾಶ್ ವಿಷಯ ಮಂಡಿಸಿದರು. ಆರೆಸ್ಸೆಸ್ ಈ ದೇಶವನ್ನು ಹಿಂದುತ್ವ ದೇಶ ಮಾಡಲು ಬಯಸಿದೆ. ಆರೆಸ್ಸೆಸ್ ಬಿಜೆಪಿಯನ್ನು ಮುಂದಿಟ್ಟು ಹಿಂದುತ್ವದ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವುದು ಇಂದಿನ ಸಮಸ್ಯೆ. ಅಂಬೇಡ್ಕರ್ ಸಂವಿಧಾನ ಸಹ ವಿದೇಶ ವಿದ್ಯೆಯದು. ನಮ್ಮದು ಹಿಂದೂ ಭವ್ಯ ದೇಶ ಎಂದು ಯುವಜನರಲ್ಲಿ ನಂಬಿಸುವ ಪ್ರಯತ್ನ ನಡೆದಿದೆ. ಈ ಸಾಧನೆಗೆ ಆರೆಸ್ಸೆಸ್ ಅರೆ ಮಿಲಿಟರಿ ಪಡೆ ರೂಪಿಸಿಕೊಂಡಿದೆ. ಇದನ್ನು ಜರ್ಮನ್, ಇಟೆಲಿ ನಾಜೀ ಮಾದರಿಯಲ್ಲಿ ಕಟ್ಟಲಾಗಿದೆ. ಭಾರತದ ಇಂದಿನ ಎಲ್ಲ ಸಮಸ್ಯೆಗೆ ಮುಸ್ಲಿಮರು ಕಾರಣ ಎಂದು ನಂಬಿಸುವ ಕೆಲಸ ಅದರ ಒಳ ತಂತ್ರಗಾರಿಕೆಯಾಗಿದೆ. ಹಿಂದೂ ಮತ ಎಂದೂ ಹೀಗೆ ಇರಲಿಲ್ಲವಾದರೂ ಇತ್ತು, ಇರಬೇಕು ಎಂದು ನಂಬಿಸಿ ಜನರನ್ನು ಮೋಸಮಾಡಲಾಗುತ್ತಿದೆ. ಇದು ದೇಶಕ್ಕೆ ಗಂಡಾಂತರಕಾರಿ ಎಂದು ಅವರು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಮುನೀರ್ ಕಾಟಿಪಳ್ಳ ವಹಿಸಿದ್ದರೆ, ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.
ಹುಬ್ಬಳ್ಳಿಯಲ್ಲಿ ಕಲ್ಲಂಗಡಿ ಹಣ್ಣು ಗಾಡಿ ಮುರಿದು ಹಿಂದುತ್ವ ಮೆರೆಯಿತಾದರೂ ಸರ್ವ ಜನಾಂಗದವರು ಸೇರಿ ಅದನ್ನು ಪರಿಹರಿಸಿದ್ದು ವಿಶೇಷ. ಕಲ್ಲಂಗಡಿ ಹಣ್ಣು ಮಾರುವ ನಬಿ ಸಾಬ್ ಸಹ ಹಾಜರಿದ್ದರು.
ಕೊನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಕೆ. ನೀಲಾ ವಹಿಸಿದ್ದರು.
ಮೊದಲು ವಿಷಯ ಮಂಡನೆ ಮಾಡಿದರು ಪತ್ರಕರ್ತ ಬಿ. ಎಂ. ಹನೀಫ್. ಕರ್ನಾಟಕದ ಮುಸ್ಲಿಮರ ನೋವು ನಲಿವು ಎಂದರೂ ಎಲ್ಲರೂ ನೋವು ಬಗೆಗೆ ಮಾತ್ರ ಮಾತನಾಡಿದರು. ಇಲ್ಲಿ ಬೆಳಿಗ್ಗೆ ಕುಳಿತುಕೊಳ್ಳಲು ಜಾಗವಿಲ್ಲದಂತೆ ಜನ ಸೇರಿದ್ದಾರಲ್ಲ ಅದು ನಲಿವು ತಾನೆ? ಎಷ್ಟೊಂದು ಭಾಷಾ ಸಂಸ್ಕೃತಿಯ ಮುಸ್ಲಿಮರಿದ್ದಾರೆ. ಮುಸ್ಲಿಮರು ಏಕಮುಖ ನಡೆ ಎನ್ನುವುದು ದೊಡ್ಡ ತಪ್ಪು. ಹಾಗೆಯೇ ಮದುವೆ, ಊಟ ಮೊದಲಾದವು ವೈವಿಧ್ಯತೆಯವು. ಹೀಗಿರುವಾಗ ಅವರೆಲ್ಲ ಒಂದೇ ರೀತಿ ಆಲೋಚನೆ ಮಾಡುತ್ತಾರೆ ಎಂಬುದು ಶುದ್ಧ ಸುಳ್ಳು. ಧರ್ಮ ಸಂಸ್ಕೃತಿ ಒಂದೇ ಅಲ್ಲ. ಇವೆಲ್ಲವುಗಳ ನಡುವೆ ಎಲ್ಲರ ಸ್ಥಿತಿಗತಿ ಮುಸ್ಲಿಮರದೂ ಆಗಿದೆ. ಈಗ ಕೆಲವರು ಧರ್ಮ ರಾಜಕೀಯ ನಡೆಸಿರುವುದು ನಮ್ಮನ್ನು ಬೇರ್ಪಡಿಸುವ ಸಲುವಾಗಿ. ಒಡೆದು ಆಳುವವರ ಹುನ್ನಾರಕ್ಕೆ ನಾವು ಪ್ರಾದೇಶಿಕ ಸಂಸ್ಕೃತಿಯ ಮೂಲಕ ಉತ್ತರಿಸಬೇಕು ಎಂದು ಹನೀಫ್ ಹೇಳಿದರು.
ಹೊಸಪೇಟೆಯ ಚಿಂತಕ ಬಿ. ಪೀರ್ ಭಾಷಾ ಮಾತನಾಡುತ್ತ ಕಮ್ಯೂನಿಸ್ಟ್‌ರಿಗೆ ಧಾರ್ಮಿಕ ಚಿಂತನೆ ಏಕೆ ಎಂಬ ಪ್ರಶ್ನೆ ಇದೆ. ಇಲ್ಲಿ ನಡೆದುದು ಮುಸ್ಲಿಮರ ಈಗಿನ ಪರಿಸ್ಥಿತಿ ಬಗೆಗೆ ಹಾಗೂ ಅವರೊಂದಿಗೆ ಸ್ಪಂದಿಸುವ ಮಾನವೀಯ ಸಂಬಂಧದ ಸಮಾವೇಶ ಹೊರತು ಧಾರ್ಮಿಕ ಅಲ್ಲ. ಮುಸ್ಲಿಮರು ಬಹುತೇಕ ದುಡಿಯುವ ವರ್ಗ. ಅವರನ್ನು ವರ್ಗ ಚಳವಳಿಗೆ ಸೇರಿಸಿಕೊಳ್ಳಲೇ ಬೇಕಾದ ಕಾಲಘಟ್ಟವಿದು. ಭಾರತದ ಇಂದಿನ ಪ್ರಭುತ್ವವು ಫ್ಯಾಸಿಸ್ಟ್ ಆಗಿಹೋಗಿದೆ. ಒಂದು ಜನಾಂಗವನ್ನು ದಮನಿಸುವ ಹೊಸ ಭಾರತೀಯ ಫ್ಯಾಸಿಸಂ. ಈ ತಿಳುವಳಿಕೆ ಮೇಲೆ ಮಾತ್ರ ಇದಕ್ಕೆ ಪರ್ಯಾಯ ವ್ಯವಸ್ಥೆ ಕಟ್ಟುವುದು ಸಾಧ್ಯ. ಸಂಘಿಗಳು ಪ್ರಯೋಗ ಶಾಲೆಯ ಹಂತ ಮೀರಿ ಜನರ ಮೇಲೆ ಹೇರುವ ಹಂತ ತಲುಪಿದೆ. ಇಂದಿನ ಆಳುವವರು ಗೋಳ್ವಾಲ್ಕರ್ ನೀತಿಯಂತೆ ಮುಸ್ಲಿಮರು, ಕಮ್ಯೂನಿಸ್ಟರು, ಕ್ರಿಶ್ಚಿಯನರು ಒಳಗಿನ ಶತ್ರುಗಳು ಎಂದು ಹೇಳಿರುವುದರಿಂದ ನಾವು ನಮ್ಮ ಒಗ್ಗಟ್ಟು ತೋರಿಸದೆ ಬೇರೆ ದಾರಿಯೇ ಇಲ್ಲ ಎಂದು ಪೀರ್ ಭಾಷಾ ಹೇಳಿದರು.