ಮುಂಬಯಿ : ಕಳೆದ 12 ವರ್ಷಗಳಿಂದ ಬೋರಿವಲಿ ಮತ್ತು ಪರಿಸರದಲ್ಲಿ ನೆಲೆಸಿದ ತುಳು, ಕನ್ನಡಿಗರನ್ನು ಒಂದೆಡೆ ಸೇರಿಸಿ, ತುಳು ಬಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ರೀಯಾಶೀಲವಾಗಿರುವ ತುಳು ಸಂಘ ಬೊರಿವಲಿ ಯನ್ನು ಇನ್ನೂ ಅಭಿವೃದ್ದಿಗೊಳಿಸಬೇಕಾಗಿದ್ದು ಸಂಘದ ಸದಸ್ಯರುಗಳು ಹೆಚ್ಚಿನ ಮಟ್ಟದಲ್ಲಿ ಕ್ರೀಯಾಶೀಲರಾಗಬೇಕಾಗಿದೆ. ಇದರಿಂದ ಸಂಘವು ಮುಂದೆ ಉನ್ನತ ಮಟ್ಟದ ಬೆಳವಣಿಗೆಯನ್ನು ಕಾಣಬಹುದು ಎಂದು ತುಳು ಸಂಘ ಬೊರಿವಲಿ ಇದರ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಅಭಿಪ್ರಾಯ ಪಟ್ಟರು.
ತುಳು ಸಂಘ ಬೊರಿವಲಿಯ 12ನೇ ವಾರ್ಷಿಕ ಮಹಾಸಭೆಯು ಸೆ. 25 ರಂದು ಯೋಗಿ ನಗರ ಹೌಸಿಂಗ್ ಸೊಸೈಟಿ ಹಾಲ್, ಯೋಗಿ ನಗರ ಬೊರಿವಲಿ (ಪ.) ಇಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರು ನಮ್ಮ ಸಂಘದ ಮಹಿಳಾ ವಿಭಾಗದಂತೆ ಯುವ ವಿಭಾಗವೂ ಸಂಘದ ಮುಂದಿನ ಪ್ರಗತಿಗೆ ಯೋಜನೆಯನ್ನು ಕೈಗೊಳ್ಳಲಿದ್ದು ಈ ವರ್ಷದ ಕೊನೆಯಲ್ಲಿ ಯಾ ಜನವರಿ ತಿಂಗಳಲ್ಲಿ ಕಾರ್ಯಕ್ರಮವನ್ನು ನಡೆಸಲಿದ್ದು ಇದರ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದರು.
ಸಂಘದ ವಾರ್ಷಿಕ ವರದಿಯನ್ನು ಜೊತೆ ಕಾರ್ಯದರ್ಶಿ ಈಶ್ವರ ಎಂ. ಐಲ್ ಅವರು ಮಂಡಿಸಿದರು. ವಾರ್ಷಿಕ ಲೆಕ್ಕ ಪತ್ರದ ಬಗ್ಗೆ ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ ಮಾಹಿತಿಯಿತ್ತರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹರೀಶ್ ಜಿ. ಮೈಂದನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ, ಜೊತೆ ಕೋಶಾಧಿಕಾರಿ ಸವಿತಾ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಜೋಗೇಶ್ವರಿ - ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ, ಸಂಘದ ಸ್ಥಾಪಕ ಅಧ್ಯಕ್ಷ, ವಾಸು ಪುತ್ರನ್, ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ನ್ಯಾ. ರಾಘವ ಎಂ., ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ವಿಜಯಕುಮಾರ್ ಮೂಲ್ಕಿ, ದಿವಾಕರ ಬಿ. ಕರ್ಕೇರ ಮೊದಲಾದವರು ಮಾತನಾಡುತ್ತಾ ಸಂಘದ ಬೆಳವಣಿಗೆ ಬಗ್ಗೆ ಸೂಕ್ತ ಸಲಹೆ ಸೂಚನೆಯನ್ನು ನೀಡಿದರು. ಈಶ್ವರ ಎಂ. ಐಲ್ ಅವರು ಕೊನೆಗೆ ವಂದನಾರ್ಪಣೆಗೈದರು.