ಜಾಗತಿಕ ಡಿಜಿಟಲ್ ಲೋಕದ ಸಾಧಕ ಅತುಲ್ ಹೆಗ್ಡೆ ಸ್ವರ್ಗಸ್ಥ

ಮುಂಬಯಿ, ಜು.11: ಡಿಜಿಟಲ್ ಯುಗದ ಅಪ್ರತಿಮ ಪ್ರತಿಭೆ,ಉದ್ಯಮಿ ಸೃಜನಶೀಲತೆಯ ಶಿಖರಕ್ಕೇರಿದ ಮಹಾನ್ ಸಾಧಕ ಅತುಲ್ ಹೆಗ್ಡೆ ಮಿಜಾರು (53) ಕಳೆದ ಮಂಗಳವಾರ (ಜು.07) ಹೃದಯಾಘಾತದಿಂದ ಮುಂಬಯಿಯ ಸ್ವನಿವಾಸದಲ್ಲಿ ಸ್ವರ್ಗಸ್ಥ ರಾದರು.

ಕರ್ನಾಟಕದ ಮಣ್ಣಿನಿಂದ ಬಂದು ಮುಂಬಯಿ ಕಾರ್ಯಕ್ಷೇತ್ರವಾಗಿಸಿ ಜಾಗತಿಕ ಡಿಜಿಟಲ್ ಲೋಕದಲ್ಲಿ ತಮ್ಮದೇ ಆದ ಅಸ್ಮಿತೆಯನ್ನು ರೂಪಿಸಿಕೊಂಡ ಅತುಲ್ ಹೆಗ್ಡೆ ಅವರು ಮಿಜಾರು ತೋಡಾರು ಕೇರ್ದಿಲ ಮೂಲದವರು. ಅವರೋರ್ವ ಕೇವಲ ಯಶಸ್ವಿ ಉದ್ಯಮಿಯಾಗಿರಲಿಲ್ಲ. ಬದಲಾಗಿ ಅವರು ಹೊಸ ತಲೆಮಾರಿನ ಕನಸುಗಾರರಿಗೆ ದಾರಿದೀಪವಾಗಿದ್ದ ಕಲಾತ್ಮಕ ಚಿಂತಕ. ಅತುಲ್ ಅಲ್ಪಾಯುಷಿಗಳಾದರೂ ತಮ್ಮ ಸೃಜನಶೀಲ ಕಾರ್ಯಗಳ ಮೂಲಕ ಅಜರಾಮರವಾದ ಸಾಧನೆಯನ್ನು ದಾಖಲಿಸಿದ್ದಾರೆ.

ಉತ್ತಮ ಕೌಟುಂಬಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಬೇರುಗಳು:
ಅತುಲ್ ಸುಸಂಸ್ಕೃತ ಕೌಟುಂಬಿಕ ಹಿನ್ನೆಲೆಇರುವ ಅವರ ತಂದೆ ತೋಡಾರು ಜೀವಂಧರ ಹೆಗ್ಡೆ ಅವರು ಇಂಡಿಯನ್ ಏರ್‍ಲೈನ್ಸ್‍ನಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ದಶಕಗಳ ಕಾಲ ಮುಂಬಯಿನಲ್ಲಿ ಕರ್ತವ್ಯ ನಿರ್ವಹಿಸಿ, ದೇಶದ ಸೇವೆ ಸಲ್ಲಿಸಿದವರು. ತಾಯಿ ಶಕುಂತಲಾ ಹೆಗ್ಡೆ. ಅತುಲ್ ಅವರು ಮುಂಬಯಿ ಶೋನಿಮಾ ಅವರನ್ನು ವಿವಾಹವಾಗಿದ್ದರು. ಅತುಲ್ ದಂಪತಿಗೆ ಮಕ್ಕಳಿರಲಿಲ್ಲವಾದರೂ, ತಮ್ಮ ಸಂಸ್ಥೆಯ ಉದ್ಯೋಗಿಗಳನ್ನು ಮತ್ತು ಸೃಜನಶೀಲ ಜಗತ್ತಿನ ತಂಡವನ್ನು ಅವರು ಒಂದು ಕುಟುಂಬದಂತೆ ಪ್ರೀತಿಸುತ್ತಿದ್ದರು. ಅವರ ವ್ಯಕ್ತಿತ್ವವು ಜೈನ ಧರ್ಮದ ಅಹಿಂಸೆ, ಸತ್ಯ ಮತ್ತು ಶ್ರಮದ ತಳಹದಿಯ ಮೇಲೆ ನಿರ್ಮಾಣವಾಗಿತ್ತು. ಇವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಸಿಗಲಿ ಇವರ ಅಗಲುವಿಕೆ ಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಮೃತರ ತಂದೆ-ತಾಯಿ, ಪತ್ನಿಗೆ ಸಿಗಲಿ ಎಂದು ಶ್ರೀ ಜಿನೇಂದ್ರ ಭಗವಂತರಲ್ಲಿ ಪ್ರಾರ್ಥಿಸುವುದಾಗಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇದರ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಜಿನೇಂದ್ರ ಸ್ಮರಣೆಗಳೊಂದಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ವೃತ್ತಿಜೀವನದ ಪಯಣ: ಅಸಾಧಾರಣ ಕ್ರಾಂತಿ:
1990ರ ದಶಕದ ಮಧ್ಯಭಾಗದಲ್ಲಿ ಹವಾಸ್ ಸಂಸ್ಥೆಯಲ್ಲಿ ಕ್ಲೈಂಟ್ ಸರ್ವಿಸಸ್ ಡೈರೆಕ್ಟರ್ ಆಗಿ ವೃತ್ತಿ ಬದುಕಿನ ಮೆಟ್ಟಿಲು ಏರಿದ ಅತುಲ್ ಹೆಗ್ಡೆ, ತಮ್ಮ ಚುರುಕುತನದಿಂದ ಶೀಘ್ರವೇ ಉನ್ನತ ಸ್ಥಾನಗಳನ್ನು ಅಲಂಕರಿಸಿದರು. 2003ರಲ್ಲಿ ವ್ಯಾಸ್ ಜಿಯಾನೆಟ್ಟಿ ಕ್ರಿಯೇಟಿವ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಗಿ ಸೇವೆ ಸಲ್ಲಿಸಿದರು. 2008ರಲ್ಲಿ ಇಗ್ನೈಟಿ ಡಿಜಿಟಲ್ ಸರ್ವಿಸಸ್‍ನ ಸಿಇಒ ಆಗಿ, ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್‍ನ ಆರಂಭಿಕ ಹಂತದ ಕ್ರಾಂತಿಯ ನೇತೃತ್ವ ವಹಿಸಿದರು. 2015ರಲ್ಲಿ ಸುಧೀರ್ ಮೆನನ್ ಅವರೊಂದಿಗೆ ಸೇರಿ ರೈನ್ ಮೇಕರ್ ವೆಂಚರ್ಸ್ ಅನ್ನು ಸ್ಥಾಪಿಸಿ, ತಂತ್ರಜ್ಞಾನ ಆಧಾರಿತ ಹೂಡಿಕೆಯಲ್ಲಿ ಹೊಸ ಆಯಾಮ ಸೃಷ್ಟಿಸಿದರು.

ಯಾಪ್ ಸಂಸ್ಥೆಯ ಮೂಲಕ ಹೊಸ ಇತಿಹಾಸ:
2016ರಲ್ಲಿ ಸ್ಥಾಪನೆಗೊಂಡ ‘ಯಾಪ್’ ಸಂಸ್ಥೆಯು ಅತುಲ್ ಹೆಗ್ಡೆ ಅವರ ದೂರದೃಷ್ಟಿಯ ಫಲಶ್ರುತಿ. ಡಿಸೈನ್, ಕಂಟೆಂಟ್ ಮತ್ತು ಮೀಡಿಯಾ ಡಿಸ್ಟ್ರಿಬ್ಯೂಷನ್ ಅನ್ನು ಒಂದೇ ಸೂರಿನಡಿ ತರುವ ಅವರ ಕಲ್ಪನೆ ಅದ್ಭುತವಾಗಿ ಸಾಕಾರಗೊಂಡಿತು. ಮಾರುತಿ ಸುಜುಕಿ, ಐಟಿಸಿ, ಆಪಲ್, ಅದಾನಿ, ದುಬೈ ಟೂರಿಸಂ ಮತ್ತು ಎಸ್‍ಬಿಐ ಕಾರ್ಡ್ಸ್‍ನಂತಹ ದೈತ್ಯ ಸಂಸ್ಥೆಗಳನ್ನು ಗ್ರಾಹಕರನ್ನಾಗಿ ಹೊಂದಿದ್ದ ಯಾಪ್, ಭಾರತ, ಸಿಂಗಾಪುರ ಮತ್ತು ಯುಎಇಯಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿತು. ಆರ್ಥಿಕ ವರ್ಷ 2026ರಲ್ಲಿ ಯಾಪ್ ಸಂಸ್ಥೆಯು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್‍ನಲ್ಲಿ ಪಟ್ಟಿಗೊಂಡು, ಭಾರತದ ಮೊದಲ ಸ್ವತಂತ್ರ ಡಿಜಿಟಲ್ ಏಜೆನ್ಸಿ ನೆಟ್‍ವರ್ಕ್ ಆಗಿ ಐಪಿಒ ಮೂಲಕ ಸಾರ್ವಜನಿಕವಾಯಿತು. ಗೋಜೂಪ್ ಗ್ರೂಪ್ ಸ್ವಾಧೀನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿನ ಅವರ ಹೂಡಿಕೆಗಳು ಅವರ ಭವಿಷ್ಯದ ದೃಷ್ಟಿಕೋನಕ್ಕೆ ಸಾಕ್ಷಿಯಾದವು.

ವ್ಯಕ್ತಿತ್ವ ಮತ್ತು ಕೊನೆಯ ಸಂದೇಶ:
ಅತುಲ್ ಹೆಗ್ಡೆ ಅವರು ಕೇವಲ ಕಾರ್ಪೊರೇಟ್ ಜಗತ್ತಿನ ನಾಯಕರಾಗಿರಲಿಲ್ಲ; ಅವರು ಸ್ನೀಕರ್ಸ್ ಸಂಸ್ಕೃತಿ ಮತ್ತು ಸಮಕಾಲೀನ ಕಲೆಗಳ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಅವರ ಸಾರ್ವಜನಿಕ ವ್ಯಕ್ತಿತ್ವದಲ್ಲಿ ಒಂದು ವಿಶಿಷ್ಟ ಶೈಲಿ ಇತ್ತು, ಅದು ಅವರನ್ನು ಇತರರಿಗಿಂತ ಭಿನ್ನವಾಗಿ ನಿಲ್ಲಿಸುತ್ತಿತ್ತು. ನಿಧನಕ್ಕೆ ಎರಡು ವಾರಗಳ ಮೊದಲು ಲಿಂಕ್ಡ್‍ಇನ್‍ನಲ್ಲಿ ಅವರು ಹಂಚಿಕೊಂಡ ಸಾಲುಗಳು ಇಂದಿಗೂ ಅವರ ಸಾಧನೆಯ ತೀವ್ರತೆಯನ್ನು ಸಾರುತ್ತವೆ: *”ವ್ಯವಹಾರದಲ್ಲಿ ಕೆಲವು ವರ್ಷಗಳು ಸಂಖ್ಯೆಗಳನ್ನು ಬದಲಾಯಿಸುತ್ತವೆ, ಆದರೆ ಕೆಲವು ವರ್ಷಗಳು ನಿಮ್ಮ ಕಥೆಯನ್ನೇ ಬದಲಾಯಿಸುತ್ತವೆ. ಆರ್ಥಿಕ ವರ್ಷ 2026 ನಮಗೆ ಅಂತಹ ಬದಲಾವಣೆಯ ವರ್ಷವಾಗಿತ್ತು. ಶ್ರೀ ರಾಜ್ ನಾಯಕ್ ಅವರನ್ನು ತಮ್ಮ ಮಾರ್ಗದರ್ಶಕ ಎಂದು ಗೌರವಿಸಿದ ಅವರ ವಿನಮ್ರತೆ, ಅವರ ಉನ್ನತ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.

ಆಸ್ತಿ ಮತ್ತು ಸಂಪತ್ತಿನ ವಾಸ್ತವ:
ಅತುಲ್ ಹೆಗ್ಡೆ ಅವರ ಆರ್ಥಿಕ ಮೌಲ್ಯದ ಕುರಿತಂತೆ ಹರಿದಾಡುತ್ತಿರುವ ಆರು ಸಾವಿರ ಕೋಟಿ ರೂ.ಗಳ ಅಂಕಿಅಂಶವು ಯಾವುದೇ ವಾಸ್ತವಿಕ ಆಧಾರಗಳನ್ನು ಹೊಂದಿಲ್ಲ. ಮಾರುಕಟ್ಟೆಯ ವಿಶ್ಲೇಷಣೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಆರ್ಥಿಕ ದತ್ತಾಂಶಗಳ ಪ್ರಕಾರ, ಯಾಪ್ ಡಿಜಿಟಲ್ ಸಂಸ್ಥೆಯ ಒಟ್ಟು ಮಾರುಕಟ್ಟೆ ಬಂಡವಾಳವು ಸುಮಾರು 400 ಕೋಟಿಗಳ ವ್ಯಾಪ್ತಿಯಲ್ಲಿದೆ. ಅತುಲ್ ಅವರು ಕಂಪನಿಯಲ್ಲಿ ಪಾಲನ್ನು ಹೊಂದಿದ್ದರು. ಈ ಷೇರು ಬಂಡವಾಳದ ಮೌಲ್ಯವನ್ನು ಲೆಕ್ಕಹಾಕಿದಾಗ, ಅವರ ವೈಯಕ್ತಿಕ ಆಸ್ತಿಯು ಸಂಸ್ಥೆಯ ಷೇರು ಮೌಲ್ಯದ ಆಧಾರದ ಮೇಲೆ ಕೆಲವು ಕೋಟಿಗಳಲ್ಲಿ ಇರುತ್ತದೆಯೇ ಹೊರತು, ಆರು ಸಾವಿರ ಕೋಟಿ ರೂ.ಗಳಲ್ಲ.

ಅತುಲ್ ಹೆಗ್ಡೆ ಅವರು ಕೇವಲ ಹಣದ ಅಳತೆಯಿಂದ ಅಳೆಯಲಾಗದಷ್ಟು ದೊಡ್ಡ ಸಾಧಕರು. ಅವರ ಅಪ್ಪಟ ಶ್ರೀಮಂತಿಕೆ ಇರುವುದು ಅವರು ಸೃಷ್ಟಿಸಿದ ಸಂಸ್ಥೆಯ ಬೌದ್ಧಿಕ ಸಂಪತ್ತು, ದೂರದೃಷ್ಟಿ ಮತ್ತು ಅವರು ಡಿಜಿಟಲ್ ಮಾರ್ಕೆಟಿಂಗ್ ರಂಗದಲ್ಲಿ ಹಾಕಿಕೊಟ್ಟ ಹೊಸ ಹಾದಿಯಲ್ಲಿ. ಅತುಲ್ ಎಲ್ಲರನ್ನು ಅಗಲಿದ್ದರೂ, ಅವರು ಹಾಕಿಕೊಟ್ಟ ದಾರಿ ಮತ್ತು ರೂಪಿಸಿದ ಸೃಜನಶೀಲ ಸಂಸ್ಥೆಗಳು ಭಾರತದ ಡಿಜಿಟಲ್ ಇತಿಹಾಸದಲ್ಲಿ ಅತುಲ್ ಹೆಗ್ಡೆ ಅವರ ಹೆಸರನ್ನು ಶಾಶ್ವತವಾಗಿ ಉಳಿಸುತ್ತವೆ ಎಂದು ಅವರ ಮಿತ್ರವೃಂದ ತಿಳಿಸಿದೆ.

Leave a Reply

Your email address will not be published. Required fields are marked *